ರಾಜಕಾರಣದಲ್ಲಿ ತನ್ನ ಇರುವಿಕೆ ತೋರಿಸುವ ಸಲುವಾಗಿ ಹುರುಳಿಲ್ಲದ ಹಾಗೂ ಶಾಸಕ ನರೇಂದ್ರಸ್ವಾಮಿ ಕುಟುಂಬದವರ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡುವ ಚಾಳಿಯನ್ನು ಮಾಜಿ ಶಾಸಕ ಅನ್ನದಾನಿ ಬಿಡಬೇಕೆಂದು ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಪಿ ರಾಜು, ದೊಡ್ಡಯ್ಯ, ಮಾಜಿ ಅಧ್ಯಕ್ಷ ದೇವರಾಜು, ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಮತ್ತಿತರರು ಅನ್ನದಾನಿ ವಿರುದ್ದ ಹರಿಹಾಯ್ದರು.

ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಸಚಿವ ಸಂಪುಟ ಸ್ಥಾನ ಹೊಂದಿರುವ ಶಾಸಕರಿಗೆ ನಿಯಮಾವಳಿ ಪ್ರಕಾರ ಬೆಂಗಾವಲು ನೀಡುವ ಪೊಲೀಸ್ ಅಧಿಕಾರಿಗಳನ್ನು ಟೀಕಿಸಿರುವ ಮಾಜಿ ಶಾಸಕರ ನಡೆ ಬಾಲಿಶವಾಗಿದ್ದು, ಇದು ಪೊಲೀಸ್ ಅಧಿಕಾರಿಗಳನ್ನು ಅವಮಾನಿಸುವ ನಡೆ ಎಂದು ಕಿಡಿಕಾರಿದರು.
ಅನ್ನದಾನಿ ಅವಧಿಯಲ್ಲಿ ಅವೈಜ್ಞಾನಿಕವಾಗಿ ಹಂಚಿಕೆ ಮಾಡಿದ್ದ ಆಶ್ರಯ ಬಡಾವಣೆಯನ್ನು ಈಗ ವೈಜ್ಞಾನಿಕ ವಾಗಿ ನಿರ್ಮಿಸಿ ಸೈಟ್ ಹಂಚಿಕೆ ಮಾಡಲಾಗುತ್ತಿದೆ, ಕನಕಭವನ ಪೂರ್ಣಗೊಳಿಸಲು ಶಾಸಕರು ಮುಂದಾಗಿದ್ದಾರೆ, ಜೊತೆಗೆ ಇಡೀ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ, ಇದೆಲ್ಲವನ್ನೂ ನೋಡುತ್ತ ಇನ್ನೂ ಮೂರು ವರ್ಷ ತೆಪ್ಪಗಿರಲಿ ಎಂದು ತಾಕೀತು ಮಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ್ ಪೂರಿಗಾಲಿ ಹನಿ ನೀರಾವರಿ ಯೋಜನೆ ವ್ಯಾಪ್ತಿಯ ರೈತರು ಸಹಕಾರ ಕಾಯ್ದೆಯಂತೆ ಸಹಕಾರ ಸಂಘಗಳನ್ನು ರಚಿಸಿ ಕೊಂಡು ಆ ಮೂಲಕ ಸಾಮೂಹಿಕ ಬೆಳೆ ಪದ್ದತಿ ಮೂಲಕ ಯಾಂತ್ರಿಕ ಕೃಷಿ ಮಾಡಲು ಹೊರಟಿರುವ ರೈತರಿಗೆ ಷೇರುದಾರರಾಗಬೇಡಿ ಎಂದು ಎಂದು ಅನ್ನದಾನಿ ಹೇಳಿರುವುದ ಅತ್ಯಂತ ಬೇಜವಾಬ್ದಾರಿ ಹಾಗೂ ರೈತರನ್ನು ದಿಕ್ಕು ತಪ್ಪಿಸುವ ನಡೆಯಾಗಿದೆ ಎಂದು ಖಂಡಿಸಿದರು.
ಈ ಮನ್ ಮುಲ್ ಉಪಾಧ್ಯಕ್ಷ ಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಚೌಡಯ್ಯ ನಿರ್ದೇಶಕ ಲಿಂಗರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಕೆಡಿಪಿ ಸದಸ್ಯ ಶಶಿ, ಮುಖಂಡರಾದ ಕಿರಣ್ ಶಂಕರ್, ಶಿವಮಾದೇಗೌಡ, ಅಯ್ಯೂಬ್ ಪಾಷಾ, ಕೃಷ್ಣಮೂರ್ತಿ ಮತ್ತಿತರರಿದ್ದರು.




