ನಾಡು ಕಂಡ ಶ್ರೇಷ್ಠ ರಾಜಕಾರಣಿ ಸಿದ್ದರಾಮಯ್ಯ ಅವರ 75 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಜನರಿಗೆ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕಾವೇರಿ ಕೊಳ್ಳದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ. ಈ ಮೂಲಕ ಘನ ನಾಯಕರ ಕಾರ್ಯಕ್ರಮಕ್ಕೆ ಬಲ ತುಂಬಬೇಕಿದೆ ಎಂದರು.
ಜನಪರ ರಾಜಕಾರಣಿ ಸಿದ್ದರಾಮಯ್ಯ ಅವರು ಅತ್ಯಂತ ಕಡುಬಡತನವನ್ನು ಸನಿಹದಿಂದ ಕಂಡಿದ್ದಾರೆ. ಸಿದ್ಧರಾಮಯ್ಯನವರು ಒಬ್ಬ ರೈತನ ಮಗನಾಗಿ ಹಾಗೂ ಸ್ವತಃ ರೈತರಾಗಿ ತಾಲ್ಲೂಕು ಪಂಚಾಯಿತಿ ಸದಸ್ಯತ್ವ ಸ್ಥಾನದಿಂದ ಹಿಡಿದು, ರಾಜ್ಯದ ಹದಿಮೂರು ಆಯವ್ಯಯಗಳನ್ನು ಮಂಡಿಸುವರೆಗೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಶೋಷಿತರ, ಬಡವರ, ದೀನ-ದಲಿತರ ಅಭ್ಯುದಯಕ್ಕಾಗಿ ಹತ್ತು ಹಲವು ಭಾಗ್ಯದ ಯೋಜನೆಗಳನ್ನು ಪೋಷಿಸಿ, ಜಾರಿಗೊಳಿಸಿದ ಕೀರ್ತಿ ಸನ್ಮಾನ್ಯ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತಹ ನೂರಾ ಅರವತ್ತಕ್ಕೂ ಹೆಚ್ಚು ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿರುವ ಸನ್ಮಾನ್ಯ ಸಿದ್ಧರಾಮಯ್ಯನವರು ಒಬ್ಬ ಯಶಸ್ವಿ ಆಡಳಿತಗಾರ ಮತ್ತು ಯಶಸ್ವಿ ಆರ್ಥಿಕ ತಜ್ಞರು ಆಗಿದ್ದಾರೆ.
ಜನಪರ ಕಲ್ಯಾಣ ಕಾರ್ಯಕ್ರಮಗಳ ರೂವಾರಿಗಳು, ಬಡವರ ಮತ್ತು ಮಧ್ಯಮ ವರ್ಗದವರ ಅನ್ನದಾತರಾಗಿ ಇಂದಿರಾ ಕ್ಯಾಂಟೀನ್ ಅನ್ನು ಪ್ರಾರಂಭಿಸಿದ ನಾಯಕರಾಗಿದ್ದಾರೆ. ಇದರಿಂದ ಅದೆಷ್ಟೋ ಬಡ ಜನರಿಗೆ ಅನುಕೂಲವಾಗಿದೆ ಎಂದು ಶಾಸಕರು ತಿಳಿಸಿದರು.
ಹಿಂದುಳಿದವರಿಗೆ, ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಆರ್ಥಿಕ ಶಕ್ತಿಯ ಮುಖಾಂತರ ಸಮಾಜದ ಮುಖ್ಯವಾಹಿನಿಗೆ ತರಲು ಒಂದು ಸಂಕಲ್ಪ ಚಿಂತನೆ ಹೊಂದಿರುವ ಆಡಳಿತಗಾರ.
ಇದೇ ಆಗಸ್ಟ್ 3ಕ್ಕೆ 75ನೇ ವರ್ಷಕ್ಕೆ ಕಾಲಿಡುತ್ತಿರುವ ಸಿದ್ಧರಾಮಯ್ಯನವರ ಅಮೃತ ಮಹೋತ್ಸವವನ್ನು ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು, ಅಭಿಮಾನಿಗಳು ಮತ್ತು ಹಿತೈಷಿಗಳೆಲ್ಲ ಒಟ್ಟಾಗಿ ಸೇರಿ ದಾವಣೆಗೆರೆಯಲ್ಲಿ ಆಚರಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಕಾರ್ಯಕ್ರಮದಲ್ಲಿ ನಾವೆಲ್ಲರೂ ಕೂಡಾ ಭಾಗಿದಾರರಾಗೋಣ ಎಂದು ಮನವಿ ಮಾಡಿದರು.




