ಮಂಡ್ಯದಲ್ಲಿ ನಡೆದ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದಿರುವ ಭ್ರಷ್ಟಚಾರದ ಕುರಿತು ಅಗತ್ಯ ತನಿಖೆ ನಡೆಸುವಂತೆ ಭಾರೀ ಕೈಗಾರಿಕ ಸಚಿವ ಎಂ.ಬಿ.ಪಾಟೀಲರಿಗೆ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಸೇರಿದಂತೆ ಕನ್ನಡ ಪರ ಸಂಘಟನೆಯ ಹಲವರು ಮನವಿ ಸಲ್ಲಿಸಿದರು.
ಬೆಂಗಳೂರಿನ ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನ ಬಹುಕೋಟಿ ಹಗರಣ ಎಂಬಂತಾಗಿದೆ. ಈ ಹಗರಣದಲ್ಲಿ ಭಾಗೀಯಾಗಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಬೇಕು ಎಂದು ಕೋರಿದರು.

ಮಂಡ್ಯದಲ್ಲಿ ನಡೆದ ೮೭ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಈಗಾಗಲೇ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯಲ್ಲಿ ಬಯಲಾಗಿದೆ.ಈ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕರ್ನಾಟಕ ಸ್ಟೇಟ್ಸ್ ಮಾರ್ಕೆಟಿಂಗ್ ಅಂಡ್ ಅಡ್ವೈಟೈಸ್ ಲಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಅತಿಕುಲ್ಲಾ ಷರೀಫ್ ಈಗಾಗಲೇ ವರ್ಗಾವಣೆ ಆದೇಶ ಹೊರಟಿದ್ದರು ಅದಿನ್ನೂ ಜಾರಿಗೊಳಿಸದೆ ಇನ್ನಷ್ಟು ಭ್ರಷ್ಟಚಾರ ಎಸಗಲು ಅವಕಾಶ ಮಾಡಿಕೊಡಲಾಗಿದೆ. ತಾವುಗಳು ಈ ಬಗ್ಗೆ ಅಗತ್ಯ ಕ್ರಮವಹಿಸಿ ಸದರಿ ಅಧಿಕಾರಿಯ ವರ್ಗಾವಣೆಯಾಗಿರುವ ಹುದ್ದೆಗೆ ನಿಯೋಜಿಸುವಂತೆ ಕೋರಿದರು.
ಸದರಿಯವರನ್ನು ಈಗಾಗಲೇ ಕರಕುಶಲ ಅಭಿವೃದ್ಧಿ ನಿಗಮದ ಜಂಟೀ ನಿರ್ದೇಶಕರಾಗಿ ವರ್ಗಾಯಿಸಿ ಆದೇಶ ಮಾಡಲಾಗಿದೆ. ಆದಾಗಿಯೂ ತಮ್ಮ ಭ್ರಷ್ಟಾಚಾರವನ್ನು ಮುಂದುವರೆಸುವ ಸಲುವಾಗಿ ಎಂಸಿಎ ಅಧ್ಯಕ್ಷ ಶಾಸಕ ಸತೀಶ್ ಸ್ಮೈಲ್ ರವರ ಕುಮ್ಮಕ್ಕಿನೊಂದಿಗೆ ಎಂಸಿಎ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲೆ ಮುಂದುವರಿಸಿ ವರ್ಗಾವಣೆ ಆದೇಶವನ್ನು ಧಿಕ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಯ ವರ್ಗಾವಣೆ ಆದೇಶವನ್ನು ಜಾರಿಗೊಳಿಸಿ ಸಾಹಿತ್ಯ ಸಮ್ಮೇಳನದ ಭ್ರಷ್ಟಚಾರದ ಕುರಿತು ಅಗತ್ಯ ತನಿಖೆ ಎರ್ಪಾಡು ಮಾಡಬೇಕು ಎಂದು ಒತ್ತಾಯಿಸಿದರು.
ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಸೇವೆಯನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ದೊರಕಿಸುವ ಸಲುವಾಗಿ ಎಂಸಿಎ ಸ್ಥಾಪಿಸಲಾಗಿದೆ. ಅದಕ್ಕಾಗಿಯೆ ಎಂಸಿಎಗೆ ಸೇವಾ ಶುಲ್ಕವನ್ನು ನೀಡಲಾಗುತ್ತಿದೆ. ಆದರೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಸೇವೆ ಒದಗಿಸುವುದಾದರೆ ಎಂಸಿಎ ಸ್ಥಾಪನೆಯ ಉದ್ದೇಶವೆ ನಿರರ್ಥಕವಾದಂತೆಯೆ ಸರಿ.ಆದ್ದರಿಂದ ೮೭ ಸಾಹಿತ್ಯ ಸಮ್ಮೇಳನದಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಯ ಭಾಗವಾಗಿ ಈ ಎಲ್ಲ ಕ್ರಮಗಳನ್ನು ಜರೂರಾಗಿ ತೆಗೆದುಕೊಳ್ಳುವಂತೆ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವ ಎಂ.ಬಿ.ಪಾಟೀಲ್ ಈ ಕುರಿತು ಅಗತ್ಯ ತನಿಖೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಆದೇಶ ಮಾಡುವುದಾಗಿ ತಿಳಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕರುನಾಡ ಸೇವಕರು ಸಂಘಟನೆಯ ಮಾದೇಶ್ ಗೌಡ, ಪ್ರುಭು, ಎಚ್ ಡಿ ಜಯರಾಂ ಇದ್ದರು.




