ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ಮೂರುವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಮಂಡ್ಯ 2ನೇ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಶಿವಣ್ಣ ಬಿನ್ ಲೇಟ್ ಚಿಕ್ಕಣ್ಣ (59 ವರ್ಷ) ಜೀವಾವಧಿ ಶಿಕ್ಷೆಗೆ ಗುರಿಯಾದವನು.
ಏನಿದು ಘಟನೆ ?
ಡಿಸೆಂಬರ್ 11, 2023 ರಂದು ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ತನ್ನ ಮನೆಯ ಮುಂದೆ ಬಾಲಕಿ ಆಟವಾಡುತ್ತಿದ್ದಾಗ ಆರೋಪಿಯು ಬಾಲಕಿಯನ್ನು ಪುಸಲಾಯಿಸಿಕೊಂಡು ಪಕ್ಕದಲ್ಲೇ ಇರುವ ತನ್ನ ಮನೆಗೆ ಕರೆದುಕೊಂಡು ಹೋಗಿ ಮಗುವಿನ ಬಟ್ಟೆಗಳನ್ನು ಬಿಚ್ಚಿ ಬೆತ್ತಲು ಮಾಡಿ, ತಾನು ಸಹ ಬೆತ್ತಲಾಗಿ, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಅಮ್ಮನಿಗೆ ಹೇಳಬಾರದೆಂದು ಬೆದರಿಕೆ ಹಾಕಿದ್ದ.
ನಂತರ ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ 2012 ರ ಅಡಿಯಲ್ಲಿ ದೂರು ದಾಖಲಾಗಿತ್ತು. ಅಂದಿನ ಪಿ.ಎಸ್.ಐ ಬಸವರಾಜು ಅವರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಈ ಹಿಂದೆ ಕೆ.ಆರ್.ಸಾಗರ ವೃತ್ತ ನಿರೀಕ್ಷಕರಾಗಿದ್ದ ಪುನೀತ್ ಟಿ.ಎಂ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕೆ.ಆರ್.ಸಾಗರ ಠಾಣೆಯ ಪಿ.ಎಸ್.ಐ ರಮೇಶ್ ಕರಕೀಕಟ್ಟಿ ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ಸತೀಶ್, ಹೆಚ್.ಸಿ. ಯವರಾದ ಯಧುರಾಜ್, ಸಿ.ಪಿ.ಸಿಯವರಾದ ರೇಣುಕುಮಾರ್, ಅಶ್ವಿನಿ, ಪುಟ್ಟಲಕ್ಷ್ಮಿ ಅವರು ಈ ತನಿಖಾ ತಂಡದಲ್ಲಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ದಿಲೀಪ್ ಕುಮಾರ್ ಅವರು ಇಂದು (ಜೂ11) ಆರೋಪಿಗೆ ಜೀವಿತಾವಧಿ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಬ್ಬಕವಾಡಿ ನಾಗರಾಜು ಅವರು ಸಂತ್ರಸ್ಥರ ಪರ ವಾದ ಮಂಡಿಸಿದ್ದರು.
ಕೆ.ಆರ್.ಸಾಗರ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




