- ಅರವಿಂದ ಪ್ರಭು, ಚಿತ್ರಕೂಟ

ಕಳೆದ ಭಾನುವಾರ ಮಂಡ್ಯದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ‘ನಾ ಮಂಕ’ ತಂಡ ಆಯೋಜಿಸಿ ಹೆಗ್ಗೋಡಿನ ಸತ್ಯಶೋಧನಾ ರಂಗ ಸಮುದಾಯದ ಕಲಾವಿದರು ಪ್ರಸ್ತುತ ಪಡಿಸಿದ ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಮೃಗ’ ಮತ್ತು ಭಾನು ಮುಷ್ತಾಕರ ‘ಎದೆಯ ಹಣತೆ’ ನಾಟಕಗಳು ಮಂಡ್ಯ ನೆಲದಲ್ಲಿ ರಾಜಕಾರಣಿಗಳು ಮತ್ತು ಶ್ರೀಮಂತರ ಹಣದ ಹಂಗಿಲ್ಲದೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸುವ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದವು.
ಅದೊಂದು ನೈಜ ರಂಗಾಸಕ್ತರೇ ಆಯೋಜಿಸಿದ್ದ ಅರ್ಥಪೂರ್ಣ ಕಾರ್ಯಕ್ರಮ. ಅಲ್ಲಿ ವೇದಿಕೆ ಇರಲಿಲ್ಲ, ಕಪಟ ರಾಜಕಾರಣಿ, ಭ್ರಷ್ಟಾಚಾರ ಎಸಗುವ ಸರ್ಕಾರಿ ಅಧಿಕಾರಿ, ಜಾತೀಯತೆ ಪೋಷಿಸುವ ಧರ್ಮಗುರು ಯಾರೊಬ್ಬರಿಗೂ ಜಾಗವಿರಲಿಲ್ಲ. ಪ್ರೇಕ್ಷಕರಿಗೆ ಬೋರ್ ಹೊಡೆಸುವ ದೊಡ್ಡ ದೊಡ್ಡ ಭಾಷಣಕೋರರನ್ನು ಮುಂಜಾಗ್ರತೆಯಿಂದ ನಿಷೇಧಿಸಲಾಗಿತ್ತು. ಮೊದಲಿಗೆ ರಂಗಕರ್ಮಿ ಶಶಿ ಅಪೂರ್ವ ಪ್ರೇಕ್ಷಕರನ್ನು ಸ್ವಾಗತಿಸಿದರು. ನಂತರ ಆಯೋಜಕರ ಪರವಾಗಿ ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ನ ವಿನಯ್ ಕುಮಾರ್ ವಿವೇಕಾನಂದ ರಂಗಮಂದಿರ ಕಟ್ಡಿದ ಕೆ.ವಿ.ಶಂಕರಗೌಡರಿಗೆ ಈ ಎರಡು ನಾಟಕಗಳನ್ನು ಸಮರ್ಪಿಸುತ್ತಿದ್ದೇವೆ. ಇಲ್ಲಿಗೆ ನಮ್ಮ ಮಾತು ಮುಗಿಯಿತು. ಈಗ ನಾಟಕ ಆರಂಭವಾಗಲಿದೆ ಎಂದರು.
ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿದ ನಾಟಕ
2025ನೇ ಸಾಲಿನ ಬೂಕರ್ ಪ್ರಶಸ್ತಿ ಪಡೆದ ‘ಎದೆಯ ಹಣತೆ’ ಅದ್ಭುತವಾದ ಕಥೆ. ಈ ಕಥೆ ಪ್ರತಿಯೊಬ್ಬರ ಜೀವನದಲ್ಲೂ ಇರುವಂಥದ್ದೇ ಆದರೆ, ಯಾರೂ ಕೂಡ ತಪ್ಪನ್ನು ತಪ್ಪು ಎಂದು ಹೇಳುವ ದೈರ್ಯ ಮಾಡುತ್ತಿಲ್ಲ. ಭಾನುವಾರ ನಾಟಕ ನಡೆಯುವಾಗ ಚಪ್ಪಾಳೆಗಳ ಮೇಲೆ ಚಪ್ಪಾಳೆಗಳು ಬರುತ್ತಿದ್ದವು. ಆದರೆ ಯಾರೊಬ್ಬರಿಗೂ ಒಂದು ಹೆಣ್ಣಿನ ಜೀವನ ಯಾಕೆ ಇಷ್ಟು ಪಾಡು ಪಡಬೇಕು? ಇನ್ನೂ ಯಾಕೆ ಇಷ್ಟೊಂದು ಕಷ್ಟ ಪಡುತ್ತಿದ್ದಾಳೆ? ಎನ್ನುವ ಒಂದು ಯೋಚನೆ ಇದ್ದದ್ದನ್ನು ನಾನು ಗಮನಿಸಲಿಲ್ಲ. ನಮ್ಮ ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದ ಮಹಾನೀಯರೊಬ್ಬರು ಅಯ್ಯೋ, ಛೇ….. ಛೇ….. ಎಂದು 50 ನಿಮಿಷದ ನಾಟಕದಲ್ಲಿ ಒಂದು 30 ಬಾರಿ ಹೇಳಿದರೇನೋ ಆದರೆ ಅಷ್ಟೂ ಛೇ…. ಗಳಲ್ಲಿ ಒಂದು ಛೇ ಕೂಡ ನಿಜ ಜೀವನದಲ್ಲಿ ಕಂಡು ಬರುವುದಿಲ್ಲ. ಹೊರಗಿನ ಪ್ರಪಂಚದಲ್ಲಿ ದಿನ ನಿತ್ಯ ಸಂಚರಿಸುವ ನನಗೆ ಇದೆಲ್ಲವೂ ಸಾಮಾನ್ಯವಾಗಿದೆ, ಹೆಣ್ಣು ಮಕ್ಕಳು ಸತ್ಯ ಹೇಳುವ ಧೈರ್ಯ ಮಾಡದೇ ಇರಲು ಪುರುಷರಷ್ಟೇ ಅಲ್ಲ ಮಹಿಳೆಯರು ಕೂಡ ನೇರ ಕಾರಣರಾಗಿದ್ದಾರೆ, ಗಂಡಸರು ತಪ್ಪು ಮಾಡಿದರೆ ಗಂಡಲ್ಲವಾ ಏನೋ ಆಗಿದೆ ಕಾಲು ತೊಳೆದು ಒಳಗೆ ಹೋದರಾಯಿತು ಎಂದೆನ್ನುವ ಸಮಾಜ ಹೆಣ್ಣು ತಪ್ಪು ಮಾಡಲ್ಲ ಅಂತ ಹೇಳಿಲ್ಲ, ಆದರೆ ತಪ್ಪೇ ಮಾಡದಿದ್ದರು ತಪ್ಪಿತಸ್ಥೆಯ ಜಾಗದಲ್ಲಿ ನಿಲ್ಲಿಸಿ ನೋಡುತ್ತದೆ. ಏನೇ ಆಗಲಿ ಸ್ವಾಭಿಮಾನದಿಂದ ಬದುಕುವ ಹಕ್ಕು ಗಂಡಿಗೆ ಮಾತ್ರವಲ್ಲ ಹೆಣ್ಣಿಗೂ ಕೂಡ ಇದೆ. ಇದನ್ನೇ ‘ಎದೆಯ ಹಣತೆ’ ಧ್ವನಿಸುತ್ತದೆ. ಮೊಬೈಲ್ ಮಾಯೆಯಿಂದ ಮಕ್ಕಳನ್ನು ಹೊರತರಬೇಕೆನ್ನುವ ಪೋಷಕರು ಮೊದಲು ಇಂಥ ಸದಭಿರುಚಿಯ ನಾಟಕಗಳನ್ನು ಕುಟುಂಬ ಸಮೇತವಾಗಿ ನೋಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.
-ಪಿ.ದಿವ್ಯಾ
ಲೆಕ್ಕಪರಿಶೋಧಕಿ, ಮಂಡ್ಯ
ಅರುಣೋದಯ ಕಲಾತಂಡದ ಮಂಜುಳಾ ಮತ್ತು ಅರ್ಪಿತಾ ಎದೆಯ ಹಣತೆಯನ್ನು ರಂಗಮಂದಿರದ ಮೇಲೆ ಬೆಳಗಿಸಿದರು. ಅಲ್ಲಿ ಹಾರ, ತುರಾಯಿ ಸನ್ಮಾನಗಳಿರಲಿಲ್ಲ ಪರಿವರ್ತನಾ ಸಂಸ್ಥೆಯ ಟಿ.ಡಿ.ನಾಗರಾಜು ಇತರ ಆಯೋಜಕರಿಗೆ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ಇದೆಲ್ಲವೂ 15 ನಿಮಿಷಗಳಲ್ಲಿ ಮುಗಿಯಿತು. ನಿಗಧಿಯಂತೆ ಸರಿಯಾಗಿ ಏಳು ಗಂಟೆಗೆ ಮಾಯಾಮೃಗ ನಾಟಕ ಆರಂಭವಾಯಿತು. ಅಷ್ಟರಲ್ಲಿ ರಂಗಮಂದಿರ ತುಂಬಿದೆ ಎಂಬ ಫಲಕವನ್ನು ಮುಖ್ಯದ್ವಾರದಲ್ಲಿ ಹಾಕಲಾಯಿತು. ಆದರೂ ಜನ ಬರುವುದು ಕಡಿಮೆಯಾಗಲಿಲ್ಲ. ಅಯ್ಯೋ ನಾಟಕ ಆರಂಭವಾಗಿಬಿಟ್ಟಿತೆ ಎಂದು ಕುಟುಂಬ ಸಮೇತರಾಗಿ ಕೆಲವರು ಓಡಿ ಓಡಿ ಬಂದು ನಮ್ಮನ್ನು ಸೇರಿಕೊಳ್ಳ ತೊಡಗಿದರು. ಕುರ್ಚಿಗಳಿಲ್ಲದೆ 50ಕ್ಕೂ ಹೆಚ್ಚು ಮಂದಿ ನಿಂತೇ ನೋಡುತ್ತಿದ್ದರು. ಕೆಲವರು ತಾವು ಕುಳಿತ ಚೇರುಗಳನ್ನು ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ ಬಿಟ್ಟುಕೊಟ್ಟು ಮೆಟ್ಟಿಲುಗಳ ಮೇಲೆ ಕುಳಿತು ನಾಟಕ ಆಸ್ವಾದಿಸಿದರು. ಮಾಯಾಮೃಗ ‘ಭೂತವಿಲ್ಲ… ಪಿಶಾಚಿಯಿಲ್ಲ…’ ಎಂಬ ವೈಜ್ಞಾನಿಕ ಸತ್ಯವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಿಳಿಸಿತು. ಮೊದಲ ನಾಟಕ ಅಲ್ಲಿಗೆ ಮುಗಿಯಿತು. ಹತ್ತು ನಿಮಿಷ ಟೀ ಬ್ರೇಕ್ ನೀಡಲಾಯಿತು.
ಸಮಾಜ ಕತ್ತಲಿಗೆ ಎದೆಯ ಹಣತೆಯೇ ಬೆಳಕು
ಮೂಕಪ್ರೇಕ್ಷಕ ಎಂದರೇನು ಎನ್ನುವ ಪದ ನನ್ನನ್ನು ಇದುವರೆಗೂ ಕಾಡುತಿತ್ತು. ಬಾನುವಾರ ಮಂಡ್ಯದಲ್ಲಿ ‘ಎದೆಯ ಹಣತೆ’ ನಾಟಕ ಅದಕ್ಕೊಂದು ಅರ್ಥ ತಂದುಕೊಟ್ಟಿತ್ತು. ಕಥೆಗೆ ತಕ್ಕ ಪಾತ್ರ, ಪಾತ್ರಕ್ಕೆ ತಕ್ಕ ನಟನೆ, ನಟನೆಗೆ ತಕ್ಕ ಬೆಳಕು -ದ್ವನಿ ಮತ್ತು ಸಂಗೀತ ಇವಕ್ಕೆಲ್ಲ ಮನಸೋತು ಮೂಕಪ್ರೇಕ್ಷಕರಾದ ನೋಡುಗರನ್ನು ಅದ್ಯಾವುದೋ ಲೋಕಕ್ಕೆ ಕರೆದೋಯ್ದಂತೆ ಇತ್ತು. ಕಥಾ ವಸ್ತುವಿನ ಬಗ್ಗೆ ಹೇಳುವುದಾದರೆ ಮುಸ್ಲಿಂ ಸಮಾಜದ ಹೆಣ್ಣಿನ ದುರಂತ ಬದುಕಷ್ಟೇ ಅಲ್ಲಾ ಎಲ್ಲಾ ಸಮಾಜಗಳಲ್ಲೂ ಇಂತ ಇಂತಹ ಅಸಹಾಯಕ ಹೆಣ್ಣುಮಕ್ಕಳ ನೋವು ಕಣ್ಣೀರಿನ ಬದುಕು ಇತ್ತೀಚಿನ ದಿನಗಲ್ಲಿ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಬಿಂಬಿತವಾಗಿದೆ. ಮೆಹರುನ್ ಳ ಅಂತಿಮ ತೀರ್ಮಾನದ ಮಾತುಗಳು ತನ್ನೊಳಗಿನ ಎದೆಯ ಹಣತೆಯಲ್ಲ, ಸಮಾಜದ ಎದೆಯ ಹಣತೆಯನ್ನು ಬೆಳಗಿಸುವ ದೃಢತೆ ಅಡಕವಾಗಿದೆ. ಅಂತೂ ನಾಟಕನೋಡಲು ಬಿಡುವು ಮಾಡಿಕೊಂಡ ನಿನ್ನೆ ದಿನ ಜೀವನದಲ್ಲಿ ಸಾರ್ಥಕ ದಿನವೆನಿಸಿದೆ.
-ರಘು ಹೊಸಕೆರೆ
ಕನ್ನಡ ಉಪನ್ಯಾಸಕರು, ಮಂಡ್ಯ
ನಂತರ ಭಾನು ಮುಷ್ತಾಕರ ‘ಎದೆಯ ಹಣತೆ’ ಶುರುವಾಯಿತು. ನೀನಾಸಂ ಕಲಾವಿದರ ಅದ್ಭುತ ನಟನೆ ಎಲ್ಲರ ಹೃದಯವನ್ನೂ ಒಂದು ತಾಸು ಕಲಕಿತು. ಕಲ್ಲು ಕರಗುವ ಸನ್ನಿವೇಶ, ಕವ್ವಾಲಿಗಳ ಕಲರವ ಗಟ್ಟಿಯಾದ ಕಥೆಗೆ ಪೂರಕವಾಗಿತ್ತು. ಇದೆಲ್ಲ ಜರುಗುತ್ತಿರುವಾಗ ಹಲವರ ಕಣ್ಣಾಲಿಗಳಲ್ಲಿ ಅಶ್ರುಧಾರೆ ಸುರಿಯುತ್ತಿದುದನ್ನು ನಾನು ಗಮನಿಸಿದೆ, ಸರಿಯಾಗಿ 8.58ಕ್ಕೆ ರಾಷ್ಟ್ರೀಯ ನಾಟಕ ಶಾಲೆಯ ಸಲ್ಮಾ ದಂಡೀನ್ ಅವರ ಪರಕಾಯ ಪ್ರವೇಶವಾಯಿತು. ಈ ಮನಮಿಡಿಯುವ ಸನ್ನಿವೇಶದ ಕ್ಲೈಮ್ಯಾಕ್ಸ್ನೊಂದಿಗೆ ನಾಟಕದ ಕೊನೆಯ ಅಂಕಕ್ಕೆ ಪರದೆ ಬಿತ್ತು. ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ನಿಲ್ಲಲೇ ಇಲ್ಲ. ಕೆಲವರು ಎದೆಯ ಹಣತೆಯ ಭಾವತೀವ್ರತೆಯ ಶಾಕ್ ಗೆ ಒಳಗಾಗಿ ಎದೆಭಾರದಿಂದ ಮೌನವಾಗಿ ಕುಳಿತಿದ್ದರು.
ದೆವ್ವ, ಭೂತ ನಮ್ಮ ತಲೆಯೊಳಗಿವೆ..
ನಾವು ಮಂಡ್ಯ ಕಲಾವಿದರು ಆಯೋಜಿಸಿದ ಮಾಯಾಮೃಗ ನಾಟಕ ಬಹಳ ಚೆನ್ನಾಗಿ ಮೂಡಿ ಬಂತು. ದೆವ್ವ, ಭೂತಗಳು, ಇವೆಯಂತೆ ಇದ್ದವಂತೆ. ಈ ಅಂತೆ ಕಂತೆಗಳೆಲ್ಲಾ ಭೌತಿಕವಾಗಿ ಅಲ್ಲ ನಮ್ಮ ತಲೆಯಲ್ಲಿ ಇದೆ ಎಂಬ ಮಾರ್ಮಿಕ ಸತ್ಯ ತಿಳಿಸಿದ ಈ ನಾಟಕ ಚೆನ್ನಾಗಿತ್ತು. ಎರಡನೆ ನಾಟಕ ‘ಎದೆಯ ಹಣತೆ’ ಈ ಸಮಾಜದ ಕ್ರೂರ ವಾಸ್ತವವನ್ನು ಎತ್ತಿ ಹಿಡಿದು ಒಬ್ಬ ಮಹಿಳೆ ಹೋರಾಟ ಮಾಡುತ್ತಾ ಮದುವೆಯಾಗಿ ಹೋದ ಮನೆಯಲ್ಲಿ ಬಾಳಾಟ ಹೇಗೆ ನಡೆಸಬೇಕು ಅನ್ನುವ ಸಂದೇಶವನ್ನು ನೀಡಿತು. ಹಿರಿಯ ಮಗಳ ಕರ್ತವ್ಯ ಏನು, ಅಣ್ಣಂದಿರ ಜವಾಬ್ದಾರಿ ಏನು, ತಾಯಿಯ ಮಮತೆ ಏನು, ಗಂಡನ ವರ್ತನೆ ಹೇಗೆ ಇರುತ್ತೆ, ಹೊಂದಾಣಿಕೆ ಜೀವನ ಸಾಧ್ಯವೇ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಈ ನಾಟಕದ ಪಾತ್ರಗಳನ್ನು ಕೊಡುತ್ತವೆ. ಏನೇ ಇರಲಿ, ಈ ಸಮಾಜದಲ್ಲಿ ಬದುಕುವ ಎಲ್ಲರಿಗೆ ಈ ಸಂದೇಶ ಬೇಕು ಇಂತಹ ನಾಟಕ ಆಯೋಜನೆ ಮಾಡಿದ ಎಲ್ಲರಿಗೂ ಅಭಿನಂದನೆಗಳು.
-ಡಾ. ಎಸ್.ನಾರಾಯಣ್
ರಾಜ್ಯಾಧ್ಯಕ್ಷರು, ಜೈ ಕರ್ನಾಟಕ ಪರಿಷತ್ತು.
ನಾಟಕ ಮುಗಿಯಿತು. ಎದೆಯ ಹಣತೆ ನಾಟಕದ ನಿರ್ದೇಶಕರಾದ ಡಾ.ಎಂ.ಗಣೇಶ್ ಹೆಗ್ಗೋಡು ಅವರು ಎಲ್ಲ ಕಲಾವಿದರನ್ನು ಪರಿಚಯಿಸಿದರು. ಮಂಡ್ಯ ಜನರ ರಂಗಾಸಕ್ತಿಯನ್ನು ಕೊಂಡಾಡಿದರು. ಹತ್ತಾರು ಚಿಂತಕರು, ಸಾಹಿತಿಗಳು, ಬುದ್ದಿಜೀವಿಗಳು, ಹೋರಾಟಗಾರರು ಪುಟ್ಟ ಸಂವಾದದಲ್ಲಿ ಪ್ರಶ್ನೆಗಳನ್ನು ಕೇಳಿ, ಉತ್ತರಗಳನ್ನು ಪಡೆದುಕೊಂಡರು. ಕನ್ನಡ ಮನಸ್ಸುಗಳು ತಂಡದ ಸಂಜು ಆಲಕೆರೆ ತಂದಿದ್ದ ದೊಡ್ಡ ಕನ್ನಡ ಬಾವುಟದೊಂದಿಗೆ ಎಲ್ಲರೂ ಗ್ರೂಪ್ ಫೋಟೊ ತೆಗೆಸಿಕೊಂಡರು. ನಾಗಮಂಗಲದ ಸಹೃದಯರೊಬ್ಬರು ಇಬ್ಬರು ಕಲಾವಿದರಿಗೆ ಐದು ಸಾವಿರ ಬಹುಮಾನವನ್ನು ಕೊಟ್ಟು ಭಾಷಣ ಕುಟ್ಟದೆ ಕೈಕುಲುಕಿ ತಮ್ಮ ರಂಗಪ್ರೀತಿಯನ್ನು ಮೆರೆದರು. ಕಡೆಯದಾಗಿ ಆಯೋಜಕರೊಬ್ಬರು “ಇಂಥ ನಾಟಕಗಳನ್ನು ತಿಂಗಳಿಗೊಮ್ಮೆ ಎಲ್ಲರೂ ಒಗ್ಗೂಡಿ ಸ್ವಾರ್ಥವಿಲ್ಲದೆ ಆಯೋಜಿಸೋಣ. ನಾಟಕ ನೋಡಲು ಬಂದ ಮಂಡ್ಯದ ಮಹಾಜನತೆಗೆ ಧನ್ಯವಾದಗಳು” ಎಂದು ಹೇಳುವ ಮೂಲಕ ನಾಟಕೋತ್ಸವಕ್ಕೆ ತೆರೆ ಎಳೆದರು.

ಆಗ ಸಮಯ 9.15 ಜನ ನಿಧಾನವಾಗಿ ರಂಗಮಂದಿರದಿಂದ ಹೊರಬರತೊಡಗಿದರು. ಕೆಲವರು ಹೊರಗೆ ಇಡಲಾಗಿದ್ದ ಪರಿಚಯ ಪ್ರಕಾಶನದವರ ಪುಸ್ತಕ ಮಳಿಗೆಯಲ್ಲಿ ತೇಜಸ್ವಿ, ಭಾನುಮುಷ್ತಾಕ್, ಕುವೆಂಪು ಅಂಬೇಡ್ಕರ್ ಮತ್ತು ಪರಿಸರ ವಿಜ್ಞಾನದ ಪುಸ್ತಕಗಳ ಖರೀದಿಸಿ ಮನೆಗಳಿಗೆ ತೆರಳಿದರು. ಗರ್ಭೀಣಿ ಹೆಣ್ಣುಮಗಳೊಬ್ಬಳು ಎರಡೂ ನಾಟಕಗಳನ್ನು ಗಂಡ, ಅತ್ತೆ ಮಾವನೊಟ್ಟಿಗೆ ಕಣ್ತುಂಬಿಕೊಂಡು ಹೋದಳು. ಆಕೆಯ ಗರ್ಭದಲ್ಲಿ ತೇಜಸ್ವಿಯೋ.. ಭಾನಕ್ಕನೋ ಜನಿಸಲಿ, ಕನ್ನಡನಾಡನ್ನು ಇನ್ನಷ್ಟು ಶ್ರೀಮಂತಗೊಳಿಸಲಿ ಎಂದು ಮನದಲ್ಲೇ ಹರಸಿ, ನಾನೂ ಮನೆಗೆ ಬಂದೆ.

ಮಂಡ್ಯ ನೆಲದಲ್ಲಿ ಇಂಥ ಕಾರ್ಯಕ್ರಮಗಳು ಹೆಚ್ಚಾಗಲಿ.
ರಂಗಭೂಮಿ ಚಟುವಟಿಕೆಗಳು ವಿಸ್ತರಿಸಲಿ.







