Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ : ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಲು ಆಗ್ರಹ

ಮಂಡ್ಯ ತಾಲೂಕಿನ ಆಲಕೆರೆ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಓದುತ್ತಿರುವ ಪರಿಶಿಷ್ಠ ಜಾತಿಯ ಸುಮಾರು 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಗ್ರಾಮದ ಸವರ್ಣೀಯರು ತಡೆಯೊಡ್ಡಿದ ಪರಿಣಾಮ ಮೊಟ್ಟೆ ವಿತರಣೆ ಮಾಡದೆ ವಂಚನೆ ಮಾಡಲಾಗುತ್ತಿದೆ ಎಂದು ಮಕ್ಕಳ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಆಲಕೆರೆ ಗ್ರಾಮದ ಪರಿಶಿಷ್ಠ ಜಾತಿಯ ವಿದ್ಯಾರ್ಥಿಗಳ ಪೋಷಕರು ಮತ್ತು ಮುಖಂಡರು, ಸರ್ಕಾರದಿಂದ ನೀಡುವ ಪೂರಕ ಪೌಷ್ಟಿಕಾಂಶ ಆಹಾರ ವಿತರಣಾ ಕಾರ್ಯಕ್ರಮದ ಅಡಿಯಲ್ಲಿ ಮೊಟ್ಟೆ ವಿತರಿಸಲಾಗುತ್ತಿದೆ. ಆದರೆ ಇಲ್ಲಿಯ ತನಕ ನಮ್ಮ ಮಕ್ಕಳಿಗೆ ಮೊಟ್ಟೆಯನ್ನು ನೀಡಿರುವುದಿಲ್ಲ.

ಮೊಟ್ಟೆ ತಿನ್ನುವ ವಿದ್ಯಾರ್ಥಿಗಳ ಮಾಹಿತಿಯನ್ನು ಗೌಪ್ಯವಾಗಿಡಬೇಕಾದ ಮುಖ್ಯ ಶಿಕ್ಷಕರು, ಗ್ರಾಮದ ಸವರ್ಣೀಯರು ಹಾಗೂ ಕೆಲವು ಪೂಜಾರಿಗಳು ಜೊತೆಗೂಡಿ ಹರಿಜನ ಕಾಲೋನಿಗೆ ಬಂದು ಮಕ್ಕಳ ಪೋಷಕರ ಹತ್ತಿರ ಬೆದರಿಕೆ ಹಾಕಿ ದೌರ್ಜನ್ಯದಿಂದ ಮೊಟ್ಟೆ ಬೇಡ ಎಂದು ಸಹಿ ಹಾಕಿಸಿಕೊಂಡಿದ್ದಾರೆತ್ತಎಂದು ಆರೋಪಿಸಿದರು.

ಅದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕರಾದ ರವಿಕುಮಾರ್ ರವರು ಸರ್ಕಾರದಿಂದ ಬರುವ ಪೌಷ್ಟಿಕಾಂಶವುಳ್ಳ ಮೊಟ್ಟೆ ವಿತರಣೆ ಬಡ ಮಕ್ಕಳಿಗೆ ಅಂದರೆ ಎಸ್ಸಿ, ಎಸ್.ಟಿ. ಮಕ್ಕಳಿಗೆ ತಲುಪಬೇಕು. ಅದನ್ನು ತಾವುಗಳು ತಡೆಯಲು ಪ್ರಯತ್ನಿಸಿದ್ದೀರಿ ಎಂದು ಮುಖ್ಯಶಿಕ್ಷಕರಲ್ಲಿ ಕೇಳಿಕೊಂಡಿರುತ್ತಾರೆ. ಆದರೆ, ಮುಖ್ಯಶಿಕ್ಷಕರು ಎಸ್.ಡಿ.ಎಂ.ಸಿ.ಸದಸ್ಯರು ಹಾಗೂ ಸವರ್ಣೀಯರನ್ನು ಶಾಲೆಗೆ ಕರೆಯಿಸಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪರಿಶಿಷ್ಟ ಜಾತಿಯ ಮಕ್ಕಳ ಪರವಾಗಿ ಧ್ವನಿ ಎತ್ತಿದ್ದೀರಿ ಎಂದು ಸವರ್ಣೀಯರು ಹಾಗೂ ಮುಖ್ಯಶಿಕ್ಷಕರು ವೈಯಕ್ತಿಕ ದ್ವೇಷದಿಂದ ಅವರನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.
ಇದನ್ನು ಪ್ರಶ್ನೆ ಮಾಡಲು ಮಕ್ಕಳ ಪೋಷಕರು ಶಾಲೆಗೆ ಭೇಟಿ ಕೊಟ್ಟಾಗ ಅವರು ಮೊಟ್ಟೆಗಳನ್ನು ನೀಡಲು ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಲ್ಲದೆ, ಯಾವ ಅಧಿಕಾರಿಗಳು ಬಂದರೂ ಸಹ ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.ಅಲ್ಲದೆ ಶಾಲೆಯಲ್ಲಿ ದೇವಸ್ಥಾನವನ್ನು ನಿರ್ಮಾಣ ಮಾಡಿ ದೇವಸ್ಥಾನಕ್ಕೆ ಅರ್ಚಕರನ್ನು ನೇಮಿಸಿ, ಜಾತಿ ವಿಷ ಬೀಜವನ್ನು ಭಿತ್ತುವುದರ ಮೂಲಕ ಶಾಲೆಯ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಈ ಕೂಡಲೇ ಮೊಟ್ಟೆ ನೀಡಬೇಕೆಂದು ಶಾಲೆಯಲ್ಲಿ ನೀಡಿರುವ ಒಪ್ಪಿಗೆ ಪತ್ರವನ್ನು ಪರಿಗಣಿಸಿ ಸರ್ಕಾರದ ಯೋಜನೆಯಾದ ಮೊಟ್ಟೆ ವಿತರಣೆಯನ್ನು ಶೀಘ್ರದಲ್ಲಿ ಅನುಷ್ಟಾನಗೊಳಿಸಿ ನ್ಯಾಯ ಕೊಡಿಸಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಜುಳಾ, ಸಹನಾ, ಮಂಚಮ್ಮ, ಜಯಲಿಂಗಮ್ಮ, ತಿಮ್ಮರಾಜು, ಅಜಿತ್‌ಕುಮಾರ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ