Friday, November 20, 2026

ಪ್ರಾಯೋಗಿಕ ಆವೃತ್ತಿ

1098 ಸಹಾಯವಾಣಿ ಬಳಸಿ ಬಾಲ್ಯ ವಿವಾಹ ನಿಲ್ಲಿಸಿ : ಡಾ.ಗಣೇಶ ಪ್ರಸಾದ್

1098 ಸಹಾಯವಾಣಿ ಮೂಲಕ ನಡೆಯುತ್ತಿರುವ ಬಾಲ್ಯ ವಿವಾಹವನ್ನು ನಿಲ್ಲಿಸಿ ಮಂಡ್ಯ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡೋಣ ಎಂದು ಪ್ರಭಾರ ಟಿ ಹೆಚ್ ಓ ಡಾ ಗಣೇಶ್ ಪ್ರಸಾದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಏರ್ಪಡಿಸಿದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿ ಜೀವನ ಎಂದರೆ ಬಂಗಾರದಂತ ಜೀವನ ಇದನ್ನು ಓದಿನ ಕಡೆ ಗಮನ ಹರಿಸಬೇಕೆ ಹೊರತು ಪ್ರೀತಿ ಪ್ರೇಮ ದಂತಹ ಅನ್ಯ ಚಟುವಟಿಕೆಗೆ ಇಳಿಯಬಾರದು, ಮೊದಲು ಸಂಪೂರ್ಣ ಶಿಕ್ಷಣ ಪಡೆಯಬೇಕು. ನಂತರ ಸರ್ಕಾರ ನಿರ್ದೇಶಿಸಿದ ವಯಸ್ಸಿಗನುಗುಣವಾಗಿ ಮದುವೆಯಾಗಿ ಸುಂದರ ಜೀವನ ನಡೆಸಬೇಕು. ಮನೆಯಲ್ಲಿ ಪೋಷಕರ ಒತ್ತಾಯಕ್ಕಾಗಿ ಬಾಲ್ಯ ವಿವಾಹ ಆಗಲೇಬಾರದು ಚಿಕ್ಕ ವಯಸ್ಸಿನಲ್ಲಿ ಮದುವೆ ಆಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅಲ್ಲದೆ ಶಿಕ್ಷೆಗೆ ಗುರಿಯಾಗುವಿರಿ ಆದ್ದರಿಂದ ನೀವೂ ಬಾಲ್ಯ ವಿವಾಹ ಆಗಬೇಡಿ ಆಗುವವರಿಗೂ ತಿಳಿ ಹೇಳಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಎಂದರು.

ಸಿಡಿಪಿಓ ಸಕಲೇಶ್ವರ್ ಎಸ್ ಮಾತನಾಡಿ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ಸಮಾಜದ ಬಹು ದೊಡ್ಡ ಪಿಡುಗಾಗಿದ್ದು ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು ಬಾಲ್ಯ ವಿವಾಹ ಆಗುವುದರಿಂದ ಶಿಕ್ಷಣದಿಂದ ವಂಚಿತರಾಗಿ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಜೊತೆಗೆ ಕಾನೂನಿನ ಪ್ರಕಾರ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ತೆತ್ತ ಬೇಕಾಗುತ್ತದೆ ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಆದ್ದರಿಂದ ಕಾನೂನಿಗೆ ಎಲ್ಲರೂ ಗೌರವ ಕೊಡಬೇಕು ಬಾಲ್ಯ ವಿವಾಹ ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕೆಂದರು. ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ ಪ್ರತಿಜ್ಞಾ ವಿಧಿ ಬೋಧಿಸಿದರು.

ವೇದಿಕೆ ಕಾರ್ಯಕ್ರಮ ನಂತರ ಬೆಳಗೊಳ ಗ್ರಾಮದ ಸ್ವಚ್ಚತಾ ಕಾಲೋನಿ ಹಾಗೂ ಅಂಬೇಡ್ಕರ್ ಕಾಲೋನಿಯಲ್ಲಿ ಮಕ್ಕಳಿರುವ ಮನೆಗೆ ವಾರ್ಡಿನ ಗ್ರಾ ಪಂ ಸದಸ್ಯರ ಸಹಕಾರದೊಂದಿಗೆ ಮನೆ ಭೇಟಿ ನೀಡಿ ಪೋಷಕರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ತಿಳುವಳಿಕೆ ಪತ್ರ ನೀಡಿ ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಿದಂತೆ ಮನವಿ ಮಾಡಲಾಯಿತು.

ಈ ವೇಳೆ ಗ್ರಾ ಪಂ ಸದಸ್ಯರಾದ ಆರ್ಮಗಂ, ಮಂಜುಳಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ, ವಿಜ್ಞಾನ ಶಿಕ್ಷಕ ರಾಜು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಬಿ ಹೇಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ ಟಿ ಜ್ಯೋತಿ, ಅಂಗನವಾಡಿ ಕಾರ್ಯಕರ್ತೆ ವಿದ್ಯಾಶ್ರೀ, ಪವಿತ್ರ, ಸುನಿತ, ಪೃಥ್ವಿ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ