ಅಧ್ಯಾಪನ ಟ್ರಸ್ಟ್ ವತಿಯಿಂದ ಅಧ್ಯಾಪನ ವಿಜ್ಞಾನೋತ್ಸವ-2025 ಮಂಡ್ಯ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆಯ ಎರಡನೇ ಆವೃತ್ತಿಯನ್ನು ಆಗಸ್ಟ್ 30ರಂದು ಬೆಳಿಗ್ಗೆ 09 ರಿಂದ ಸಂಜೆ 05ರವರೆಗೆ ಮಂಡ್ಯ ನಗರ ಹೊರ ವಲಯದ ಎ &ಎ ಕನ್ವೆನ್ಷನ್ ಹಾಲ್ ಆಯೋಜಿಸಲು ನಿಗದಿ ಮಾಡಲಾಗಿದೆ ಎಂದು ಟ್ರಸ್ಟ್ ಸಿಇಓ ಎಂ.ಜಿ.ದಿವ್ಯಶ್ರೀ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ವತಿಯಿಂದ ಕಳೆದ ವರ್ಷ ವಿಜ್ಞಾನೋತ್ಸವ ಕಾರ್ಯಕ್ರಮಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ ಯಶಸ್ಸು ದೊರೆತಿದ್ದು, ರಾಜ್ಯದಲ್ಲೇ ಪ್ರಥಮ ಬಾರಿಗೆ ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯು ಲಭಿಸಿದೆ ಎಂದರು.
ಕಳೆದ ಸಾಲಿನಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ತರಂಗ ಸ್ಪರ್ಧೆಯಲ್ಲಿ 6,702 ವಿದ್ಯಾರ್ಥಿಗಳು ಭಾಗವಹಿಸಿ, 1950 ವಿಜ್ಞಾನ ಮಾದರಿಗಳನ್ನು ಪ್ರಸ್ತುತಪಡಿಸಿ, ಲಾರ್ಜೆಸ್ಟ್ ಸೈನ್ಸ್ ಎಕ್ಸೋಪೋ ಇನ್ ಕರ್ನಾಟಕ ಇಂಡಿಯಾ ಬಿರುದನ್ನು ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯವರು ಪ್ರಶಸ್ತಿಯನ್ನು ನೀಡಿದ್ದಾರೆ ಎಂದರು.

ಈ ಬಾರಿಯೂ ಸಹ “ವಿಜ್ಞಾನೋತ್ಸವ-2025-26 ಸಾಲಿನ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲಾಡಳಿತ, ಮಂಡ್ಯ ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಮಂಡ್ಯ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮತ್ತು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಜೇಷನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜನೆ ಮಾಡಲಾಗಿದೆ. 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
2025-26ರ ಅಧ್ಯಾಪನ ವಿಜ್ಞಾನೋತ್ಸವ ಸ್ಪರ್ಧೆಯ ತಾಲ್ಲೂಕು ಮಟ್ಟದ 288 ವಿದ್ಯಾರ್ಥಿಗಳಿಗೆ 144 ಬಹುಮಾನ, ಜಿಲ್ಲಾ ಮಟ್ಟದ 12 ವಿದ್ಯಾರ್ಥಿಗಳಿಗೆ 6 ಬಹುಮಾನ, ಹ್ಯಾಕಥಾನ್ಗೆ 30 ವಿದ್ಯಾರ್ಥಿಗಳಿಗೆ 3 ಬಹುಮಾನ, ತಂತ್ರಜ್ಞಾನ (ವಿಜ್ಞಾನ ಕ್ರೀಡೆ)ಕ್ಕೆ 30 ವಿದ್ಯಾರ್ಥಿಗಳಿಗೆ 3 ಬಹುಮಾನ, ಶಿಕ್ಷಕರ ಕಾವ್ಯ ವಿಜ್ಞಾನಕ್ಕೆ 3 ಶಿಕ್ಷಕರಿಗೆ 3 ಬಹುಮಾನ ನೀಡಲಾಗುವುದು, ಎಲ್ಲಾ ಭಾಗವಹಿಸುವವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರ ನೀಡಲಾಗುವುದು. ಅಲ್ಲದೇ 3 ಅತ್ಯುತ್ತಮ ಶಾಲಾ ಬಹುಮಾನ, 2 ವಿದ್ಯಾರ್ಥಿಗಳಿಗೆ 1 ಅಧ್ಯಾಪನದ ಅತ್ಯುತ್ತಮ ಮಾದರಿ ಬಹುಮಾನ, 3 ಶಿಕ್ಷಕರಿಗೆ ಅತ್ಯುತ್ತಮ ವಿಜ್ಞಾನ ಶಿಕ್ಷಕ 3 ಬಹುಮಾನ, 1 ಜಿಲ್ಲೆಯ ಅತ್ಯುತ್ತಮ ಬಿಇಒ ಬಹುಮಾನ ನೀಡಲಾಗುವುದು. ಇದೇ ವೇಳೆ ಎಸ್ಎಸ್ಎಲ್ಸಿ ಜಿಲ್ಲೆಯಲ್ಲಿ ಪ್ರಥಮ ರಾಂಕ್ ಪಡೆದ ದೃತಿ.ಜೆ ಹಾಗೂ ಪುನೀತ.ಸಿ ಅವರಿಗೆ ಸಚಿವರಿಂದ ಸನ್ಮಾನ ಮಾಡಲಾಗುವುದು ಎಂದು ವಿವರಿಸಿದರು.
ಈ ಬಾರಿಯ ಅಧ್ಯಾಪನ ವಿಜ್ಞಾನೋತ್ಸವ-2025 ಕಾರ್ಯಕ್ರಮದ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕ ಹಾಗೆ ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹಾಗೂ ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಪಾಂಡವಪುರ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮದ್ದೂರು ಶಾಸಕ ಉದಯ್ ಗೌಡ, ವಿಧಾನಪರಿಷತ್ ಸದಸ್ಯ ಮಧು ಮಾದೇಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ರವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಈ ಬಾರಿ ಕೆಳಕಂಡ ವಿದ್ಯಾರ್ಥಿಗಳಿಂದ ನವೀನ ವಿಜ್ಞಾನ ಮಾದರಿಗಳು, ಗ್ರಾಮೀಣಾಭಿವೃದ್ಧಿಗಾಗಿ ಹ್ಯಾಕಥಾನ್, ತಂತ್ರಜ್ಞಾನ (ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ರೀಡೆ), ಕಾವ್ಯ ವಿಜ್ಞಾನ (ವಿಜ್ಞಾನ ಶಿಕ್ಷಕರು), ವಿಜ್ಞಾನ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸ್ಪರ್ಧಿಸುವ ಮಕ್ಕಳನ್ನು ಸಜ್ಜುಗೊಳಿಸುವ ಪೂರ್ವ ತಯಾರಿ ಸಭೆಯು ವಿಭಾಗಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸುಮಾರು 2200 ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ. ಭಾಗವಹಿಸುವ ಮಕ್ಕಳ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜುಲೈ 30ರ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಆಡಳಿತ ಅಧಿಕಾರಿ ಪೃಥ್ವಿ.ಕೆ.ಆರ್, ಕಾರ್ಯದರ್ಶಿ ಪ್ರವೀಣ್ ಕುಮಾರ್.ಜಿ.ಟಿ, ಸದಸ್ಯ ಮನು .ಜೆ.ವಿ ಉಪಸ್ಥಿತರಿದ್ದರು.




