ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಗುರಿ ಸಾಧನೆ ಮಾಡಬೇಕು ಎಂದು ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಮಾರಾಣಿ ಹೇಳಿದರು.
ಕೃಷ್ಣರಾಜಪೇಟೆ ಪಟ್ಟಣದ ಸ್ಕಾಲರ್ಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಜಾಗತಿಕ ಜಗತ್ತಿನ ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಗೆ ಅಪಾರವಾದ ಶಕ್ತಿ ಇದೆ. ವಿದ್ಯಾರ್ಥಿಗಳು ಹಾಗೂ ಯುವಜನರು ಮೊಬೈಲ್ ಹವ್ಯಾಸದಿಂದ ದೂರವಿದ್ದು ಪುಸ್ತಕಗಳನ್ನು ಶ್ರದ್ದಾ ಭಕ್ತಿಯಿಂದ ಓದಿ, ಮನನ ಮಾಡಿಕೊಂಡು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ. ಗಂಗಾಧರ್ ಮಾತನಾಡಿ ವಿದ್ಯಾರ್ಥಿಗಳಿಗೆ ಅಂಕ ಗಳಿಕೆ ಒಂದೇ ಮಾನದಂಡವಲ್ಲ, ನಾವು ಶಿಕ್ಷಣ ಪಡೆಯುವುದು ಸಮಾಜದಲ್ಲಿ ಎಲ್ಲರಂತೆ ಶಿಸ್ತುಬದ್ಧ ಜೀವನ ನಡೆಸಲು ಇರುವ ಮುಖ್ಯವಾದ ವಿದ್ಯೆಯೇ ಶಿಕ್ಷಣವಾದ್ದರಿಂದ ಜೀವನದಲ್ಲಿ ಎದುರಾಗುವ ಸೋಲುಗಳಿಗೆ ಹೆದರಿ ಪಲಾಯನವಾದವನ್ನು ಅನುಸರಿಸದೇ ಧೈರ್ಯದಿಂದ ಜೀವನ ನಡೆಸುವುದನ್ನು ಕಲಿಯಬೇಕು ಎಂದು ಕರೆ ನೀಡಿದರು.
ಹಾಸನದ ಎವಿಕೆ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಡಾ.ಚಂದ್ರಶೇಖರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಅರ್ಜುನನಂತೆ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಗುರಿ ಸಾಧನೆ ಮಾಡಬೇಕು. ಹಿಂದಿನ ಸೋಲೆ ನಾಡಿನ ಗೆಲುವಾಗುವುದರಿಂದ ಸೋಲಿಗೆ ತಲೆ ಕೆಡಿಸಿಕೊಳ್ಳದೆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ತಂದೆ ತಾಯಿಗಳು ಹಾಗೂ ಗುರು ಹಿರಿಯರು ಹೆಮ್ಮೆಪಡುವಂತೆ ಮಾತು ಕಲಿಯಬೇಕು ನಿಮ್ಮ ಶೈಕ್ಷಣಿಕ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.
ಸ್ಕಾಲರ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಕೀಲರಾದ ರಾಘವೇಂದ್ರ, ಸಮಾಜ ಸೇವಕಿ ವಿದ್ಯಾ ಮಂಜುನಾಥ್, ರಶ್ಮಿ ರಾಘವೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಪತ್ರಕರ್ತ ಸೈಯ್ಯದ್ ಕಲೀಲ್ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿ ಮುಖಂಡರಾದ ಹೇಮಾವತಿ ಪ್ರಾರ್ಥಿಸಿದರು, ಹೆಚ್.ಎಲ್.ಕೀರ್ತನಾ ಸ್ವಾಗತಿಸಿದರು, ಕೀರ್ತಿ ವಂದಿಸಿದರು, ಭವಾನಿಗೌಡ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.




