ಇತ್ತೀಚಿಗೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರದ ಅಭಾವ ಉಂಟಾಗಿದ್ದು ಇಂದಿನ ಈ ಅಂಕಣದಲ್ಲಿ ರೈತರು ಯೂರಿಯಾ ಗೊಬ್ಬರವನ್ನುಬಳಕೆ ಮಾಡುವ ಮುನ್ನ ತಪ್ಪದೇ ತಿಳಿದಿರಲೇ ಬೇಕಾದ ಅವಶ್ಯಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ವ್ಯವಸಾಯ ರಂಗವು ಭಾರತದ ಆರ್ಥಿಕತೆಯ ಮೂಲಸ್ತಂಭವಾಗಿದ್ದು, ಯೂರಿಯಾ ಇಂದು ರೈತರಿಗೆ ಅತ್ಯಂತ ಜನಪ್ರಿಯ ರಸಗೊಬ್ಬರವಾಗಿ ಗುರುತಿಸಿಕೊಂಡಿದೆ. ಇದು ಬೆಳೆಗಳಿಗೆ ಸಾರಜನಕ (Nitrogen) ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇಳುವರಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಆದರೆ, ಯೂರಿಯಾದ ಅತಿರೇಕವಾದ ಮತ್ತು ನಿರಂತರ ಬಳಕೆಯು ಮಾನವ ಆರೋಗ್ಯ, ಮಣ್ಣಿನ ಆರೋಗ್ಯ(Soil Health), ಬೆಳೆಗಳ ಉತ್ಪಾದನೆ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಲೇಖನದಲ್ಲಿ, ಯೂರಿಯಾದ ದುಷ್ಪರಿಣಾಮಗಳ ಬಗ್ಗೆ ತಿಳಿಯಲು ಮತ್ತು ರೈತರು ಸಮತೋಲನದ ಬಳಕೆಯತ್ತ ಗಮನಹರಿಸುವಂತೆ ತಿಳಿಯಿಸಲಾಗಿದೆ. ಅಲ್ಲದೆ, ನ್ಯಾನೋ ಯೂರಿಯಾದಂತಹ ಪರ್ಯಾಯ ಆಯ್ಕೆಗಳ ಬಗ್ಗೆಯೂ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಒಂದು ಚೀಲಾ ಯೂರಿಯಾ ದಲ್ಲಿ ಯಾವೆಲ್ಲಾ ಪೋಷಕಾಂಶಗಳು ಇರುತ್ತವೆ?
ಯೂರಿಯಾ ಒಂದು ಏಕ-ಪೋಷಕ ರಸಗೊಬ್ಬರವಾಗಿದ್ದು, ಇದರಲ್ಲಿ ಮುಖ್ಯವಾಗಿ ಸಾರಜನಕ (Nitrogen) ಮಾತ್ರ ಇರುತ್ತದೆ. ಸಾಮಾನ್ಯವಾಗಿ, ಉತ್ತಮ ಗುಣಮಟ್ಟದ ಯೂರಿಯಾದಲ್ಲಿ ಸಾರಜನಕದ ಪ್ರಮಾಣ 46% ಇರುತ್ತದೆ. ಇದರ ಅಂಕಿ-ಅಂಶ ವಿವರ ಈ ಕೆಳಗಿನಂತಿದೆ:
- ಒಂದು ಚೀಲ ಯೂರಿಯದಲ್ಲಿ ಸಾರಜನಕ ಪ್ರಮಾಣ = 46% ಎಂದರೆ, 50 × 0.46 = 23 ಕೆ.ಜಿ. ಸಾರಜನಕ. ಇದರಂತೆ 50 ಕೆ.ಜಿ. ಚೀಲದಲ್ಲಿ ಸುಮಾರು 23 ಕೆ.ಜಿ. ಸಾರಜನಕ ಇರುತ್ತದೆ.
ಯೂರಿಯಾದ ಅತಿಯಾದ ಬಳಕೆಯ ಪರಿಣಾಮವೇನು ?
ಯೂರಿಯಾ ವ್ಯವಸಾಯದಲ್ಲಿ ಸಾರಜನಕದ ಮೂಲವಾಗಿ ಉಪಯುಕ್ತವಾದರೂ, ಅದರ ಅತಿಯಾದ ಬಳಕೆಯು ಮಣ್ಣಿನ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ನಿರಂತರವಾಗಿ ಯೂರಿಯಾ ಸೇರಿಸಿದಾಗ, ಮಣ್ಣಿನ pH ಮಟ್ಟ ಕಡಿಮೆಯಾಗಿ (ಆಮ್ಲೀಯವಾಗಿ) ಬದಲಾಗುತ್ತದೆ. ಇದರಿಂದ ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆ ಕಡಿಮೆಯಾಗುತ್ತದೆ ಮತ್ತು ಪೋಷಕಾಂಶಗಳ ಅಸಮತೋಲನ ಉಂಟಾಗುತ್ತದೆ. ಉದಾಹರಣೆಗೆ, ಫಾಸ್ಫರಸ್ ಮತ್ತು ಪೊಟ್ಯಾಸಿಯಂ ಲಭ್ಯತೆ ಕಡಿಮೆಯಾಗುವುದರಿಂದ ಬೆಳೆಗಳ ಬೆಳವಣಿಗೆಯಲ್ಲಿ ತೊಡಕು ಉಂಟಾಗಬಹುದು.
ಇದಲ್ಲದೆ, ಅತಿಯಾದ ಸಾರಜನಕವು ಸಸ್ಯಗಳಿಗೆ ವಿಷಕಾರಿಯಾಗಿ ಪರಿಣಾಮ ಬೀರಬಹುದು, ಇದರಿಂದ ಇಳುವರಿ ಕಡಿಮೆಯಾಗಿ ಕೀಟ-ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತದೆ.ಪರಿಸರದ ಮೇಲೂ ಯೂರಿಯಾದ ಅತಿರೇಕ ಬಳಕೆಯ ಪರಿಣಾಮ ತೀವ್ರವಾಗಿದೆ. ಯೂರಿಯಾದಿಂದ ಬಿಡುಗಡೆಯಾಗುವ ನೈಟ್ರಸ್ ಆಕ್ಸೈಡ್ (N₂O) ಒಂದು ಶಕ್ತಿಶಾಲಿ ಹಸಿರುಮನೆ ಅನಿಲವಾಗಿದ್ದು, ಇದು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ಅಲ್ಲದೆ, ಯೂರಿಯಾ ಮಣ್ಣಿನಿಂದ ಅಂತರ್ಜಲಕ್ಕೆ ಸೇರಿ ಕುಡಿಯುವ ನೀರನ್ನು ಮಾಲಿನ್ಯಗೊಳಿಸಬಹುದು. ನದಿ-ಕೆರೆಗಳಲ್ಲಿ ಯೂಟ್ರಫಿಕೇಶನ್ (ಸಮೃದ್ಧ ಪೋಷಣೆ) ಸಮಸ್ಯೆಯೂ ಉಂಟಾಗುತ್ತದೆ, ಇದರಿಂದ ನೀರಿನಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಿ ಜಲಚರ ಜೀವಿಗಳ ಸಾವು ಸಂಭವಿಸುತ್ತದೆ.
ಯೂರಿಯಾ (Urea) ಬಳಕೆಯಿಂದ ಮಾನವನ ಆರೋಗ್ಯ, ಮಣ್ಣು, ಬೆಳೆಯ ಆರೋಗ್ಯ ಮತ್ತು ಪರಿಸರದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳು:
ವ್ಯವಸಾಯದಲ್ಲಿ ಯೂರಿಯಾದ ಅತಿರೇಕವಾದ ಬಳಕೆಯಿಂದ ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ವಿವಿಧ ಹಾನಿಕಾರಕ ಪರಿಣಾಮ ಉಂಟಾಗುವದು. ಯೂರಿಯಾ ಬೆಳೆಗಳಿಗೆ ಸಾರಜನಕ ರೂಪದಲ್ಲಿ ಅತ್ಯಂತ ಉಪಯುಕ್ತ ಮೂಲವಾದರೂ, ಅದನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ಮಣ್ಣಿನ ಆಮ್ಮಿಯತೆ, ನೀರಿನ ಮಾಲಿನ್ಯ ಮತ್ತು ಹಸಿರು ಮನೆಗಳ ಅನಿಲ ಪ್ರಮಾಣ ಹೆಚ್ಚಳವಾಗಬಹುದು.
ಶಿಪಾರಸ್ಸಿಗಿಂತ ಹೆಚ್ಚಾಗಿ ಬಳಕೆ ಮಾಡಿದರೆ, ಇಳುವರಿ ಕಡಿಮೆಯಾಗಬಹುದು, ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು, ಹಾಗೂ ಹೆಚ್ಚಿನ ಸಾರಜನಕ ಪ್ರಮಾಣದಿಂದ ಸಸ್ಯಗಳಿಗೆ ವಿಷಕಾರಿಯಾದ ಪರಿಣಾಮವಾಗಬಹುದು. ಬೆಳೆಗಳು ಹೆಚ್ಚು ಕೀಟ/ರೋಗಕ್ಕೆ ತುತ್ತಾಗುತ್ತವೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ.
ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು ?
ಯೂರಿಯಾ ಹೆಚ್ಚಾಗಿ ಬಳಸಿದಾಗ, ಬೆಳೆದ ತರಕಾರಿ, ಹಣ್ಣುಗಳು, ಧಾನ್ಯಗಳಲ್ಲಿ ನೈಟ್ರೇಟ್ ಹಾಗೂ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವು ದೀರ್ಘಾವಧಿಯಲ್ಲಿ ಸೇವಿಸಿದರೆ ಮಾನವನಿಗೆ ವಿಷಕಾರಿಯಾಗಿ ಹೊಟ್ಟೆ ನೋವು, ವಾಂತಿ ಮುಂತಾದವು ಸಂಭವಿಸಬಹುದು.
ಆಹಾರದಲ್ಲಿ ನೈಟ್ರೇಟ್ ಗಳು ಹೆಚ್ಚಾಗಿದ್ದರೆ, ಅವು ನೈಟ್ರೋಸಾಮೈನ್ಗಳಾಗಿ ಪರಿವರ್ತಿತನೆಯಾಗಿ ಕ್ಯಾನ್ಸರಗೆ ಕಾರಣವಾಗಬಹುದು. ಶಿಶುಗಳಲ್ಲಿ “ಬ್ಲೂ ಬೇಬಿ ಸಿಂಡೋಮ್” ಎಂಬ ಸಮಸ್ಯೆ ಆಗಬಹುದು. ಇದು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಯೂರಿಯಾ ಭೂಮಿಯಿಂದ ನೆಲದ ನೀರಿಗೆ ಅಥವಾ ನದಿ-ಕೆರೆಗಳಿಗೆ ಸೇರಿದರೆ, ಕುಡಿಯುವ ನೀರಿನಲ್ಲಿ ನೈಟ್ರೇಟ್ ಮಟ್ಟ ಹೆಚ್ಚಾಗಬಹುದು. ಇದು ಮಾನವ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
ನಿರಂತರ ಹಾಗೂ ಅತಿಯಾದ ಯೂರಿಯಾ ಬಳಕೆ ಮಣ್ಣಿನ ರಸಸಾರವನ್ನು (ಪಿ.ಎಚ್) ಕಡಿಮೆಮಾಡಿ ಅದನ್ನು ಆಮ್ಲಯವಾಗಿಸುತ್ತದೆ. ಆಮ್ಮಿಯ ಮಣ್ಣುಗಳಲ್ಲಿ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆ ಕಡಿಮೆಯಾಗುತ್ತದೆ ಮತ್ತು ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆಗಳು ತೊಂದರೆಗೆ ಒಳಗಾಗುತ್ತದೆ, ಇದರಿಂದ ಒಟ್ಟು ಮಣ್ಣಿನ ಆರೋಗ್ಯ, ಪೋಷಕಾಂಶಗಳ ಅಸಮತೋಲನ ಮತ್ತು ಸಸ್ಯದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಪರಿಸರದ ಮೇಲೆ ಪರಿಣಾಮವೇನು ?
ಯೂರಿಯಾ ಭೂಮಿಯ ಅಂತರ್ಜಲಕ್ಕೆ ಹೋಗಿ ಕುಡಿಯುವ ನೀರಿನ ಮೂಲಗಳನ್ನು ಮಾಲಿನ್ಯಗೊಳಿಸಬಹುದು ಹಾಗೂ ನದಿ ಕೆರೆಗಳಿಗೆ ಹೋಗಿ ಯೂಟ್ರಫಿಕೇಶನ್ (ಸಮೃದ್ಧ ಪೋಷಣೆ) ಉಂಟುಮಾಡಬಹುದು. ನೈಟ್ರಸ್ ಆಕ್ಷೆಯಂತೆ ಶಕ್ತಿಶಾಲಿ ಹಸಿರುಮನೆ ಅನಿಲಕ್ಕೆ ಪರಿವರ್ತನೆಯಾಗಿ ಹವಾಮಾನ ಬದಲಾವಣೆಗೆ ಕಾರಣವಾಗಬಹುದು. ಅತಿಯಾದ ಸಾರಜನಕ ಬಳಕೆಯು ವಿವಿಧ ಬೆಳೆಗಳಲ್ಲಿ ಎಲೆಗಳು ಮೃದುವಾಗಿ ರಸಹೀರುವ ಕೀಟಗಳ ಪ್ರಮಾಣ ಹೆಚ್ಚಾಗಿ ಇಳುವರಿ ನಷ್ಟವಾಗುವದು.
ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಕಡಿಮೆಯಾಗುವದರಿಂದ ಮಣ್ಣಿನ ಪಲವತ್ತತೆ ಕಡಿಮೆಯಾಗುವುದು.
ರೈತರು ಯೂರಿಯಾ ಬಳಕೆಯಲ್ಲಿ ಎಚ್ಚರಿಕೆಯಿಂದ ನಡೆದು, ಶಿಫಾರಸು ಮಾಡಲಾದ ಪ್ರಮಾಣವನ್ನು ಅನುಸರಿಸಬೇಕು ಮತ್ತು ಮಣ್ಣಿನ ಪರೀಕ್ಷೆ ಮೂಲಕ ನಿರ್ದಿಷ್ಟ ಪೋಷಕಾಂಶ ಆಗತ್ಯಗಳನ್ನು ತಿಳಿದುಕೊಳ್ಳಬೇಕು.
ಸಮತೋಲನದ ರಸಗೊಬ್ಬರ ಬಳಕೆ ಏಕೆ ಬೇಕು ?
ರಸಗೊಬ್ಬರ ಬಳಕೆಯಲ್ಲಿ ಸಮತೋಲನ ತಾಳುವುದು ಅತ್ಯಂತ ಅಗತ್ಯ. ಸಾರಜನಕದ ಜೊತೆಗೆ ಫಾಸ್ಪರಸ್ ಮತ್ತು ಪೊಟ್ಯಾಸಿಯಂ ಮುಂತಾದ ಮುಖ್ಯ ಪೋಷಕಾಂಶಗಳನ್ನು ಸಹ ಒಳಗೊಂಡಿರಬೇಕು. ಹೆಚ್ಚು ಹಸಿರೆಲೆ ಗೊಬ್ಬರ/ಎರೆಹುಳು ಗೊಬ್ಬರ/ಸಾವಯವ ಗೊಬ್ಬರ/ಸಾವಯವ ದ್ರವ್ಯಗಳು ಮತ್ತು ಜೈವಿಕ ಗೊಬ್ಬರಗಳಂತಹ ಪರ್ಯಾಯ ಸಾರಜನಕ ಮೂಲಗಳನ್ನು ಬಳಸುವುದರಿಂದ ಯೂರಿಯಾ ಮೇಲೆ ಅವಲಂಬನೆಯು ಕಡಿಮೆಯಾಗುತ್ತದೆ ಮತ್ತು ಮಣ್ಣಿನ ಆರೋಗ್ಯವು ಸುಧಾರಿಸುತ್ತದೆ ಹಾಗೂ ಈ ರೀತಿ ಕ್ರಮವಹಿಸಿ ಪಲವತ್ತತೆ ಕಾಪಾಡುವದು ಅವಶ್ಯಕವಾಗಿದೆ.
ನ್ಯಾನೋ ಯೂರಿಯಾ ಬಳಕೆ ಎಷ್ಟು ಉಪಯೋಗಿ ?
ನ್ಯಾನೋ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ. ಇದನ್ನು ಇಫ್ಕೋ (IFFCO) ಕಂಪನಿಯು ಅಭಿವೃದ್ಧಿಪಡಿಸಿದೆ. ಇದು ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ ಎಂಟರಿಂದ ಹತ್ತು ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶ ನೀಡುತ್ತದೆ. ನ್ಯಾನೋ ಯೂರಿಯಾ ಬಳಸಿದರೆ, ಸಾಂಪ್ರದಾಯಿಕ ಗ್ರಾನುಲರ್ ಯೂರಿಯಾ ಬಳಕೆ ಶೇಕಡಾ 50 ರಷ್ಟು ಕಡಿಮೆ ಮಾಡಬಹುದು.
ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿರುವ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.
ಕೃಪೆ : ಕೃಷಿಕಮಿತ್ರ.ಕಾಂ




