ಮಳವಳ್ಳಿ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು ಕೆಲವೇ ತಿಂಗಳಲ್ಲಿ ಮೈಸೂರು ರಸ್ತೆಯಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಜೊತೆಗೆ ತಾಲ್ಲೂಕಿನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಚಾಲನೆ ನೀಡಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ನಿರ್ಮಾಣ 7.20 ಕೋಟಿ ರೂ ವೆಚ್ಚದ ಕಾಮಗಾರಿ, ಮಾಗನೂರು ಬಳಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೆಚ್ಚುವರಿ ನೂತನ ಕಟ್ಟಡ ನಿರ್ಮಾಣ, ಪಟ್ಟಣದ ಹೊರವಲಯದ
ಮಾಗನೂರು ಬಳಿ 25 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 11 ಕೆ ವಿ ವಿದ್ಯುತ್ ವಿತರಣಾ ಕೇಂದ್ರವನ್ನು ಚಾಲನೆ ನೀಡಿ ಮಾತನಾಡಿದರು.

ಎರಡು ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡುವುದರ ಜೊತೆಗೆ ಮಾಗನೂರು ತಳಗವಾದಿ ಗ್ರಾಮಗಳ ಭಾಗದ ಜನರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಒದಗಿಸಲು ನೂತನ 11 ಕೆ ವಿ ವಿದ್ಯುತ್ ವಿತರಣಾ ಕೇಂದ್ರ ವನ್ನು ಉದ್ಘಾಟಿಸಲಾಗಿದೆ. ಪ್ರತೀ ವರ್ಷದಂತೆ ಶೀಘ್ರದಲ್ಲೇ ವಿಜೃಂಭಣೆಯ ಗಗನಚುಕ್ಕಿ ಜಲಪಾತೋತ್ಸವ ಜರುಗಲಿದ್ದು ದಿನಾಂಕ ಗೊತ್ತುಪಡಿಸಿ ಮುಖ್ಯ ಮಂತ್ರಿಗಳಿಂದ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿ ಇನ್ನಿತರ ಸಚಿವರನ್ನು ಆಹ್ವಾನಿಸಿ ಪೂರಿಗಾಲಿ ಹನಿ ನೀರಾವರಿ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಈ ವೇಳೆಯಲ್ಲಿ ಪುರಸಭಾ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯಾಧ್ಯಕ್ಷ ರವೀಂದ್ರಕುಮಾರ್, ಪುರಸಭಾ ಸದಸ್ಯ ನೂರುಲ್ಲಾ, ಬಸವರಾಜು, ಅಯೂಬ್ ಪಾಷಾ, ರಾಜಶೇಖರ್, ಮನ್ ಮುಲ್ ನಿರ್ದೇಶಕ ಆರ್ ಎನ್ ವಿಶ್ವಾಸ್, ಮುಖಂಡರಾದ ದೇವರಾಜು, ಚಿಕ್ಕಲಿಂಗಯ್ಯ, ವಿಶ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ ಪಿ ರಾಜು, ದೊಡ್ಡಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ಕಾಲೇಜಿನ ಪ್ರಾಂಶುಪಾಲರಾದ ಯಶೋಧ, ಚೆಸ್ಕಾಂ ಕಾರ್ಯ ಪಾಲಕ ಅಭಿಯಂತರ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರೇಮ್ ಕುಮಾರ್, ಹಿತೇಶ್ ಕೆಪಿಟಿಸಿಎಲ್ ಇ ಇ ಕಿರಣ್ ಮತ್ತಿತರರು ಹಾಜರಿದ್ದರು.




