ಮಂಡ್ಯ ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವತ್ತ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಂಡ್ಯ ತಾಲ್ಲೂಕು ಶಾಸಕರು ಗಮನ ಹರಿಸಿದೇ ಹೋದರೆ ಆಗಸ್ಟ್ 15ರಂದು ಅವರನ್ನು ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಪಡೆದು 79 ವರ್ಷಗಳು ಕಳೆದರೂ ರೈತರ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಪಕ್ಷಗಳು, ಅಧಿಕಾರಿಗಳು ವಿಫಲರಾಗಿದ್ದು, ಅವುಗಳತ್ತ ಗಮನಹರಿಸುವಂತೆ ಒತ್ತಾಯಿಸಲಾಗುವುದು ಎಂದರು.

ಸ್ವಾತಂತ್ರ‍್ಯೋತ್ಸವಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸರಿಯಾದ ಸಮಯಕ್ಕೆ ಮೈಷುಗರ್ ಕಾರ್ಖಾನೆಯ ಕಬ್ಬು ನುರಿಸುವಂತೆ ಮಾಡಬೇಕು. ಅಲ್ಲಿನ ಅವ್ಯವಹಾರ ಬಗ್ಗೆ ಗಮನ ಹರಿಸಬೇಕು, ಜಿಲ್ಲೆಯ ಕೊನೆಯ ಭಾಗಗಳಾದ ಮದ್ದೂರು, ಕೊಪ್ಪ, ಮಳವಳ್ಳಿಯ ನಾಲೆಗಳಿಗೆ ನೀರೊದಗಿಸಬೇಕು, ಸಕಾಲದಲ್ಲಿ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಒದಗಿಸಬೇಕು, ಕೆ.ಆರ್.ಎಸ್ ಅಣೆಕಟ್ಟೆ ಬಳಿಯ ಬೃಂದಾವನದಲ್ಲಿ ಕೈಗೊಂಡ ಯೋಜನೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಯುವ ಅಧ್ಯಕ್ಷ ಸಂತೋಷ್ ಮಂಡ್ಯಗೌಡ ಮಾತನಾಡಿ, ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ 42 ಸಾವಿರ ಕೋಟಿ ಮೀಸಲಿಟ್ಟಿದ್ದು, ಹದಗೆಟ್ಟ ಶಿಕ್ಷಣ ವ್ಯವಸ್ಥೆ ಬಗ್ಗೆ ಸಚಿವರು ಗಮನ ಹರಿಸುತ್ತಿಲ್ಲ. ಅವರನ್ನು ಮಂಡ್ಯಕ್ಕೆ ಕರೆತಂದು ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಮುಚ್ಚಲ್ಪಟ್ಟ 351 ಶಾಲೆಗಳನ್ನು ತೆರೆಯಲು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಅವಕಾಶ ಸಿಕ್ಕರೆ ಶಿಕ್ಷಣ ಸಚಿವ ಮುಖಕ್ಕೆ ಮಸಿ ಬಳೆಯಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಮಂಡ್ಯ ತಾಲ್ಲೂಕು ಗೌರವ ಅಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ಮುಖಂಡರಾದ ಹಲ್ಲೇಗೆರೆ ಶಿವರಾಮ್, ಬೋರಲಿಂಗೇಗೌಡ ಇತರರಿದ್ದರು.




