Monday, November 23, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಇಂದಿರಾ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಡಿ.ಕೆ.ಸುರೇಶ್ ಭೂಮಿಪೂಜೆ

ವರದಿ : ಪ್ರಭು ವಿ.ಎಸ್

ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ವರಿಷ್ಠರ ಸೂಚನೆ ಮೇರೆಗೆ ಕಾಂಗ್ರೇಸ್ ಪಕ್ಷದ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಕಾರ್ಯಕ್ರಮ ಚಾಲ್ತಿಯಲ್ಲಿದ್ದು ಮಂಡ್ಯ ಜಿಲ್ಲೆಯಲ್ಲೇ ಮದ್ದೂರು ತಾಲೂಕು ಪ್ರಥಮವೆಂಬಂತೆ ಇಂದಿರಾ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸ್ವಾತಂತ್ರ್ಯ  ದಿನಾಚರಣೆಯೆಂದೇ ಭೂಮಿಪೂಜೆ ನೆರವೇರಿಸಿರುವುದು ಸ್ವಾಗತಾರ್ಹವೆಂದು ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪ್ರಶಂಸಿದರು.

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ಬಳಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ಸಮೀಪ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯ ಕೆ.ಪಿ.ಸಿ.ಸಿ ನಿವೇಶನದಲ್ಲಿ ಕಾಂಗ್ರೇಸ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ಕಾಂಗ್ರೇಸ್ ಭವನಗಳು ಪಕ್ಷದ ಕಾರ್ಯಕರ್ತರು ಆಸ್ತಿಯಾಗಿದ್ದು ಇವು ದೇವಾಲಯದೊಟ್ಟಿಗೆ ಶಕ್ತಿಕೇಂದ್ರಗಳೆಂದು ಬಣ್ಣಿಸಿದ ಡಿ.ಕೆ.ಸುರೇಶ್ ಈ ಒಂದು ಪ್ರಶಂಸನೀಯ ಕಾರ್ಯಕ್ಕೆ ಮದ್ದೂರು ಶಾಸಕ ಕೆ.ಎಂ.ಉದಯ ಮೂರು ಕೋಟಿ ರೂ. ಬೆಲೆಯ ನಿವೇಶನವನ್ನು ಪಕ್ಷಕ್ಕೆ ನೀಡುವ ಜತೆಗೆ ಭವನ ನಿರ್ಮಾಣಕ್ಕೂ ಮುಂದಾಗಿರುವುದು ಸ್ವಾಗತಾರ್ಹವೆಂದರು.

ಮಂಡ್ಯ ಜಿಲ್ಲೆ ಅದರಲ್ಲೂ ಮದ್ದೂರು ತಾಲೂಕು ಕಾಂಗ್ರೆಸ್ ಪಕ್ಷಕ್ಕೆ ಹಿಂದಿನಿಂದಲೂ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿದ್ದು ಮುಂದಿನ ದಿನಗಳಲ್ಲೂ ಇದು ತಮ್ಮ ನಿರೀಕ್ಷೆಯಾಗಿದ್ದು ಭವನ ನಿರ್ಮಾಣಕ್ಕೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಕೈಜೋಡಿಸುವಂತೆ ಮನವಿ ಮಾಡಿದರು.

ಧರ್ಮ – ನಂಬಿಕೆಗೆ ಚ್ಯುತಿ ಬರಬಾರದು

ಧರ್ಮಸ್ಥಳ ವಿಚಾರದಲ್ಲಿ ಆರೋಪಗಳ ಹಿನ್ನೆಲೆ ಸಾರ್ವಜನಿಕರಿಗೆ ಮುಕ್ತವಾಗಿ ವಿಷಯ ಮುಟ್ಟಿಸುವ ಸಂಬಂಧ ರಾಜ್ಯ ಸರಕಾರ ಕಮಿಟಿಗೆ ಆದೇಶಿಸಿದ್ದು ಧರ್ಮ ಮತ್ತು ನಂಬಿಕೆ ಹೆಸರಿಗೆ ಚ್ಯುತಿ ಬಾರದಂತೆ ಪ್ರತಿಯೊಬ್ಬರೂ ಜಾಗೃತರಾಗಬೇಕೆಂದು ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.

ಮದ್ದೂರು ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಅತಿ ಪ್ರಮುಖ ಸ್ಥಳಗಳ ಪೈಕಿ ಧರ್ಮಸ್ಥಳವು ಒಂದಾಗಿದ್ದು ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ಅಪಾರ ಸಂಖ್ಯೆಯ ಭಕ್ತರಿದ್ದು ಸದ್ಯಕ್ಕೆ ಎದುರಾಗಿರುವ ಆರೋಪಗಳಿಂದ ಹೊರಬರುವ ಸಂಬಂಧ ತನಿಖೆ ಮುಂದುವರೆದಿದ್ದು ಇಷ್ಟರಲ್ಲೇ ತನಿಖಾ ವರದಿ ಪ್ರಕಟವಾಗುವ ನಿರೀಕ್ಷೆಯಿದೆ ಎಂದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಸೂಚನೆ ಮೇರೆಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ರಾಜ್ಯದ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾಂಗ್ರೇಸ್ ನಾಯಕರಿಗೆ ಮತ್ತು ಶಾಸಕರಿಗೆ ತಮ್ಮ ಹಂತದಲ್ಲಿ ಕಾಂಗ್ರೇಸ್ ಕಚೇರಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕರೆ ಕೊಟ್ಟಿರುವುದಾಗಿ ಹೇಳಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರಕಾರ ಉತ್ತಮ ರೀತಿ ಕಾರ್ಯ ನಿರ್ವಹಿಸುತ್ತಿದ್ದು ಮದ್ದೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಬಾರಿ ಶಾಸಕರಾದ ಕೆ.ಎಂ.ಉದಯ ಅವರು ಎರಡು ವರ್ಷದ ಅವಧಿಯಲ್ಲೇ 1600 ಕೋಟಿಗೂ ಹೆಚ್ಚು ಅನುದಾನ ತಂದು ಕಾರ್ಯ ನಿರ್ವಹಿಸುತ್ತಿರುವುದಾಗಿ ವಿವರಿಸಿದರು.

ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷಗಳು ಟೀಕೆ ಹೊರತಾಗಿ ಮತ್ತೇನನ್ನೂ ಮಾಡುತ್ತಿಲ್ಲವೆಂದ ಅವರು ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪಕ್ಷ, ಜಾತಿ, ಧರ್ಮ ಮೀರಿದ ಕಾರ್ಯ ನಿರ್ವಹಿಸುತ್ತಿದ್ದು ಇವುಗಳನ್ನು ಟೀಕಿಸುವ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳು ತಮಗೆ ಬೇಡವೆಂಬ ಬಗ್ಗೆ ಲಿಖಿತವಾಗಿ ಬರೆದು ಕೊಡಲೆಂದು ಸವಾಲು ಹಾಕಿದರು.

ದೇಶದಲ್ಲೇ ರಾಜ್ಯದ ಜನರ ತಲಾ ಆದಾಯ ನಂ. 1 ಸ್ಥಾನದಲ್ಲಿದ್ದು ಐದು ಗ್ಯಾರಂಟಿಗಳು ಸೇರಿದಂತೆ ರಾಜ್ಯದ ಜನರಿಗೆ ಶಕ್ತಿ ತುಂಬುವ ಮತ್ತು ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ನಮ್ಮ ಸರಕಾರದ ಪಾತ್ರ ದೇಶದಲ್ಲೇ ಮೊದಲೆಂದು ಬಣ್ಣಿಸಿದರು.

ನೀರು ತುಂಬಿಸುವ ಯೋಜನೆಗಳಿಗೆ ಆದ್ಯತೆ

ಶಾಸಕ ಕೆ.ಎಂ.ಉದಯ ಮಾತನಾಡಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಪಕ್ಷ ಸಂಘಟನೆಯೊಟ್ಟಿಗೆ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವಂತೆ ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಚಾಲನೆ ದೊರೆತಿದ್ದು ಮುಂದಿನ ದಿನಗಳಲ್ಲೂ ಕೃಷಿ, ನೀರಾವರಿ, ರಸ್ತೆಗಳ ಅಭಿವೃದ್ಧಿ, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

25 ಲಕ್ಷ ಅನುದಾನ ಘೋಷಣೆ

ವಿಧಾನ ಪರಿಷತ್ ಸದಸ್ಯ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮಾತನಾಡಿ ಮದ್ದೂರು ಪಟ್ಟಣದಲ್ಲಿ ಭೂಮಿ ಪೂಜೆ ನೆರವೇರಿಸಿರುವ ಕಾಂಗ್ರೇಸ್ ಕಚೇರಿ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.

ಮಂಡ್ಯ ಜಿಲ್ಲೆ ಮದ್ದೂರು ವಿಧಾನಸಭಾ ಕ್ಷೇತ್ರದ 18ನೇ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಂ.ಉದಯ ಅವರು ನಿರೀಕ್ಷೆಗೂ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದು ಸಾರ್ವಜನಿಕರ ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಸದಾ ಇದ್ದು ಎಲ್ಲರೊಡನೆ ಒಂದಾಗಿದ್ದಾರೆಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಚಲುವರಾಜು, ಅಣ್ಣೂರ್ ರಾಜೀವ್, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಸದಸ್ಯ ಎಂ.ಕೆ.ಹರೀಶ್‌ಬಾಬು, ಪುರಸಭೆ ಅಧ್ಯಕ್ಷ ಕೋಕಿಲಾ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಸವರಾಜು, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ