ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆ.೨೨ರಂದು ಮಂತ್ರಾಲಯದಲ್ಲಿ ಇದೇ ಪ್ರಪ್ರಥಮ ಬಾರಿಗೆ ಆಯೋಜಿಸಿರುವ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಪ್ರದೀಪ್ಕುಮಾರ್ ಹೆಬ್ರಿ ಅವರಿಗೆ ಜೈ ಕರ್ನಾಟಕ ಪರಿಷತ್ತು ವತಿಯಿಂದ ಅಭಿನಂದಿಸಲಾಯಿತು.
ಮಂಡ್ಯ ನಗರದ ಡಾ.ಪ್ರದೀಪ್ಕುಮಾರ್ ಹೆಬ್ರಿ ನಿವಾಸಕ್ಕೆ ಜೈ ಕರ್ನಾಟಕ ಪರಿಷತ್ತು ಸಂಘಟನೆ ಸದಸ್ಯರು ಭೇಟಿ ನೀಡಿ ಹೆಬ್ರಿ ಅವರನ್ನು ಅಭಿನಂದಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೈ ಕರ್ನಾಟಕ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆ.೨೨ರಂದು ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದ ಗಡಿಭಾಗವಾದ ಆಂದ್ರಪ್ರದೇಶದ ಮಂತ್ರಾಲಯದ ಶ್ರೀ ಗುರುರಾಘವೇಂದ್ರರ ಸನ್ನಿಧಿಯ ಶ್ರೀ ಗುರುರಾಜಾಂಗಣದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಅಂತರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಪ್ರಪ್ರಥಮ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಜಿಲ್ಲೆಯ ಹಿರಿಯ ಸಾಹಿತಿ ಡಾ.ಪ್ರದೀಪ್ಕುಮಾರ್ ಹೆಬ್ರಿ ಅವರು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ಡಾ.ಪ್ರದೀಪ್ಕುಮಾರ್ ಹೆಬ್ರಿ ಅವರು ಮಂಡ್ಯ ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲಿ ಅಪಾರ ಹೆಸರು ಮಾಡಿದ್ದಾರೆ. ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಜನತೆಗೆ ಮತ್ತಷ್ಟು ಸಂತಸ ಮೂಡಿಸಿದೆ ಎಂದು ಹೇಳಿದರು.
ಜೈ ಕರ್ನಾಟಕ ಪರಿಷತ್ತು ಸಂಘಟನೆಯ ಶಾಖಾಧ್ಯಕ್ಷರು, ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದು, ಜಿಲ್ಲೆಯ ಸಾಹಿತ್ಯಾಸಕ್ತರು ಹೆಚ್ಚಿನ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸಂಘಟನೆಯ ಉಪಾಧ್ಯಕ್ಷ ಬಸವರಾಜು, ಖಜಾಂಚಿ ಕೆಂಪೇಗೌಡ, ಶಾಖಾಧ್ಯಕ್ಷರಾದ ಬಿ.ಪುಟ್ಟಸ್ವಾಮಿ, ಬಿ.ಡಿ.ಪುಟ್ಟಸ್ವಾಮಿ ವಿವಿಧ ಮಹಿಳಾ ಶಾಖಾಧ್ಯಕ್ಷರಾದ ಸುಜಾತ ಸಿದ್ದಯ್ಯ, ಸವಿತಾ ಜಯರಾಂ, ಮಂಜುಳಾ, ತನುಜಾ, ಸದಸ್ಯರಾದ ಶ್ರೀಹರಿ ಇತರರಿದ್ದರು.




