ಮಂಡ್ಯದ ನಗರಸಭೆಯ ಅಧಿಕಾರಿಗಳು ಮಂಡ್ಯನಗರದ ಪ್ರಮುಖ ಬಡಾವಣೆಗಳಲ್ಲಿ ಹಲವು ಅಂಗಡಿಗಳ ಮೇಲೆ ಮಂಗಳವಾರ ದಾಳಿ ನಡೆಸಿ ಪ್ಲಾಸ್ಟಿಕ್ ಕವರ್ ಗಳನ್ನು ವಶಕ್ಕೆ ಪಡೆದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ರವಿ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ಸಂದರ್ಭದಲ್ಲಿ ಟಿ. ರವಿ ಮಾತನಾಡಿ, ‘ಮಂಡ್ಯದಲ್ಲಿ ಪ್ಲಾಸ್ಟಿಕ್ ಹಾವಳಿಯು ಹೆಚ್ಚಾಗಿದ್ದು ಪ್ಲಾಸ್ಟಿಕ್ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಅಂಗಡಿಗಳಿಗೆ ಭೇಟಿ ನೀಡಿ ಸಾವಿರಾರು ರೂಪಾಯಿ ಬೆಲೆಬಾಳುವ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ದಂಡವನ್ನು ಸಹ ಕಟ್ಟಿಸಿ ಕೊಂಡಿದ್ದೇವೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೂಪದಲ್ಲಿ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದರಿಂದ ನಗರದ ಹಲವು ಬಡಾವಣೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಕಸದ ರಾಶಿಯಲ್ಲಿ ಸಿಗುವಂತಹ ಪ್ಲಾಸ್ಟಿಕ್ ವಸ್ತುವನ್ನು ಹಸು, ಕರು ಹಾಗೂ ಇನ್ನಿತರ ಪ್ರಾಣಿಗಳು ಸೇವಿಸಿ ತೊಂದರೆಯನ್ನು ಅನುಭವಿಸುತ್ತಿವೆ ಎಂದು ತಿಳಿದರು.
ಇಂದು ನಡೆದ ದಾಳಿಯಲ್ಲಿ ಕೇವಲ ಒಂದೇ ಅಂಗಡಿಯಲ್ಲಿ ಏಳು ಚೀಲಗಳಷ್ಟು ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ನಗರಸಭೆಯ ಪರಿಸರ ವಿಭಾಗದ ರುದ್ರೇಗೌಡ, ಆರೋಗ್ಯ ನಿರೀಕ್ಷಕ ಚೆಲುವರಾಜು ಸೇರಿದಂತೆ ನಗರಸಭೆಯ ಸಿಬ್ಬಂದಿ ವರ್ಗದವರು ಈ ಸಮಯದಲ್ಲಿ ಹಾಜರಿದ್ದರು.




