ಮಂಡ್ಯ ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಸರಗಳ್ಳನತ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಸುಮಾರು 5.70 ಲಕ್ಷ ಮೌಲ್ಯದ 100 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಲೋನ್ ರಿಕವರಿ ಕೆಲಸ ಮಾಡಿಕೊಂಡಿದ್ದ, ಮೂಲತಃ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಅಡ್ಡರಸ್ತೆಯ ಕುಮಾರ ಎಸ್ ಅಲಿಯಾಸ್ ಕಸ್ಟಡಿ (26), ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಮನಗರ ಜಿಲ್ಲೆ ಎಸ್.ಎಂ.ಹಳ್ಳಿಯ ನಾಗರಾಜ ಅಲಿಯಾಸ್ ಸತ್ತಾರ್ (27), ಹಾಗೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಮನಗರ ಹೊಸದೊಡ್ಡಿ ಗ್ರಾಮದ ನರಸಿಂಹ (25) ಬಂಧಿತ ಆರೋಪಿಗಳು.
ಏನಿದು ಘಟನೆ
ನಾಗಮಂಗಲ ತಾಲ್ಲೂಕಿನ ಕೊಣನೂರು ಗ್ರಾಮದ ಸುಶೀಲಮ್ಮ ಹಾಗೂ ಆಕೆಯ ಮೈದುನ ದೇವೇಗೌಡ ಕಳೆದ ಆಗಸ್ಟ್ 8ರಂದು ಮಧ್ಯಾಹ್ನ 12-15 ರ ಸಮಯದಲ್ಲಿ ಮೊಪೆಡ್ ನಲ್ಲಿ ಚೀಣ್ಯ-ಗಂಗವಾಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿ ನಲ್ಲಿ ಬಂದ ಮೂವರು ವ್ಯಕ್ತಿಗಳು ಮೊಪೆಡ್ ಅನ್ನು ಅಡ್ಡಹಾಕಿ ನನ್ನ ಸುಶೀಲಮ್ಮ ಅವರ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಠಾಣಿಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದ ಆರೋಪಿತರ ಪತ್ತೆಗಾಗಿ ನಾಗಮಂಗಲ ಸಿಪಿಐ ನಿರಂಜನ ಕೆ.ಎಸ್, ನಾಗಮಂಗಲ ಗ್ರಾಮಾಂತರ ಪಿಎಸ್ಐಗಳಾದ ರಾಜೇಂದ್ರ, ಲಕ್ಷ್ಮಣ ಕಾಮಣ್ಣನವರ್ (ಅಪರಾಧ), ಬೆಳ್ಳೂರು ಪಿಎಸ್ಐ ವೈ.ಎನ್.ರವಿಕುಮಾರ್, ಸಿಹೆಚ್’ಸಿಯವರಾದ ಪ್ರಶಾಂತ್ ಕುಮಾರ್, ಇಂದ್ರಕುಮಾರ್, ಮಧುಕುಮಾರ್, ರವಿಕಿರಣ್, ಲೋಕೇಶ್, ಸಿಪಿಸಿಯವನಾದ ಶಂಕರ್ನಾಯ್ಕ, ದಿನೇಶ, ಕಿರಣ್ ಕುಮಾರ್, ಪ್ರಕಾಶ್, ಸಿದ್ದಪ್ಪ ಅರವನ್ನೊಗಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ ಆ.17ರಂದು ಮಧ್ಯಾಹ್ನ ಮೂರು ಗಂಟೆಯ ಸಂದರ್ಭದಲ್ಲಿ ಮಾಗಡಿ-ಜಲಸೂರು ರಸ್ತೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಲಾಗಿದ್ದ ಕಾರನ್ನು ವಶಕ್ಕೆ ಪಡೆದಿದೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.




