Tuesday, November 24, 2026

ಪ್ರಾಯೋಗಿಕ ಆವೃತ್ತಿ

ಗ್ರೇಟರ್ ಬೆಂಗಳೂರಿಗೆ ಪರ್ಯಾಯವಾಗಿ ಕನ್ನಡ ಹೆಸರಿಡುವಂತೆ ನಾರಾಯಣ್ ಆಗ್ರಹ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬ ಹೆಸರಿಗೆ ಪರ್ಯಾಯವಾಗಿ ಕನ್ನಡ ಪರ ಹೆಸರಿಡುವಂತೆ ಜೈ ಕರ್ನಾಟಕ ಪರಿಷತ್ತು ಅಧ್ಯಕ್ಷ ಎಸ್.ನಾರಾಯಣ್ ಆಗ್ರಹಿಸಿದ್ದಾರೆ.

ಬಿ.ಬಿ.ಎಂ.ಪಿ. ನಾಮಫಲಕದಲ್ಲಿ ಕನ್ನಡವೇ ಉಸಿರು, ಕನ್ಮಡವೇ ಹಸಿರು ಅಂತ ಬರೆದುಕೊಂಡಿದ್ದರೂ ಗ್ರೇಟರ್ ಬೆಂಗಳೂರು ಎಂದು ಹೆಸರಿಟ್ಟಿರುವುದು ಖಂಡನೀಯ. ಇತರೆ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ ಇದು ಅನ್ವಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಮುಂಬೈ ಮತ್ತು ಚೆನ್ನೈನಂತಹ ಪುರಸಭೆಗಳು ತಮ್ಮ ರಾಜ್ಯದ ಅಧಿಕೃತ ಮತ್ತು ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಿವೆ. ಮುಂಬೈ ನಾಗರಿಕ ಸಂಸ್ಥೆಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆ ಎಂದು ಹೆಸರಿಸಲಾಗಿದೆ. ಅದೇ ರೀತಿ ಚೆನ್ನೈನ ನಾಗರಿಕ ಸಂಸ್ಥೆಯನ್ನು ‘ಪೆರುನಗರ ಚೆನ್ನೈ ಮಾನಾಗ್-ಆರಾಚಿ’ ಎಂದು ಹೆಸರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಕನ್ನಡ ಹೆಸರಿಡುವಂತೆ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಅವರು ಪತ್ರ ಬರೆದಿದ್ದರು, ಕನ್ನಡ ಹೆಸರಿಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಹೇಳಿದ್ದರೂ, ಇಲ್ಲಿಯವರೆಗೆ ಕನ್ನಡ ಹೆಸರಿನ ಯಾವುದೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವು ಪ್ರದೇಶಗಳಲ್ಲಿ ಕನ್ನಡೇತರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಐದು ನಿಗಮಗಳಲ್ಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವಂತೆ ಕೋರಿ ಈ ಹಿಂದೆ ಕೆಡಿಎ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೂ ಈವರೆಗೆ ಉತ್ತರ ನೀಡಿಲ್ಲ ಎಂದು ದೂರಿದ್ದಾರೆ.

ಗ್ರೇಟರ್ ಬೆಂಗಳೂರು ಅಥಾರಿಟಿ ಎಂಬ ಹೆಸರು ಹೆಚ್ಚಾಗಿ ಇಂಗ್ಲಿಷ್ ಭಾಷೆಯನ್ನು ಪ್ರತಿಬಿಂಬಿಸುವ ಪದವಾಗಿದ್ದು, ಹೆಸರಿಗೆ ಕನ್ನಡ ಸ್ಪರ್ಶ (ಕನ್ನಡತನ) ನೀಡುವ ಅವಶ್ಯಕತೆಯಿದೆ. ಕನ್ನಡ ಹೆಸರನ್ನು ಬಳಸಿದರೆ, ಭಾಷೆಗೆ ಅರ್ಹವಾದ ಗೌರವ ಸಿಗುವುದಲ್ಲದೆ, ಪ್ರಸ್ತಾವಿತ ಪ್ರಾಧಿಕಾರವು ಭಾವನಾತ್ಮಕವಾಗಿ ಕನ್ನಡಿಗರಿಗೆ ಹತ್ತಿರವಾಗುವ ಅವಕಾಶಗಳನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ, ಗ್ರೇಟರ್ ಬೆಂಗಳೂರು ಅಥಾರಿಟಿಗೆ ಪರ್ಯಾಯ ಕನ್ನಡ ಪದ ಬಳಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಒತ್ತಾಯಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ