ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಯ ಗೊಂದಲ ಬಗೆಹರಿಸಬೇಕೆಂದು ಒತ್ತಾಯಿಸಿ ಕಳೆದ 6 ದಿನಗಳಿಂದ ಜಾಗದ ಮಾಲೀಕರಾಗಿರುವ ಪ್ರೊ. ಎಂ.ಡಿ.ನಂಜುಂಡಸ್ವಾಮಿ ವಿಚಾರ ವೇದಿಕೆ ಸಂಚಾಲಕ ಎಚ್.ಸಿ. ಶಿವರಾಮು ಅವರು ನಡೆಸುತ್ತಿರುವ ಏಕಾಂಗಿ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಇಂದು ರೈತ ಸಂಘದ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.
ರೈತನಾಯಕಿ ಸುನಂದಾ ಜಯರಾಂ ಮಾತನಾಡಿ,ಹಲ್ಲೇಗೆರೆ ಗ್ರಾಮದ ನಿವಾಸಿ ಶಿವರಾಮ್ ಅವರಿಗೆ ಸೇರಿದ ಜಾಗವನ್ನು ಸರ್ಕಾರಿ ರಸ್ತೆಯನ್ನಾಗಿ ಮಾಡಿದ್ದಾರೆ. ಈಗಲೂ ಅವರ ಸ್ವತ್ತಿನಲ್ಲಿ ಪ್ರಸ್ತುತ ವಾಹನ ಸಂಚಾರ ನಡೆಯುತ್ತಿದೆ. ಸರ್ಕಾರಕ್ಕೆ ಸೇರಿದ ಜಾಗವಿದ್ದರೂ ಹಲವು ವರ್ಷಗಳಿಂದ ರಸ್ತೆ ನಿರ್ಮಾಣ ಮಾಡುತ್ತಿಲ್ಲ.ಈ ಸಮಸ್ಯೆಯನ್ನು ಸರಿಪಡಿಸುವಂತೆ ಹಲವು ಬಾರಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಜುಲೈ 6ರಿಂದ ಶಿವರಾಮು ಅವರ ಜಾಗಕ್ಕೆ ಬೇಲಿ ಹಾಕಿ ಕೊಳ್ಳುವುದಾಗಿ ನಾಮಫಲಕ ಆಳವಡಿಸಲಾಗಿತ್ತು ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಕುಂಞ ಅಹ್ಮದ್ ಅವರು ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ,ಇನ್ನೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಜಾಗಕ್ಕೆ ಸಂಬಂಧಿಸಿದ ದಾಖಲಾತಿ ತರುವಂತೆ ಸೂಚನೆ ನೀಡಿದ್ದರೂ ಈವರೆಗೆ ಸಮಸ್ಯೆ ಬಗೆಹರಿಯದೆ ನಿರ್ಲಕ್ಷ ಮಾಡಲಾಗುತ್ತಿದೆ. ಮಾಲೀಕರ ತಾಳ್ಮೆಗೂ ಮಿತಿ ಇದೆ. ಮಾಲೀಕರು ತಮ್ಮ ಜಾಗವನ್ನು ಭದ್ರ ಮಾಡಿಕೊಳ್ಳಲು ನ್ಯಾಯಾಲಯದಿಂದಲೇ ಅನುಮತಿ ಪಡೆದುಕೊಂಡಿದ್ದಾರೆ.ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನೇತೃತ್ವದಲ್ಲಿ ಸಭೆ ಆಯೋಜಿಸಬೇಕು.ಶಿವರಾಮು ಅವರಿಗೆ ಸೇರಿದ ಜಾಗವನ್ನು ಅವರಿಗೇ ಕೊಡಿಸಿ ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಎಚ್ಚರಿಸಿದರು.
ಉಪವಾಸ ಸತ್ಯಾಗ್ರಹ ನಿರತ ಎಚ್.ಸಿ ಶಿವರಾಮು ಅವರಿಗೆ ರೈತ ಸಂಘದ ಪದಾಧಿಕಾರಿಗಳಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದರು.




