ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಸವರಾಜ ಬೊಮ್ಮಾಯಿಯ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಆದ್ದರಿಂದ ಈ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ನೀಡಿರುವ ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಕಳೆದ ಹತ್ತು ದಿನಗಳಲ್ಲಿ ಮಂಗಳೂರು ಭಾಗದಲ್ಲಿ ಮೂರು ಹತ್ಯೆಗಳು ನಡೆದಿರುವುದು ಬಿಜೆಪಿ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎನ್ನುವುದಕ್ಕೆ ಸಾಕ್ಷಿ ಈ ಹಿಂದೂ ಸರಣೀ ಕೊಲೆಗಳು ಎಂದರು.
ತನ್ನದೇ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಗಳನ್ನು ತಡೆಯಲು ಆಗದಿದ್ದ ಮೇಲೆ ಇನ್ನು ಜನಸಾಮಾನ್ಯರ ರಕ್ಷಣೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರುಗಳೇ ರಾಜ್ಯದ ಬಿಜೆಪಿ ಸರ್ಕಾರ ದುರ್ಬಲವಾದ ಸರ್ಕಾರ ಎಂದು ಹೇಳುತಿದ್ದಾರೆ. ಗೃಹ ಮಂತ್ರಿ ಆರಗ ಜ್ಙಾನೇಂದ್ರ ಮತ್ತು ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ನೀಡಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಅವರ ಕಾರ್ಯಕರ್ತರೇ ಹೇಳುತ್ತಿರುವುದು ಅವರ ದುರಾಡಳಿತವನ್ನು ತೋರುತ್ತದೆ ಎಂದರು.
ಬಿಜೆಪಿಯ ವೋಟ್ ಬ್ಯಾಂಕ್ ಕಾರಣಕ್ಕಾಗಿ ಕರಾವಳಿಯಲ್ಲಿ ಮತ್ತು ರಾಜ್ಯದಾದ್ಯಂತ ಹಿಂದೂ- ಮುಸ್ಲಿಂ ಎರಡು ಸಮುದಾಯಗಳ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಒಂದು ಕಡೆ ಭ್ರಷ್ಟಾಚಾರವು ಉತ್ತುಂಗದಲ್ಲಿದ್ದರೆ ಮತ್ತೊಂದು ಕಡೆ 40% ಪರ್ಸೆಂಟ್ ಕಮಿಷನ್ ಪಡೆಯುತ್ತಿರುವ ಬಗ್ಗೆ ರಾಜ್ಯಪಾಲರಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುತ್ತಿರುವ ಕಾರ್ಯ ಜೋರಾಗಿ ನಡೆಯುತ್ತಿದೆ.
ಮತ್ತೊಂದು ಕಡೆ ಪಿಎಸ್ಐ ನೇಮಕಾತಿ ಹಗರಣ ರಾಜ್ಯದ ಇತಿಹಾಸದಲ್ಲಿ ಎಡಿಜಿಪಿ ಮಟ್ಟದ ಹಿರಿಯ ಐಪಿಎಸ್ ಅಧಿಕಾರಿ ಬಂಧನವಾಗಿದೆ ಎಂದು ಕಿಡಿ ಕಾರಿದರು.




