Saturday, November 21, 2026

ಪ್ರಾಯೋಗಿಕ ಆವೃತ್ತಿ

ಹಿಂದೂ, ಮುಸ್ಲಿಮರು ಸಮಾಜದಲ್ಲಿ ಒಟ್ಟಿಗೆ ಬಾಳಬೇಕು, ಗಲಭೆ ಬೇಡ – ಚಲುವರಾಯಸ್ವಾಮಿ

ಕೋಮು ಗಲಭೆ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಅದು ಜಿಲ್ಲೆಗೆ ಕಳಂಕ. ಅಧಿಕಾರಿಗಳು ಜಿಲ್ಲೆಯಲ್ಲಿ ಕೋಮು ಗಲಭೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.

ಮದ್ದೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಳೆ ಮದ್ದೂರು ತಾಲ್ಲೂಕಿನಲ್ಲಿ ನಡೆಯಲಿರುವ ಸಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ಭಾಗವಹಿಸಬೇಕು ಹಾಗೂ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿದೆ ಎಂದರು.

ಪೊಲೀಸ್ ಇಲಾಖೆ ವತಿಯಿಂದ ದೊಡ್ಡ, ದೊಡ್ಡ ಗಲಭೆಗಳನ್ನು ನಿಯಂತ್ರಿಸಲಾಗಿದೆ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಲಾಗಿದೆ. ಮದ್ದೂರು ತಾಲ್ಲೂಕಿನ ನಡೆದಿರುವ ಗಲಭೆಗೆ ಕಾರಣವಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಶಾಂತಿ ಕದಡುವ ಕಿಡಿಗೇಡಿಗಳು ನಿಮ್ಮ ಸುತ್ತಮುತ್ತಲೇ ಇರುತ್ತಾರೆ. ಸಾರ್ವಜನಿಕರು ಹಾಗೂ ಮುಖಂಡರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಕಿವಿಮಾತು ಹೇಳಿದರು.

ಹಿಂದೂ, ಮುಸ್ಲಿಂ ಸಮುದಾಯದವರು ಸಮಾಜದಲ್ಲಿ ಒಟ್ಟಿಗೆ ಬಾಳಬೇಕು, ಕೆಲವು ಕಿಡಿಗೇಡಿಗಳು ನಡೆಸುವ ಕೃತ್ಯಕ್ಕೆ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ. ವಿವಿಧ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳಲ್ಲಿ ತಾಳ್ಮೆಯಿಂದ ವರ್ತಿಸಿ ಎಂದರು.

ಕೋಮು ಗಲಭೆಗಳು ಬೇಡ

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಹೆಸರುವಾಸಿಯಾಗಿರುವ ಮದ್ದೂರು ತಾಲ್ಲೂಕಿನಲ್ಲಿ ಕೋಮು ಗಲಭೆಗಳು ಬೇಡ. ಸರ್ಕಾರ ಜಿಲ್ಲೆಗೆ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಸೇರಿದಂತೆ ನಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಿ ಎಂದರು.

ಶಾಂತಿ ಕದಡುವುದು ಬೇಡ

ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಅವರು ಮಾತನಾಡಿ ರಾಜ್ಯದಲ್ಲಿ 77 ಸಾವಿರ ಗಣೇಶ ಮೂರ್ತಿಗಳು ಹಾಗೂ ಮಂಡ್ಯದಲ್ಲಿ 3,700 ಗಣೇಶ ಪ್ರತಿಷ್ಠಾಪನೆ ಆಗಿದೆ. ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಿಡಿಗೇಡಿಗಳು ಎಸಗಿರುವ ಅಹಿತಕರ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ಶಾಂತಿ ಕದಡುವುದು ಬೇಡ. ತಪ್ಪಿತಸ್ಥರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು

ಶಾಸಕ ಉದಯ್ ಅವರು ತಾಲ್ಲೂಕಿನ ಅಭಿವೃದ್ಧಿಗೆ 1,300 ಕೋಟಿ ರೂ. ಅನುದಾನ ತಂದಿದ್ದಾರೆ. ಬಹಳ ವರ್ಷಗಳಿಂದ ತಾಲ್ಲೂಕಿನಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ಉದಯ್ ಅಭಿವೃದ್ಧಿ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ ಎಂದರು.

ಘಟನೆಯಿಂದಾಗಿ ಬೇಸರವಾಗಿದೆ

ಜಿಲ್ಲಾಧಿಕಾರಿ ಡಾ ಕುಮಾರ ಅವರು ಮದ್ದೂರಿನಲ್ಲಿ ನಡೆದ ಘಟನೆಯಿಂದಾಗಿ ಬೇಸರವಾಗಿದೆ. ಗಣೇಶ ಹಬ್ಬದ ಮುಂಚಿತವಾಗಿಯೇ ಎಲ್ಲಾ ಧರ್ಮದ ಮುಖಂಡರುಗಳೊಂದಿಗೆ ಸಭೆ ಕರೆದು ವ್ಯವಸ್ಥಿತವಾಗಿ ಹಬ್ಬವನ್ನು ಆಚರಿಸಲು ಸೂಚಿಸಲಾಗಿತ್ತು. ವಿವಿಧತೆಯಲ್ಲಿ ಏಕತೆ ಎಂದು ಕೇವಲ ಮಾತಿನಲ್ಲಿ ಹೇಳಿದರೆ ಸಾಲದು ಅದನ್ನು ಅನುಸರಿಸಬೇಕು. ನಾವೆಲ್ಲರೂ ಸಹ ಸೌಹಾರ್ದತೆಯಿಂದ ಬದುಕಬೇಕು. ಧಾರ್ಮಿಕ ಭಾವನೆಗೆ ದಕ್ಕೆ ತರುವಂತಹ ಕೆಲಸ ಯಾರು ಮಾಡಬಾರದು ಹೇಳಿದರು.

ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ, ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವರಿಗೆ ಕಾನೂನು ಪಾಠ ಕಲಿಸುತ್ತದೆ. ನಮ್ಮ ಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಅದರ ಜವಾಬ್ದಾರಿಯನ್ನು ನಾವು ಹೊರಬೇಕು ಮಕ್ಕಳಿಗೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕೆಲಸಗಳಲ್ಕಿ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸದಂತೆ ತಿಳಿ ಹೇಳಿ ಎಂದರು.

ಸುಳ್ಳುಸುದ್ದಿ ಹರಡುವವರ ವಿರುದ್ದ ಕಾನೂನು ಕ್ರಮ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಸಿ‌ ಸಿ ಟಿ ವಿ ಹಾಗೂ ತಂತ್ರಜ್ಞಾನದ ಸಹಾಯದಿಂದ ಘಟನೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಘಟನೆ ಆಕಸ್ಮಿಕವೋ ಅಥವಾ ಪೂರ್ವನಿಯೋಜಿತವೂ ಎಂದು ತನಿಖೆ ನಡೆಸಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪಸರಿಸುವ ಮೂಲಕ ಸಮಾಜದ ಶಾಂತಿಯನ್ನು ಕದಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದರು.

ನಾಳೆ ಸಾಮೂಹಿಕ ಗಣೇಶ ವಿಗ್ರಹ ವಿಸರ್ಜನೆ ಆಯೋಜಿಸಲಾಗಿದೆ ಪೊಲೀಸ್ ಇಲಾಖೆ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಿಶೇಷ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಲಾಗಿದೆ. ಮದ್ದೂರು ನಗರದಲ್ಲಿ ಶಾಂತಿ ಕಾಪಾಡಲು ಸಿದ್ದರಿದ್ದೇವೆ ಪೊಲೀಸ್ ಇಲಾಖೆ ನಿಮ್ಮ ಜೋತೆ ಇದೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ