ಮಂಡ್ಯ ನಗರದ ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ನಾಮಫಲಕ ಹಾಕುವಂತೆ ಒತ್ತಾಯಿಸಿ ದಲಿತ, ಪ್ರಗತಿಪರ ಸಂಘಟನೆ ಹಾಗೂ ಪರಿಶಿಷ್ಟ ನಿವಾಸಿಗಳು ಮಂಡ್ಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ದಲಿತ ಪ್ರಗತಿಪರ ಸಂಘಟನೆ ಕಾರ್ಯಕರ್ತರು, ಮಂಡ್ಯ ನಗರದ ಪರಿಶಿಷ್ಟ ನಿವಾಸಿಗಳು ಜಿಲ್ಲಾಧಿಕಾರಿ, ನಗರಸಭೆ ಅಧ್ಯಕ್ಷರು, ಆಯುಕ್ತರಿಗೆ ಮನವಿ ಸಲ್ಲಿಸಿ ಡಾ. ಬೆಸಗರಹಳ್ಳಿ ರಾಮಣ್ಣ ವೃತದಿಂದ ಡಾ.ಬಿ ಆರ್ ಅಂಬೇಡ್ಕರ್ ವೃತ್ತದ ವರೆಗೆ ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ಎಂದು ನಗರಸಭೆಯು 1976 ರಲ್ಲಿ ನಿರ್ಣಯ ಮಾಡಿದೆ ಅದರಂತೆ ರಸ್ತೆಗೆ ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಮೈಸೂರು ವಿಭಾಗಾಧಿಕಾರಿಗಳು ಮಂಡ್ಯ ನಗರದ ಯಾವುದಾದರೂ ರಸ್ತೆಗೆ ಡಾ. ಬಿ ಆರ್ ಅಂಬೇಡ್ಕರ್ ರವರ ಹೆಸರನ್ನು ನಾಮಕರಣ ಮಾಡಬೇಕು ಎಂದು1975 ರಲ್ಲಿ ಪತ್ರ ಬರೆದಿದ್ದರು, ಅದರಂತೆ 15 – 6 – 1976 ರಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನೂರಡಿ ರಸ್ತೆಗೆ ಡಾ ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ಎಂದು ನಾಮಕರಣ ಮಾಡುವ ನಿರ್ಣಯ ಕೈಗೊಂಡು ರಸ್ತೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರಸ್ತೆ ನಾಮಫಲಕ ದಾಖಲಾಗಿತ್ತು, ಇಲ್ಲಿನ ವರ್ತಕರು ಅಂಗಡಿ ನಾಮಫಲಕಗಳಲ್ಲಿ ಹಾಗೂ ಸ್ಥಳೀಯ ನಿವಾಸಿಗಳು ಸಹ ವಿಳಾಸದಲ್ಲಿ ಇದೇ ಹೆಸರನ್ನು ಬಳಕೆ ಮಾಡಿದ್ದಾರೆ, ನಗರಸಭೆಯ ಎಲ್ಲಾ ದಾಖಲಾತಿಗಳಲ್ಲೂ ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ಎಂದು ನಮೂದಿಸಲಾಗಿದೆ.

ರಸ್ತೆಯು ನೂರು ಅಡಿ ಅಗಲ ಇದ್ದಿದ್ದರಿಂದ ಜನತೆ ನೂರಡಿ ರಸ್ತೆ ಎಂದು ಕರೆಯುತ್ತಿದ್ದರು, ಇದನ್ನೇ ತಪ್ಪಾಗಿ ಅರ್ಥೈಸಿ ಕೊಳ್ಳಲಾಗಿದ್ದು,,ನಗರಸಭೆಯ ಅಧಿಕಾರಿಗಳು ಸದರಿ ರಸ್ತೆ ವಿಚಾರವಾಗಿ ಯಾವುದೇ ದಾಖಲಾತಿ ಪರಿಶೀಲನೆ ಮಾಡದೆ, ಸದಸ್ಯರು ಕೂಡ ಯಾವುದೇ ಮಾಹಿತಿ ತಿಳಿಯುವ ಗೋಜಿಗೆ ಹೋಗದೆ 28 -10 – 2022 ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪರ್ಯಾಯ ಹೆಸರು ನಾಮಕರಣ ಮಾಡಲು ನಿರ್ಣಯ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ. ಬಿ ಆರ್ ಅಂಬೇಡ್ಕರ್ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ನಾಮಕರಣ ನಿರ್ಣಯ ಕೈಗೊಂಡಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿ ಸದರಿ ರಸ್ತೆ ವಿಚಾರವಾಗಿ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಸಾಕಷ್ಟು ಬಾರಿ ಚರ್ಚೆ ನಡೆದಿದ್ದು,ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಬಾರದು ಎಂದು ಒತ್ತಾಯಿಸಿದ್ದರೂ ಸಹ ಒಮ್ಮತದ ನಿರ್ಧಾರ ಮಾಡಿರುವುದಿಲ್ಲ. ನಗರಸಭೆ ಚುನಾಯಿತ ಜನಪ್ರತಿನಿಧಿಗಳ ದ್ವಂದ್ವ ನೀತಿ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತಿದೆ.ಈಗಾಗಲೇ ನಾಮಕರಣ ಮಾಡಿರುವ ರಸ್ತೆಗೆ ಮತ್ತೊಂದು ಹೆಸರು ನಾಮಕರಣ ಮಾಡಲು ನಿರ್ಣಯ ಮಾಡಿರುವುದು ಸ್ಥಳೀಯ ಸಂಸ್ಥೆ ನಿಯಮಾವಳಿ ಉಲ್ಲಂಘನೆ , ಇಂತಹ ನಿಯಮ ಬಾಹಿರ ನಿರ್ಣಯವನ್ನು ವಿರೋಧ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ಮಾಡಲು ನಗರಸಭೆ ಕೈಗೊಂಡಿರುವ ನಿರ್ಣಯ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಆಗಿದ್ದು, ಹಾಗಾಗಿ ನಗರಸಭೆಯು 1976ರ ನಿರ್ಣಯದಂತೆ ಕ್ರಮ ಕೈಗೊಂಡು ಇತ್ತೀಚಿನ ನಿರ್ಣಯ ರದ್ದು ಮಾಡಿ ಸದರಿ ರಸ್ತೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ ನಾಮಫಲಕ ಹಾಕಲು ಮುಂದಾಗಬೇಕು, ನಾಡು ಕಟ್ಟಿದ ನಾಡಪ್ರಭು ಕೆಂಪೇಗೌಡರ ಹೆಸರನ್ನು ಯಾವುದಾದರೂ ರಸ್ತೆ, ಬಡಾವಣೆ ಹಾಗೂ ವೃತ್ತಕ್ಕೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ನಗರಸಭೆಯ ಸಾಮಾನ್ಯ ಸಭೆ ಇದೇ ತಿಂಗಳ 15 ರಂದು ನಿಗದಿಯಾಗಿದ್ದು, ಅಂದು ಜಿಲ್ಲಾಧಿಕಾರಿ ಕಚೇರಿ ಎದುರಿನ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ನಡೆಸಲಾಗುವುದು ಹಾಗೊಮ್ಮೆ ನಗರಸಭೆ ಒಮ್ಮತದ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದೆಂದು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರಗೋಡು, ವೆಂಕಟಗಿರಿಯಯ್ಯ, ಎಂ ವಿ ಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಪತ್ರಕರ್ತರಾದ ಸೋಮಶೇಖರ್ ಕೆರಗೋಡು, ಎಂ ಎಸ್ ಮೂರ್ತಿ, ಬಿ.ಪಿ ಪ್ರಕಾಶ್, ಬಹುಜನ ಸಮಾಜ ಪಕ್ಷದ ಶಿವಶಂಕರ್, ಜಾತ್ಯಾತೀತ ಜನತಾದಳದ ಎಸ್. ಡಿ ಜಯರಾಮ್, ಎಂ ಎಲ್ ತುಳಸೀದರ್, ಸಂವಿಧಾನ ಸೇನೆಯ ಎಚ್ ಎನ್ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿ ಯರ್ಸ್ ನ ಹೆಚ್ ಜಿ ಗಂಗರಾಜು, ನಗರಸಭೆ ಸದಸ್ಯರಾದ ಎಂ ಸಿ ಶಿವಪ್ರಕಾಶ್, ಎಂ ಎನ್ ಶ್ರೀಧರ್, ಗೀತಾ ಕುಮಾರಸ್ವಾಮಿ, ಟಿ ಹರೀಶ್ ಕುಮಾರ್, ಮುಖಂಡರಾದ ಗುರುಮೂರ್ತಿ, ಎಂ ಬಿ ಶಿವಶಂಕರ್, ಎಂ ಪಿ ಶಿವರಾಮಮೂರ್ತಿ, ಲೋಕೇಶ್ವರ್, ಶಶಿಕುಮಾರ್, ಎಂ ಬಿ ನಟರಾಜ್, ಎಸ್. ಡಿ ನಾರಾಯಣಸ್ವಾಮಿ, ನಗರಸಭೆ ಮಾಜಿ ಉಪಾಧ್ಯಕ್ಷರಾದ ಕುಮಾರಸ್ವಾಮಿ, ಸುಜಾತ ಮಣಿ, ನಾವು ದ್ರಾವಿಡ ಕನ್ನಡಿಗರು ಚಳವಳಿಯ ಸಚಿನ್ ಡಿ ಎಸ್ ನೇತೃತ್ವ ವಹಿಸಿದ್ದರು.




