ಪ್ರತಿ ಇಲಾಖೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನ ಬಿಡುಗಡೆಯಾಗುತ್ತಿದ್ದು,ಸರ್ಕಾರದ ಯೋಜನೆಗಳ ಬಗ್ಗೆ ಯೋಜನೆಗಳ ಕುರಿತು ಅರಿವು ಮೂಡಿಸಿ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಜ್ಯ ನೋಡಲ್ ಏಜೆನ್ಸಿ ಸಲಹೆಗಾರರು ಹಾಗೂ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ. ಇ ವೆಂಕಟಯ್ಯ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆ ಮತ್ತು ದೌರ್ಜನ್ಯ ಪ್ರತಿಬಂಧ ಕಾಯ್ದೆ-1989ನ್ನು ಅನುಷ್ಠಾನಗೊಳಿಸುವ ಕುರಿತು ಅಧಿಕಾರಿಗಳಿಗಾಗಿ ಯೋಜನೆಗಳ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ 2013ರಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪ ಹಂಚಿಕೆ ಅಧಿನಿಯಮವನ್ನು ಜಾರಿಗೆ ತರಲಾಯಿತು. ಈ ಅಧಿನಿಯಮವನ್ನು ಜಾರಿಗೆ ತಂದಿರುವ 2ನೇ ರಾಜ್ಯ ಕರ್ನಾಟಕ ಎಂದರು.
ಪ್ರಸ್ತುತ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ತಕ್ಕಂತೆ ಅಭಿವೃದ್ಧಿ ಆಯವ್ಯಯದಲ್ಲಿ (Development Budget) ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯಡಿ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಈ ಕಾಯ್ದೆಯಡಿಯಲ್ಲಿ ಯಾವುದೇ ಅನುದಾನ ವೆಚ್ಚ ಮಾಡದೇ ಇದ್ದಲ್ಲಿ ಲೆಕ್ಕಸಾಗಣೆ ಮಾಡಿದ ಬಳಿಕ ತದನಂತರದ ಆರ್ಥಿಕ ವರ್ಷದಲ್ಲಿ ಒದಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯತೆ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಶಿಷ್ಟ ಜಾತಿ/ಪ.ಪಂಗಡದ ಫಲಾನುಭವಿಗಳ ವೈಯಕ್ತಿಕ ಅಭಿವೃದ್ಧಿಗಾಗಿ ಅನುಷ್ಠಾನ ಮಾಡುವ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲಾಗುವುದು ಎಂದರು.
ಪ.ಜಾತಿ/ಪ.ಪಂಗಡದ ಜನಸಂಖ್ಯೆ ಅತೀ ಹೆಚ್ಚು ಇರುವ ಗ್ರಾಮಗಳ ಕಾಲೋನಿಗಳ ಅಭಿವೃದ್ಧಿ ಮತ್ತು ಇತರೆ ವಾಸಸ್ಥಳಗಳ ಅಭಿವೃದ್ಧಿಗೆ ತಗಲುವ ವೆಚ್ಚವನ್ನು ಭರಿಸುವುದು. ಸದರಿ ಗ್ರಾಮಗಳನ್ನು ಆದ್ಯತೆ ಮೇಲೆ ಅಧಿಕಾರಿಗಳು ಆಯ್ಕೆ ಮಾಡಬೇಕು. ಎಲ್ಲಾ ಜನರಿಗೆ ಉಪಯೋಗವಾಗುವ ಸಾಮಾಜಿಕ ವಲಯ (ಶಿಕ್ಷಣ, ಆರೋಗ್ಯ, ಮಹಿಳೆ, ಮಕ್ಕಳು, ಕಾರ್ಮಿಕ, ದೈಹಿಕ ವಿಕಲಚೇತನರು) ಯೋಜನೆಗಳಲ್ಲಿ ಪ.ಜಾತಿ/ಪ.ಪಂಗಡದ ಜನಸಂಖ್ಯೆಯ ಆಧಾರಕ್ಕನುಗುಣವಾಗಿ ವೆಚ್ಚ ಭರಿಸಲಾಗುವುದು ಎಂದರು
ಇದೇ ವೇಳೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಗಳ ಕುರಿತು ಮಾಹಿತಿ ಪಡೆದು ಸಲಹೆ ನೀಡಿದರು.

ಇದೇ ವೇಳೆ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕೋಶದ ನಿರ್ದೇಶಕರಾದ ಊರ್ಮಿಳ ಅವರು ಮಾತನಾಡಿ, ಸಾರ್ವಜನಿಕರ ಮಾಹಿತಿಗಾಗಿ ಪ್ರಗತಿ ವರದಿಯನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಪರಿಶೀಲನೆ ಮಾಡಿ, ವೆಬ್ ಪೋರ್ಟಲ್ ನಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿ ಯೋಜನೆವಾರು, ಗ್ರಾಮಪಂಚಾಯತ್ ಹಾಗೂ ಮತಕ್ಷೇತ್ರವಾರು ಫಲಾನುಭವಿಗಳ ವಿವರವನ್ನು
ಪ್ರಕಟಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪ್ರಬುದ್ಧ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದ್ದು, ವಾರ್ಷಿಕ 8 ಲಕ್ಷ ಆದಾಯ ಮಿತಿಯಲ್ಲಿರುವವರಿಗೆ ಶೇ.100/- ವೆಚ್ಚ ಭರಿಸಲಾಗುತ್ತಿದೆ. ವಾರ್ಷಿಕ ಆದಾಯ ರೂ 8 ಲಕ್ಷಕ್ಕಿಂತ ಮೇಲ್ಪಟ್ಟವರೆಗೆ ಶೇ.50 ಮತ್ತು ರೂ.15.00 ಲಕ್ಷರೂ .25.00 ಲಕ್ಷದವರೆಗೆ ಶೇ.33 ಶಿಕ್ಷಣ ವೆಚ್ಚ ಭರಿಸಲಾಗುತ್ತಿದೆ ಎಂದರು.
ವಿವಿಧ ಯೋಜನೆಗಳಡಿಯಲ್ಲಿ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು. ಅರ್ಜಿಗಳನ್ನು ಆಹ್ವಾನಿಸದೇ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸೂಕ್ತವಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಪಾಲಿಸತಕ್ಕದ್ದು. ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಸೂಚನಾ ಫಲಕದಲ್ಲಿ ಪ್ರಕಟಿಸುವುದು ಮತ್ತು ಒಂದೇ ಫಲಾನುಭವಿಗೆ ಎರಡೆರಡು ಬಾರಿ ಸೌಲಭ್ಯ ನೀಡುವಂತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಆರ್.ಐಶ್ವರ್ಯ, ಬೆಂಗಳೂರು ಸಮಾಜ ಕಲ್ಯಾಣಾಧಿಕಾರಿ ಸಿಂಧು, ಜಿ.ಪಂ.ಉಪ ಕಾರ್ಯದರ್ಶಿಗಳಾದ ಸರಸ್ವತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ, ಹಿಂದುಳಿದ ಕಲ್ಯಾಣಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕಾವ್ಯಶ್ರೀ ಸೇರಿದಂತೆ ಇತರರು ಉಪಸ್ಥಿತರಿದ್ದರು.




