Monday, November 23, 2026

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳದಲ್ಲಿ ಹೆಂಗಸರು, ಯುವತಿಯರನ್ನು ಕೊಂದವರು ಯಾರು? ; ನಾಳೆ ನೊಂದ ಕುಟುಂಬದರೊಂದಿಗೆ ಸಂವಾದ

ಧರ್ಮಸ್ಥಳದ ಆಸುಪಾಸಿನಲ್ಲಿ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಹತ್ಯೆಗೀಡಾದ ಕೆಲವು ಮಹಿಳೆಯರನ್ನು ಕೊಂದವರಾರು ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಆ ಕುಟುಂಬಗಳು ಇಲ್ಲಿಯವರೆಗೂ ಅದೇ ನೋವಿನಲ್ಲಿದ್ದಾರೆ. ಆ ಕುಟುಂಬಗಳ ಸದಸ್ಯರನ್ನು ಬೆಂಗಳೂರಿನ ಗಾಂಧಿಭವನದ ಬಾಪು ಸಭಾಂಗಣದಲ್ಲಿ ಸೆ.16ರಂದು ಮಂಗಳವಾರ ಇಡೀ ದಿನ ‘ನೊಂದವರೊಂದಿಗೆ ನಾವು – ನೀವು’ ಎಂಬ ಸಾರ್ವಜನಿಕ ಸಂವಾದ ಮತ್ತು ಆಂದೋಲನ ನಡೆಯಲಿದೆ.

ಧರ್ಮಸ್ಥಳದಲ್ಲಿ ಹೆಂಗಸರು, ಯುವತಿಯರನ್ನು ಕೊಂದವರು ಯಾರು? ಅತ್ಯಾಚಾರ, ಕೊಲೆ, ಅನುಮಾನಾಸ್ಪದ ಸಾವುಗಳು ಬಗೆಹರಿದಿಲ್ಲ ಏಕೆ? ಸರ್ಕಾರ ಎಸ್ಐಟಿ ತನಿಖೆಗೆ ಪೂರ್ಣ ಅಧಿಕಾರ ನೀಡಬೇಕಲ್ಲವೇ ? ಎಂಬ ಪ್ರಶ್ನೆಗಳ ಸುತ್ತಾ ಸಂತ್ರಸ್ತರೊಂದಿಗೆ ಸಂವಾದ ನಡೆಯಲಿದೆ. ನಾಡಿನ ಹಲವಾರು ಮಹಿಳಾ ಸಂಘಟನೆಗಳು, ಕಾನೂನು ತಜ್ಞರು, ಮಹಿಳೆಯರ ಪರ ಕಾಳಜಿಯಿರುವ ನಾಗರಿಕರು, ಹಲವು ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 11.30ಕ್ಕೆ ನೊಂದ ಕುಟುಂಬಗಳ ಜೊತೆಗೆ ವೇದಿಕೆ ಮೇಲಿರುವ ಮತ್ತು ಮುಂಭಾಗದಲ್ಲಿರುವ ಎಲ್ಲರೂ ಸೇರಿ ಸಾಮೂಹಿಕವಾಗಿ ʼಸಹೋದರಿಯರಿಗೆ ಒಂದು ಮನವಿʼ (ಅಪೀಲ್ ಲೆಟರ್) ಬಿಡುಗಡೆ ಮಾಡುವುದರೊಂದಿಗೆ ‘ಸಹೋದರಿಯರಿಗೆ ಮನವಿʼ ಓದುವ ಮೂಲಕ ಅಕ್ಕೈ ಪದ್ಮಶಾಲಿ (ಸಾಮಾಜಿಕ ಕಾರ್ಯಕರ್ತರು, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರರು), ಅಮ್ಮುಲು (ತ್ಯಾಜ್ಯ ಕಾರ್ಮಿಕರ ಸಂಘ), ಮಂಗಳಾ (ನಾವೆದ್ದು ನಿಲ್ಲದಿದ್ದರೆ ವೇದಿಕೆ) ಹಾಗೂ ಚಂಪಾವತಿ (ಮಾನಸ ಬಳಗ) ಕಾರ್ಯಕ್ರಮ ಉದ್ಘಾಟನೆ ಮಾಡುವರು.

ಬೆಳಗಿನ ಗೋಷ್ಟಿಯಲ್ಲಿ ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ಸ್ ವರ್ಕರ್ಸ್ ಯೂನಿಯನ್ ಮುಖಂಡರಾದ ಡಾ. ಆರ್.ಪ್ರತಿಭಾ ಕಾರ್ಯಕ್ರಮ ನಡೆಸಿಕೊಡುವರು. ಮಹಿಳಾಪರ ಚಿಂತಕರು, ಬರಹಗಾರರಾದ ಡಾ. ಆರ್. ಸುನಂದಮ್ಮ ಅಧ್ಯಕ್ಷತೆ ವಹಿಸುವರು. ಮಹಿಳಾ ಮುನ್ನಡೆ ಸಂಘಟನೆಯ ಮಲ್ಲಿಗೆ ಸಿರಿಮನೆ ಪ್ರಸ್ತಾವನೆ ಮಾಡುವರು.

ನೊಂದ ಕುಟುಂಬಗಳ ಸದಸ್ಯರು ಮತ್ತು ನೊಂದವರ ಜೊತೆ ಹೋರಾಟಗಾರ್ತಿಯರಾ ಕೆ.ಎಸ್. ವಿಮಲಾ (ಜನವಾದಿ ಮಹಿಳಾ ಸಂಘಟನೆ), ಡಾ.ದು.ಸರಸ್ವತಿ (ಮಹಿಳಾ ಹೋರಾಟಗಾರರು, ದಲಿತ ಸ್ತ್ರೀವಾದಿ ಬರಹಗಾರರು), ಎ.ಜ್ಯೋತಿ (ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್) ಹಾಗೂ ಮಧುಭೂಷಣ್  (ನಾವೆದ್ದು ನಿಲ್ಲದಿದ್ದರೆ ವೇದಿಕೆ) ಸಂವಾದ ನಡೆಸಿಕೊಡುವರು. ನಂತರ ಖ್ಯಾತ ರಂಗ ಕಲಾವಿದೆ ಮಾಯಾರಾವ್ ಅವರ ಕಿರುನಾಟಕ ಪ್ರದರ್ಶನ ನಡೆಯಲಿದೆ.

ಆನಂತರ ಸೌಜನ್ಯ ಪ್ರಕರಣದಲ್ಲಿ ವಾದಿಸಿದ ವಕೀಲ ಮೋಹಿತ್ ಕುಮಾರ್ ಅವರೊಂದಿಗೆ ಕಾನೂನು ಪರಿಣತರ ಮಾತು ನಡೆಯಲಿದ್ದು, ಧರ್ಮಸ್ಥಳದ ಮಹಿಳೆಯರ ಹತ್ಯೆಗಳ ಬಗೆಯರಿಯದ ಪ್ರಕರಣಗಳ ಸಮಾನಾಂಶಗಳು- ತನಿಖೆಯಲ್ಲಾದ ಲೋಪದೋಷಗಳ ಕುರಿತು ಮಾತನಾಡುವರು. ಎಸ್‌ಐಟಿಗೆ ಇರುವ ಸಾಧ್ಯತೆಗಳು- ತನಿಖೆಯಲ್ಲಿ ಮಹಿಳಾ ದೃಷ್ಟಿಕೋನದಿಂದ ಒಳಗೊಂಡ ಅಂಶಗಳ ಕುರಿತು ಕಾನೂನು ಕಾರ್ಯಕರ್ತರಾದ ಪೂರ್ಣಾ ರವಿಶಂಕರ್  ಮಾತನಾಡುವರು.

ಇದೇ ಸಂದರ್ಭದಲ್ಲಿ ಮಹಿಳಾಮುನ್ನಡೆ ಗೌರಿ ಸಮನ್ವಯದಲ್ಲಿ ಶಶಿಕಾಂತ್ ಯಡಹಳ್ಳಿ ನಿರ್ದೇಶನದ ʼಕೊಂದವರು ಯಾರು? ನಾಟಕ ಪ್ರದರ್ಶನ ನಡೆಯಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ