Friday, November 20, 2026

ಪ್ರಾಯೋಗಿಕ ಆವೃತ್ತಿ

ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಬಳಕೆಗೆ ಜೈ ಕರ್ನಾಟಕ ಪರಿಷತ್ತು ಒತ್ತಾಯ

ಮಂಡ್ಯ ನಗರದ ಹಲವು ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವವರು ಇಲ್ಲದೆ ಗ್ರಾಹಕರಿಗೆ ಅನಾನುಕೂಲ ಉಂಟಾಗಿದ್ದು, ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕನ್ನಡ ಭಾಷೆ ಕಲಿಯಬೇಕು. ಜೊತೆಗೆ ಬ್ಯಾಂಕ್‌ನ ಚಲನ್, ಫಲಕಗಳು ಸೇರಿದಂತೆ ಎಲ್ಲ ಪ್ರಕಟಣೆಗಳಲ್ಲೂ ಕನ್ನಡ ಭಾಷೆ ಬಳಸುವಂತೆ ಜಯ ಕರ್ನಾಟಕ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಎಸ್.ನಾರಾಯಣ್ ಒತ್ತಾಯಿಸಿದ್ದಾರೆ.

ಮಂಡ್ಯ ನಗರದ ವಿವಿಧ ಬ್ಯಾಂಕ್‌ಗಳಿಗೆ ಸಂಘಟನೆಯ ಸದಸ್ಯರೊಂದಿಗೆ ಭೇಟಿ, ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಬಳಕೆ, ಅನುಷ್ಠಾನ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ತಿಳಿಸಿಕೊಟ್ಟರು. ಬ್ಯಾಂಕ್‌ಗಳಲ್ಲಿ ಗ್ರಾಹಕರೊಂದಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಹಾಗೂ ಪ್ರಕಟಣೆಗಳನ್ನು ಕನ್ನಡ ಭಾಷೆ ಬಳಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ಹಲವು ಬ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೊರ ರಾಜ್ಯದವರಾಗಿದ್ದು, ಅವರಿಗೆ ಕನ್ನಡ ಭಾಷೆಯಲ್ಲಿ ಮಾತನಾಡುವುದು ಹಾಗೂ ವ್ಯವಹರಿಸಲು ಬರುವುದಿಲ್ಲ. ಇದರಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಅವರಿಗೆ ನವೆಂಬರ್ ವೇಳೆಗೆ ಕನ್ನಡ ಭಾಷೆ ಕಲಿಯಲು ಹಾಗೂ ಕನ್ನಡದಲ್ಲೇ ಗ್ರಾಹಕರೊಂದಿಗೆ ವ್ಯವಹರಿಸಲು ಗಡುವು ನೀಡಲಾಗಿದೆ. ಇಲ್ಲದಿದ್ದರೆ ಅಂತಹ ಬ್ಯಾಂಕ್‌ಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ರಾಜ್ಯ ಸರ್ಕಾರದ ಆದೇಶದಂತೆ, ರಾಜ್ಯದಲ್ಲಿ ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ಇದಕ್ಕಾಗಿ ೧೯೬೩ರ ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ ಜಾರಿಯಲ್ಲಿದೆ. ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ. ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿದ್ದು, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಕಾಯ್ದೆ ಮತ್ತು ನಿಯಮಾವಳಿಗಳ ರಚನೆಯಲ್ಲಿ, ಹಾಗೂ ಎಲ್ಲ ಆಡಳಿತ ಚಟುವಟಿಕೆಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಆದೇಶಿಸಲಾಗಿದೆ. ಫೈಲ್, ಟಿಪ್ಪಣಿಗಳು, ರಿಜಿಸ್ಟರ್‌ಗಳು, ಸಭೆಯ ಕಾರ್ಯಸೂಚಿಗಳು ಮತ್ತು ಸಾರ್ವಜನಿಕ ಸೂಚನೆಗಳು ಕನ್ನಡದಲ್ಲಿಯೇ ಇರಬೇಕು. ಇಲ್ಲದಿದ್ದರೆ ಸೂಚನೆಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ವೈಯಕ್ತಿಕವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ ಎಂದು ಹೇಳಿದರು.

ಬ್ಯಾಂಕ್ ಆಫ್ ಬರೋಡಾ ಉಪ ವ್ಯವಸ್ಥಾಪಕ ಕೃಷ್ಣೇಗೌಡ, ಬಂಧನ್ ಬ್ಯಾಂಕ್ ವ್ಯವಸ್ಥಾಪಕ ಮಹಮದ್ ಪೈರೋಜ್, ಎಚ್‌ಡಿಎಫ್‌ಸಿ ಉಪ ವ್ಯವಸ್ಥಾಪಕ ಬಿ.ಎಸ್.ಚೇತನ್, ಎಸ್‌ಬಿಐ ಉಪ ವ್ಯವಸ್ಥಾಪಕಿ ಎಂ.ಶಶಿಕಲಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅಶ್ವಿನಿಕುಮಾರ್ ಅವರಿಗೆ ಈ ಸಂಬಂಧ ಸರ್ಕಾರದ ಸುತ್ತೋಲೆ ನೀಡಿ, ಕನ್ನಡ ಭಾಷೆ ಬಳಕೆಗೆ ಒತ್ತಾಯಿಸಲಾಯಿತು.

ಜೈ ಕರ್ನಾಟಕ ಪರಿಷತ್ತು ರಾಜ್ಯ ಉಪಾಧ್ಯಕ್ಷರಾದ ಬಸವರಾಜ್, ಖಜಾಂಚಿಗಳಾದ ಕೆ.ಬಿ.ಕೆಂಪೇಗೌಡ, ಶಾಖಾಧ್ಯಕ್ಷರಾದ ಬಿ.ಪುಟ್ಟಸ್ವಾಮಿ.ಶಿಸ್ತು ಸಮಿತಿ ಅಧ್ಯಕ್ಷರಾದ ಪುಟ್ಟೇಗೌಡ, ಶಾಖಾಧ್ಯಕ್ಷರಾದ ಬಿ.ಡಿ.ಪುಟ್ಟಸ್ವಾಮಿ ಇತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ