ಜಾತಿ ಸಮೀಕ್ಷೆಯಲ್ಲಿ ತಿಗಳ ಜನಾಂಗವು ಜಾತಿ ಕಾಲಂನಲ್ಲಿ “ತಿಗಳ” ಎಂದು, ಉಪಜಾತಿ ಕಾಲಂನಲ್ಲಿ “ಅಗ್ನಿವಂಶ ಕ್ಷತ್ರಿಯ” ಎಂದು ನಮೂದಿಸಬೇಕು ಎಂದು ಕರ್ನಾಟಕ ತಿಗಳರ (ಅಗ್ನಿವಂಶ ಕ್ಷತ್ರಿಯ) ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಕೆ.ಸಿದ್ದಯ್ಯ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಗಳ ಜಾತಿಯಲ್ಲಿ ಅಗ್ನಿವಂಶ ಕ್ಷತ್ರಿಯ ಸೇರಿದಂತೆ ಹಲವು ಉಪಜಾತಿಗಳಿದ್ದು, ಕಡ್ಡಾಯವಾಗಿ ಜಾತಿಯಲ್ಲಿ ತಿಗಳ ಎಂದು ನಮೂದಿಸಿ, ತಮ್ಮ ಉಪಜಾತಿಗಳನ್ನು ನಮೂದಿಸಬೇಕೆಂದರು.
ಸಮೀಕ್ಷೆಯಲ್ಲಿ 60 ಅಂಶಗಳನ್ನು ನಮೂದಿಸಬೇಕಿದ್ದು, ಅದರಲ್ಲಿ ಪ್ರಮುಖವಾಗಿ ಕಾಲಂ 8ರ ಧರ್ಮ ಕಾಲಂನಲ್ಲಿ ಹಿಂದು, 9ರ ಜಾತಿ ಕಾಲಂನಲ್ಲಿ ತಿಗಳ ಎಂದು ನಮೂದಿಸಿ ಖಾತ್ರಿ ಪಡಿಸಿಕೊಂಡು ನಂತರ ಕಾಲಂ 10ರಲ್ಲಿ ಅಗ್ನಿವಂಶ ಕ್ಷತ್ರಿಯ ಸೇರಿದಂತೆ ಇತರ ಉಪಜಾತಿಗಳನ್ನು ನಮೂದಿಸಬೇಕು ಎಂದು ಕೋರಿದರು.
ಅಂತೆಯೇ ಕಾಲಂ 15ರಲ್ಲಿ ಮಾತೃಭಾಷೆ ಕನ್ನಡ ಎಂದು, ಕಾಲಂ 28ರಲ್ಲಿ ಉದ್ಯೋಗ/ವ್ಯಾಪಾರದಲ್ಲಿ ಕೃಷಿ ಸಾಗುವಳಿ, ವ್ಯವಸಾಯ, ತೋಟಗಾರಿಕೆ ಎಂದು ನಮೂದಿಸಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಹೆಚ್.ಬಸವರಾಜು, ಗುರುಮೂರ್ತಿ, ಕುಮಾರ್, ಎ.ಎನ್.ಕೃಷ್ಣಯ್ಯ, ಸರ್ಯಪ್ರಕಾಶ್, ಶ್ರೀಕಂಠಯ್ಯ ಇದ್ದರು.




