ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಅ.7ವರೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿದೆ. ಮಡಿವಾಳ ಸಮುದಾಯವರು ಜಾತಿಯನ್ನು ಮಡಿವಾಳ ಎಂದು ಮಾತ್ರ ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯವರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಪರಿಶಿಷ್ಠ ಜಾತಿಗೆ ಸಮುದಾಯವನ್ನು ಸೇರ್ಪಡೆ ಮಾಡುವಂತೆ ಹೋರಾಟಗಳನ್ನು ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ 12-13 ಲಕ್ಷ ಮಡಿವಾಳರ ಸಂಖ್ಯೆಯಿದೆ ಎಂದು ಅಂದಾಜಿಸಲಾಗಿದ್ದು, 8 ಲಕ್ಷದಷ್ಟು ಜನರು ಮತದಾನದ ಅರ್ಹತೆಯನ್ನು ಹೊಂದಿದವರಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 28 ಸಾವಿರ ಮಂದಿ ಮಡಿವಾಳ ಕುಲಬಾಂಧವರಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯ ನಿರ್ದೇಶಕಿ ವಿ.ಎಂ.ಪದ್ಮಾವತಿ ಮಾತನಾಡಿ, ಸಮುದಾಯದವರು ಸಮೀಕ್ಷೆಯ್ ಕಾಲಂ 9ರಲ್ಲಿ ಕ್ರಮ ಸಂಖ್ಯೆ ಎ-0903 ನಮೂದಿಸಿ, ಮಡಿವಾಳ ಎಂದು ಬರೆಸಬೇಕು. ಉಪಜಾತಿ ಕಾಲಂನಲ್ಲಿಯೂ ಮಡಿವಾಳ ಹೊರತುಪಡಿಸಿ ಬೇರೇನನ್ನು ಬರೆಸಬಾರದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ನಿರ್ದೇಶಕ ಮಧು, ಜಿಲ್ಲಾಧ್ಯಕ್ಷ ಎಂ.ಎನ್.ರವಿ, ಜಿಲ್ಲಾ ನಿರ್ದೇಶಕ ಗೋವಿಂದಪ್ಪ, ಶಿವಲಿಂಗಯ್ಯ ಇದ್ದರು.




