ದೇಶದಲ್ಲಿ ಚಿಕ್ಕ ವಯಸ್ಕರಿಂದ ದೊಡ್ಡವರವರೆಗೆ ಪ್ರೀತಿ ಪಾತ್ರರಾಗಿದ್ದವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು, ಅವರ ತತ್ವ ಮತ್ತು ಆದರ್ಶಗಳನ್ನು ರೂಢಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡೋಣ ಎಂದುಮಂಡ್ಯ ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್ ಹೇಳಿದರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೇರಾ ಯುವ ಭಾರತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಸೇವಾದಳ, ನಗರಸಭೆ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪತಿ ಮಹಾತ್ಮ ಗಾಂಧಿಯವರ 156ನೇ ಜನ್ಮದಿನಾಚರಣೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕತೆಯಲ್ಲಿ ಯುವ ಪೀಳಿಗೆ ಮೊಬೈಲ್, ಟಿ.ವಿ, ಕಂಪ್ಯೂಟರ್ ನಂತಹ ಉಪಕರಣಗಳಲ್ಲಿ ಜ್ಞಾನಕ್ಕಿಂತ ಮನರಂಜನೆಗಾಗಿ ಮುಳಗಿಹೋಗಿದ್ದಾರೆ. ಮಹಾತ್ಮ ಗಾಂಧೀಜಿ ಅವರು ಪುಸ್ತಕವನ್ನು ಓದುವ ಮೂಲಕ ಜ್ಙಾನ ಸಂಪಾದಿಸಿದರು. ಯುವ ಜನತೆ ಮೊಬೈಲ್ ಗಳನ್ನು ತ್ಯಜಿಸಿ ಪುಸ್ತಕದ ಮೊರೆ ಹೋಗಿ ಎಂದು ಸಲಹೆ ನೀಡಿದರು.

ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ದೇಶಕಂಡ ಅತ್ಯಂತ ಸರಳ, ದಕ್ಷ, ಪ್ರಾಮಾಣಿಕತೆಗೆ ಹೆಸರಾದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜಯಂತಿ ಆಚರಣೆಯಾಗಿರುವುದರಿಂದ ಅಕ್ಟೋಬರ್ 2 ಪವಿತ್ರವಾದ ದಿನ, ಮಹಾತ್ಮ ಗಾಂಧೀಜಿಯವರನ್ನು ನಾವು ಕೇವಲ ಫೋಟೋ ಪುಸ್ತಕಗಳಿಗೆ ಸೀಮಿತವಾಗಿಡದೆ, ಅವರ ಕುರಿತು ನಾವು ಎಷ್ಟು ತಿಳಿದುಕೊಂಡಿದ್ದೇವೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಯುದ್ಧವನ್ನು ಮಾಡದೆ ಶಾಂತಿ, ಸಹನೆ, ಅಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸಿದ ದೇಶವೆಂದರೆ ಅದು ಭಾರತ, ನಮ್ಮ ಮಕ್ಕಳಿಗೆ ಮಹಾತ್ಮ ಗಾಂಧೀಜಿ ಯವರ ಸಾಧನೆಯನ್ನು ತಿಳಿಸಬೇಕು, ಬೇರೆ ಬೇರೆ ದೇಶದ ಜನರು ಗಾಂಧೀಜಿ ರವರನ್ನು “ಮಹಾತ್ಮ” ಎಂದು ಕರೆಯುತ್ತಾರೆ. ಭಾರತೀಯರಾದ ನಾವು ಮಹಾತ್ಮ ಗಾಂಧೀಜಿ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ವಿಷಾದಿಸಿದರು
ಹುಟ್ಟಿನಿಂದ ಗಾಂಧೀಜಿ ಮಹಾತ್ಮ ಆಗಲಿಲ್ಲ ಅವರು ಮಾಡಿದ ಸಾಧನೆಗಳಿಂದ “ಮಹಾತ್ಮ ” ಎಂಬ ಬಿರುದು ಪಡೆದರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕೆಂದು ಅಂದು ದೇಶದಲ್ಲಿದ್ದ 33 ಕೋಟಿ ಜನರನ್ನು ಸಹ ಅಹಿಂಸಾ ತತ್ವಕ್ಕೆ ಪ್ರೇರೆಪಿಸಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಕೀರ್ತಿ ಗಾಂಧೀಜಿ ಅವರಿಗೆ ಸಲ್ಲುತ್ತದೆ,ಅವರನ್ನು ನೆನಪಿಸಿಕೊಳ್ಳುವುದು ಅಕ್ಟೋಬರ್ 2 ಕ್ಕೆ ಸೀಮಿತವಾಗದೆ ಅವರ ಕೊಡುಗೆ ಮತ್ತು ಸಾಧನೆಯನ್ನು ಪ್ರತಿದಿನವೂ ಕುರಿತು ಸ್ಮರಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ
ಪ್ರೌಢಶಾಲಾ ವಿಭಾಗ
ಪಾಂಡವಪುರ ತಾಲ್ಲೂಕಿನ ಟಿ.ಎಸ್. ಛತ್ರ ಸರ್ಕಾರಿ ಪ್ರೌಢಶಾಲೆಯ ಮಹಾಲಕ್ಷ್ಮೀ ಪ್ರಥಮ ಸ್ಥಾನ, ಮಂಡ್ಯ ಗ್ಲೋಬಲ್ ಪಬ್ಲಿಕ್ ಶಾಲೆಯ ದೀಪ್ತಿಶ್ರೀ ಕೆ.ಎಸ್ ದ್ವಿತೀಯ ಸ್ಥಾನ, ಮದ್ದೂರು ತಾಲ್ಲೂಕಿನ ಪೂರ್ಣಪ್ರಜ್ಞಾ ಶಾಲೆಯ ಚಂದನಾ ಎಸ್.ಪಿ ತೃತೀಯ ಸ್ಥಾನ ಪಡೆದಿದ್ದಾರೆ.
ಪದವಿ ಪೂರ್ವ ಶಿಕ್ಷಣ ವಿಭಾಗ
ಮಂಡ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಮಾಜಿ ಪುರಸಭೆ) ಲಕ್ಷ್ಮಿ ಪ್ರಥಮ ಸ್ಥಾನ, ಮಂಡ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಕಲ್ಲುಕಟ್ಟಡ) ನಿಸರ್ಗ ದ್ವಿತೀಯ ಸ್ಥಾನ, ಕೆ.ಆರ್. ಪೇಟೆ ತಾಲ್ಲೂಕಿನ ಹರಿಹರಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಛಾಯಾವತಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಪದವಿ-ಸ್ನಾತಕೋತ್ತರ ಪದವಿ ವಿಭಾಗ
ನಾಗಮಂಗಲ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಕಾಲೇಜಿನ ನೇತ್ರಾ ಬಿ.ಎಸ್ ಪ್ರಥಮ ಸ್ಥಾನ, ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನ (ಸ್ವಾಯತ್ತ) ಯುಕ್ತಿ ಎಸ್ ದ್ವಿತೀಯ ಸ್ಥಾನ, ಮದ್ದೂರು ತಾಲ್ಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭವಾನಿ ಎ.ಎಸ್ ತೃತೀಯ ಸ್ಥಾನ ಪಡೆದಿರುತ್ತಾರೆ .
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಜಿಲ್ಲಾ ವಾರ್ತಾಧಿಕಾರಿ ನಿರ್ಮಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್, ಮೇರಾ ಯುವ ಭಾರತ್ ಅಧಿಕಾರಿ ಶೃತಿ, ಗುರುಗಳಾದ ಪದ್ಮನಾಭ, ಧರಣೀಂದ್ರಯ್ಯ, , ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉಸ್ತುವಾರಿ ಸಮಿತಿ ಸದಸ್ಯ ಟಿ.ಸಿ.ಗುರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ತಮಕ್ಕೂ ಮುನ್ನ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಮಹಾತ್ಮ ಗಾಂಧೀಜಿಯವರ ಹೆಜ್ಜೆ ಗುರುತುಗಳನ್ನು ಯಾರು ಸಹ ಅಳಿಸಲು ಸಾಧ್ಯವಿಲ್ಲ ಅವರು ನೀಡಿರುವ ಅಹಿಂಸೆ, ಸತ್ಯ, ಸತ್ಯಾಗ್ರಹ, ಸ್ವಚ್ಚತೆ, ಗ್ರಾಮ ಸ್ವರಾಜ್ ನಂತಹ ತತ್ವಗಳು ಇವತ್ತಿಗೂ ಅಜರಾಮರ, ಇಡೀ ವಿಶ್ವಕ್ಕೆ ಯುದ್ಧದ ಹೊರತಾಗಿಯೂ ಸಹ ಸ್ವಾತಂತ್ರ ಗಳಿಸಬಹುದು ಎಂಬುದನ್ನು ಸಾರಿದ ಕೀರ್ತಿ ಅವರಿಗೆ ಸಲ್ಲುತ್ತದೆ, ದೇಶದ ನಗರಗಳು ಹಾಗೂ ಪಟ್ಟಣಗಳಲ್ಲಿ ಯಾವುದಾದರೂ ಒಂದು ರಸ್ತೆಗಾದರೂ ಗಾಂಧೀಜಿ ಅವರ ಹೆಸರು ನಾಮಕರಣ ಮಾಡಲಾಗಿರುತ್ತದೆ. ಇದರೊಂದಿಗೆ ನಗರದಲ್ಲಿ ಒಂದಾದರೂ ಪ್ರತಿಮೆ ನೋಡಲು ಸಿಕ್ಕೆಸಿಗುತ್ತದೆ. ಇದರ ಅರ್ಥ ಸಮಾಜಕ್ಕೆ ಅವರು ನೀಡುವ ಕೊಡುಗೆ ಕಾರಣ ಎಂದು ಹೇಳಿದರು.
ಯಾವುದೇ ದೇಶದಲ್ಲಿ ದೇಶಪ್ರೇಮಿ ಅಥವಾ ದೇಶಕ್ಕೆ ಸೇವೆ ಸಲ್ಲಿಸಿದ ವ್ಯಕ್ತಿಗಳು ಮೃತರಾದರೆ ದೇಶದ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸುವ ಮೂಲಕ ಸಂತಾಪ ಸೂಚಿಸುತ್ತಾರೆ ಆದರೆ ಮಹಾತ್ಮ ಗಾಂಧೀಜಿ ಅವರು ಹುತಾತ್ಮರಾದ ದಿನ ವಿಶ್ವಸಂಸ್ಥೆ ವಿವಿಧ ರಾಷ್ಟ್ರಗಳ ಜೊತೆಗೆ ಸಭೆ ನಡೆಸಿ ವಿಶ್ವ ಸಂಸ್ಥೆಯಲ್ಲಿ ನೊಂದಾಯಿಸಲ್ಪಟ್ಟ ಎಲ್ಲಾ ದೇಶಗಳಲ್ಲೂ ತಮ್ಮ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಇಳಿಸುವ ಮೂಲಕ ಮಹಾತ್ಮ ಗಾಂಧೀಜಿ ಅವರಿಗೆ ಸಂತಾಪ ಸೂಚಿಸಿಸಲಾಯಿತು ಎಂದು ಹೇಳಿದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೈಹಿಕವಾಗಿ ಕುಬ್ಜರಾಗಿದ್ದರೂ ಕೂಡ ಅವರ ಸಾಧನೆ ಅತ್ಯಂತ ಎತ್ತರವಾದದ್ದು, ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು, ನಮ್ಮ ಯುವ ಜನತೆ ದೇಶದ ಕುರಿತು ಪ್ರೇಮ ಇಟ್ಟುಕೊಳ್ಳಬೇಕು, ದೇಶಕ್ಕೆ ಒಳ್ಳೆಯ ವ್ಯಕ್ತಿಗಳಾಗಬೇಕು, ಮನೆಗಳಲ್ಲಿ ಒಳ್ಳೆಯ ಸಂಸ್ಕಾರ ಪಡೆಯಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ ನಾವು ವರ್ಷದಲ್ಲಿ ಹಲವಾರು ಜಯಂತಿಗಳನ್ನು ಆಚರಿಸುತ್ತೇವೆ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಾದ ಅಕ್ಟೋಬರ್ 2 ಪವಿತ್ರವಾದ ದಿನ ಎಂದರೆ ತಪ್ಪಾಗಲಾರದು, ದೇಶಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದ ಮಹಾನ್ ಚೇತನ ಮಹಾತ್ಮ ಗಾಂಧೀಜಿ ಅವರು, ಸ್ವತಂತ್ರ ಹೋರಾಟದಲ್ಲಿ ಅನೇಕ ಸ್ವತಂತ್ರ ಹೋರಾಟಗಾರರು ಭಾಗವಹಿಸಿದ್ದಾರೆ ಆದರೂ ಗಾಂಧೀಜಿಯವರನ್ನು ಏಕೆ ನಾವು ಸ್ಮರಿಸುತ್ತೇವೆ ಎಂದರೆ ವಿಭಜನೆಯಾಗಿದ್ದ ಸ್ವಾತಂತ್ರ ಹೋರಾಟಗಾರರನ್ನು ಒಗ್ಗೂಡಿಸಿ ಬ್ರಿಟಿಷರೊಂದಿಗೆ ನಿರಂತರ ಅಹಿಂಸೆ ಮೂಲಕ ಹೋರಾಟ ನಡೆಸಿ ಜೈಲಿಗೆ ಹೋದರು ನಿರಂತರ ಹೋರಾಟ ಮಾಡಿ ದೇಶಕ್ಕೆ ಸ್ವತಂತ್ರ ತರುವಲ್ಲಿ ಯಶಸ್ಸು ಕಂಡವರು ಗಾಂಧೀಜಿ ಎಂದರು.
ಸ್ವಾತಂತ್ರದ ನಂತರ ಅನೇಕ ಪ್ರಧಾನ ಮಂತ್ರಿಗಳನ್ನು ನೋಡಿದ್ದೇವೆ. ಎಲ್ಲ ಪ್ರಧಾನ ಮಂತ್ರಿಗಳಿಗಿಂತ ವಿಭಿನ್ನವಾಗಿ ನಿಲ್ಲುವವರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವಾತಂತ್ರ ಹೋರಾಟದಲ್ಲೂ ಸಹ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಗುರುತಿಸಿಕೊಂಡಿದ್ದರು, ಜವಹರ್ ಲಾಲ್ ನೆಹರು ಕಾಲವಾದ ನಂತರ ದೇಶವನ್ನು ಮುನ್ನಡೆಸುವ ಮುಂದಾಳತ್ವ ವಹಿಸಿ ಪಾಕಿಸ್ತಾನದ ದಾಳಿಯನ್ನು ಎದುರಿಸಿ, ಹಲವಾರು ತುರ್ತು ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುದರು ಎಂದು ತಿಳಿಸಿದರು.
ನಂತರ ವಿವಿಧ ಧರ್ಮಗಳ ಧರ್ಮಗುರುಗಳಾದ ಧರಣೇಂದ್ರಯ್ಯ, ಪದ್ಮನಾಭ, ಫಾದರ್ ಜೋಯಿಸನ್, ತನ್ವೀರ್ ಮಾನ್ಸರ್ ಅವುಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು.
ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.




