ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ (ಜಾತಿ) ಸಮೀಕ್ಷೆಯಲ್ಲಿ ವೈಯುಕ್ತಿಕ ಮತ್ತು ಅನಗತ್ಯ ಪ್ರಶ್ನೆಗಳನ್ನು ಕೇಳುತ್ತಿರುವುದು ಜನರನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಹೇಳಿದರು.
ಮದ್ದೂರು ತಾಲ್ಲೂಕು ಭಾರತೀನಗರದ ತಮ್ಮ ನಿವಾಸದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಭಾನುವಾರ ಸಂಜೆ 5.30 ರಲ್ಲಿ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿರುವುದಕ್ಕೆ ಕಾಂಗ್ರೆಸ್ ನಾಯಕರಲ್ಲೇ ಅಸಮಧಾನ ಉಂಟಾಗಿದೆ. ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಕೇಳಲಾದ 60 ಪ್ರಶ್ನೆಗಳಿಗೆ ಉತ್ತರಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಗಂಟೆಗಟ್ಟಲೇ ಸಮಯ ತೆಗೆದುಕೊಂಡಿದ್ದಾರೆ. ಹೀಗಿರುವಾಗ ಜನಸಾಮಾನ್ಯರ ಪಾಡೇನು? ಇದಲ್ಲದೆ ಅತ್ಯಲ್ಪ ಸಮಯದಲ್ಲಿ ಸಮೀಕ್ಷೆ ನಿಗಧಿಗೊಳಿಸಿದ್ದು, ಇದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ ಎಂದರು.
ಸಮೀಕ್ಷೆ ನಡೆಸಲು ಬರುವವರು ಕೇಳುವ ಪ್ರಶ್ನೆಗಳಿಗೆ ಜನರು ಸರಿಯಾದ ಮಾಹಿತಿ ನೀಡಬೇಕು. ಸಾಲವಿದ್ದರೂ ಅದನ್ನು ಮುಚ್ಚಿಟ್ಟುಕೊಳ್ಳಲು, ಚಿನ್ನವಿಲ್ಲದಿದ್ದರೂ ದೊಡ್ಡಸ್ಥಿಕೆಗೆ ತೋರಿಸಿಕೊಳ್ಳಲು ಚಿನ್ನವಿದೆ, ಸಾಲವಿಲ್ಲ ಎಂದು ಹೇಳಿದರೆ ಮುಂದೆ ಆಪತ್ತು ಕಾದಿರುತ್ತದೆ. ಇಂತಹ ಪ್ರಶ್ನೆಗಳ ಮೂಲಕ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿ ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿಗಳನ್ನು ಕಿತ್ತುಹಾಕಿ ಸರ್ಕಾರ ಹಣ ಉಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಕೆಲ ರೈತಾಪಿ ಜನರು ಸಾಲಮಾಡಿರುವುದನ್ನು ತಮ್ಮ ಕುಟುಂಬದವರಿಗೆ ತಿಳಿಸಿರುವುದಿಲ್ಲ, ಇನ್ನೂ ಕೆಲವರು ಸಾಲಮಾಡಿ ಕಾರು ಖರೀದಿಸುತ್ತಾರೆ. ಇವುಗಳನ್ನು ತಿಳಿಯದೆ ಮನೆಯಲ್ಲಿರುವ ಹೆಂಗಸರು ಸಾಲವಿದ್ದರೂ ಸಾಲವಿಲ್ಲ, ಚಿನ್ನವಿಲ್ಲದಿದ್ದರೂ ಚಿನ್ನವಿದೆ ಎಂದು ದೊಡ್ಡಸ್ಥಿಕೆ ಪ್ರದರ್ಶಿ ಸಲು ಉತ್ತರಿಸುತ್ತಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದ್ದು ಈ ರೀತಿಯ ಉತ್ತರಗಳನ್ನು ನೀಡಬಾರದು. ಮನೆಯ ಗಂಡಸರನ್ನು ಸಂಪೂರ್ಣವಾಗಿ ಮಾಹಿತಿ ತಿಳಿದು ಸಮೀಕ್ಷೆಗೆ ಉತ್ತರ ನೀಡಬೇಕೆಂದರು.
ಇದಲ್ಲದೆ ಸಮೀಕ್ಷೆ ನಡೆಸುವವರು ಓಟಿಪಿ ಪಡೆದ ಮೊಬೈಲ್ಗಳಿಗೆ ಕೇಳಲಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಪಿಡಿಎಫ್ ಕಳುಹಿಸುತ್ತಿಲ್ಲ ಎಂದು ಕೇಳಿಬಂದಿದ್ದು, ಪ್ರತೀ ಮನೆಯವರಿಗೂ ಪಿಡಿಎಫ್ ಕಳುಹಿಸಬೇಕೆಂದು ಆಗ್ರಹಿಸಿದರು.
ನಮ್ಮ ಜನರು ಹಿಂದೂ ಎಂದು ಮೊದಲು ನಮೂಸಿದಿ ನಂತರ ತಮ್ಮ ಜಾತಿಯ ಬಗ್ಗೆ ವಿವರ ನೀಡಿ. ಇಂತಹ ಸಮೀಕ್ಷೆ ಜನರ ಧರ್ಮವನ್ನು ಮತ್ತು ಜಾತಿಯನ್ನು ಒಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಜೊತೆಗೆ ಈ ಸಮೀಕ್ಷೆಯಿಂದ ಸರ್ಕಾರ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಜೆಡಿಎಸ್ ಮುಖಂಡರಾದ ಎಚ್.ಎಂ.ಮರಿಮಾದೇಗೌಡ, ಆಲಭುಜನಹಳ್ಳಿ ಚಂದ್ರಶೇಖರ್, ಕ್ಯಾತಘಟ್ಟದ ಗಿರೀಶ್, ಅಣ್ಣೂರು ನವೀನ್, ಎ.ಟಿ.ಶಂಕರ್ ಸೇರಿದಂತೆ ಹಲವರಿದ್ದರು.




