ಹುಲಿಯೊಂದು ಕೃಷಿ ಕೆಲಸಗಾರನ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮಂಡ್ಯ ತಾಲ್ಲೂಕಿನ ಗೊರವಾಲೆ ಬಳಿ ಬುಧವಾರ ಬೆಳಿಗ್ಗೆ 7.45 ರ ಸಮಯದಲ್ಲಿ ನಡೆದಿದೆ.
ಹುಲಿ ದಾಳಿಯಿಂದ ಕೃಷಿ ಕೆಲಸಗಾರ ತಿರುಮಲೆ (60) ಎಂಬ ವ್ಯಕ್ತಿ ಗಾಯಗೊಂಡಿದ್ದು, ಸದ್ಯ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಲಿ ದಾಳಿಯಿಂದ ತಿರುಮಲೆ ಅವರ ಬಲ ತೊಡೆ, ಬಲಗೈ ಮೇಲೆ ರಕ್ತಸಿಕ್ತ ಗಾಯಗಳು ಉಂಟಾಗಿವೆ.
ಏನಿದು ಘಟನೆ ?
ಸ್ಥಳೀಯರ ತೋಟವೊಂದರಲ್ಲಿ ಸುಮಾರು 15 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ತಿರುಮಲೆ ಮಂಗಳವಾರ ಬೆಳಿಗ್ಗೆ 7.45 ಸಮಯದಲ್ಲಿ ಆಡುಗಳಿಗೆ ಸೊಪ್ಪು ಕತ್ತರಿಸುತ್ತಿದ್ದಾಗ, ಏಕಾಏಕಿ ಹುಲಿ ದಾಳಿ ನಡೆಸಿದೆ, ಇದರಿಂದಾಗಿ ಗಾಬರಿಗೊಂಡ ತಿರುಮಲೆ, ಕೂಡಲೇ ಕಿರುಚಿಕೊಂಡು, ಕೈಯಲ್ಲಿದ್ದ ಕುಡುಗೋಲಿನಿಂದ ಹುಲಿ ಮೇಲೆ ಪ್ರತಿ ದಾಳಿ ನಡೆಸಲು ಮುಂದಾಗಿದ್ಧಾರೆ. ಅಷ್ಟರಲ್ಲಿ ತಿರುಮಲೆಯ ಕಿರುಚಾಟವನ್ನು ಕೇಳಿ ಸ್ಥಳೀಯರು ಅತ್ತ ದೌಡಾಯಿಸಿದಾಗ ಹುಲಿಯು ಅಲ್ಲಿಂದ ಕಣ್ಮರೆಯಾಗಿದೆ.
ಈ ಭಾಗದಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈಗ ಹುಲಿ ಕಾಣಿಸಿಕೊಂಡು ಭೀತಿಯನ್ನುಂಟು ಮಾಡಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೇ ಹುಲಿ ದಾಳಿಯಿಂದ ಗಾಯಗೊಂಡಿರುವ ತಿರುಮಲೆಯವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಹುಲಿಯಲ್ಲ ಚಿರತೆ
ಮಂಡ್ಯ ತಾಲ್ಲೂಕಿನಲ್ಲಿ ಹುಲಿಗಳು ಎಲ್ಲಿಯೂ ಪತ್ತೆಯಾಗಿಲ್ಲ, ಬಹುಶಃ ಚಿರತೆಯಿಂದಲೇ ಕೃಷಿ ಕೆಲಸಗಾರನೊಬ್ಬ ಗಾಯಾಗೊಂಡಿರಬಹುದು ಎಂದು ಮಂಡ್ಯ ರೇಂಚ್ ಪಾರಸ್ಟ್ ಅಫೀಸರ್ ಶೈಲಜಾ ಅವರು ಸ್ಪಷ್ಟಪಡಿಸಿದ್ದಾರೆ.




