Sunday, November 22, 2026

ಪ್ರಾಯೋಗಿಕ ಆವೃತ್ತಿ

ಮನೆ-ಮನೆಗೆ ಹೋಗಿ ಇ-ಖಾತಾ ಅಭಿಯಾನ ಚುರುಕುಗೊಳಿಸಿ ; ಡಾ.ಕುಮಾರ

ವಾರಕ್ಕೆ ಒಂದು ವಾರ್ಡ್ ಇ-ಖಾತಾ ಅಭಿಯಾನ” ಎಂಬಂತೆ ಜಿಲ್ಲೆಯಲ್ಲಿ ಮನೆ-ಮನೆಗೆ ಹೋಗಿ ಇ-ಖಾತಾ ಅಭಿಯಾನವನ್ನು ಚುರುಕುಗೊಳಿಸಿ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಗರ ಅಭಿವೃದ್ಧಿ ಕುರಿತು ಸಭೆ ನಡೆಸಿ ಮಾತನಾಡಿದರು.

ಇ-ಖಾತೆ ಕುರಿತು ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆಯಿದ್ದು, ಇ-ಖಾತಾ ಕುರಿತು ಜಿಲ್ಲೆಯಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಮತ್ತು ಜಿಲ್ಲೆಯಲ್ಲಿ ಬಾಕಿಯಿರುವ ಇ -ಖಾತೆಗಳನ್ನು ವಾರಕ್ಕೊಂದು ವಾರ್ಡ್ ಎಂಬಂತೆ ಮನೆ -ಮನೆಗೆ ತಲುಪಿ ಇ -ಖಾತಾ ಮಾಡಿಸುವುದು ಕಡ್ಡಾಯವಾಗಿದ್ದು, ಅಧಿಕಾರಿಗಳು ನಿರೀಕ್ಷಿತ ಗುರಿ ತಲುಪದಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ಕಂಡು ಬಂದಿದ್ದು, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲು ಕ್ರಮಕೈಗೊಳ್ಳಿ ಹಾಗೂ ಜಿಲ್ಲೆಯಲ್ಲಿ ನಾಯಿ ಕಡಿತಕ್ಕೆ ಒಳಪಟ್ಟವರ ವರದಿ ತಯಾರಿಸಿ ಮಾಹಿತಿ ನೀಡುವಂತೆ ತಿಳಿಸಿದರು.

ಕುಡಿಯುವ ನೀರಿನ ಶುದ್ಧತೆ ಬಹಳ ಮುಖ್ಯವಾಗಿದ್ದು, ಮಳೆ ಬಂದಂತಹ ಸಂದರ್ಭದಲ್ಲಿ ಕುಡಿಯುವ ನೀರಿನಲ್ಲಿ ಮಣ್ಣು ಮಿಶ್ರವಾಗಿರುವುದು ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಶುದ್ಧತೆಯ ಕಡೆಗೆ ಹೆಚ್ಚಿನ ನಿಗಾ ವಹಿಸಿ ಮತ್ತು ಇಂದಿರಾ ಕ್ಯಾಂಟೀನ್ ನಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆಯಲ್ಲಿ ಹಾಗೂ ಊಟದ ಸ್ವಚ್ಛತೆ ಬಗ್ಗೆ ಪ್ರತಿ ನಿತ್ಯ ಪರಿಶೀಲಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ವಸತಿ ರಹಿತರ ಪಟ್ಟಿ ತಯಾರಿಸಿ ನಿವೇಶನಕ್ಕಾಗಿ ಸ್ಥಳ ಪರಿಶೀಲಿಸಿ ಮತ್ತು ಈಗಾಗಲೇ ಅನುಮೋದನೆ ಪಡೆದಿರುವ ವಸತಿ ನಿರ್ಮಾಣದಲ್ಲಿ ಬಾಕಿಯಿರುವ ಕೆಲಸಗಳನ್ನು ಶೀಘ್ರದಲ್ಲಿ ಸಂಪೂರ್ಣಗೊಳಿಸಿ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಪ್ರತಿ ಇಲಾಖೆಯ ಅಭಿವೃದ್ಧಿ ಕುರಿತು ಪತ್ರಿಕೆಯಲ್ಲಿ ಮಾಹಿತಿ ಪ್ರಕಟಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪೌರ ಕಾರ್ಮಿಕರಿಗೆ ಸವಲತ್ತುಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಪೌರ ಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ನೀಡಿ, ಬಳಕೆ ಮಾಡಲು ತಿಳಿಸಬೇಕು. ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸುವಲ್ಲಿ ಕ್ರಮಕೈಗೊಳ್ಳಿ. ವಿಮೆ ಮತ್ತು ಇ.ಎಸ್. ಐ , ಪಿ.ಎಫ್ ಸೌಲಭ್ಯದ ಜತೆಗೆ ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಒದಗಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಶೌಚಾಲಯದ ಸ್ವಚ್ಛತೆ ಕಡೆಗೆ ಗಮನ ವಹಿಸಿ ಮತ್ತು ಕಸ ವಿಲೇವಾರಿಯಲ್ಲಿ ಸಮಸ್ಯೆ ಕಂಡುಬಡಿದ್ದು, ಒಣ ಕಸ, ಹಸಿಕಸ ಬೆರ್ಪಡಿಸುವಲ್ಲಿ ಮತ್ತು ಕಸ ಸಂಗ್ರಹ, ವಿಲೇವಾರಿಯಲ್ಲಿ ಶಿಸ್ತಿನಿಂದ ಕೆಲಸ ನಿರ್ವಹಿಸಿ ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹಮೂರ್ತಿ, ನಗರಸಭೆ ಆಯುಕ್ತ ಯು.ಪಿ ಪಂಪಶ್ರೀ, ಅಭಿಯಂತರರುಗಳಾದ ರುದ್ರೇಗೌಡ ಮತ್ತು ಪ್ರತಾಪ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ