Thursday, November 19, 2026

ಪ್ರಾಯೋಗಿಕ ಆವೃತ್ತಿ

ವಕೀಲರು ಕನ್ನಡ ಭಾಷೆ, ಸಾಹಿತ್ಯವನ್ನು ಸರಿಯಾಗಿ ಬಳಸಿದರೆ ಪಾಟಿ ಸವಾಲನ್ನು ಸಮರ್ಥವಾಗಿ ನಡೆಸಬಹುದು : ಬಿ.ಟಿ.ವಿಶ್ವನಾಥ್

ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ವಕೀಲರು ಸಮರ್ಥವಾಗಿ ಬಳಸಿಕೊಂಡಲ್ಲಿ ದಾವೆಗಳನ್ನು ಅತ್ಯುತ್ತಮವಾಗಿ ಡ್ರಾಫ್ಟ್ ಮಾಡಬಹುದು ಮತ್ತು ಭಾಷೆಯ ಮೇಲೆ ಹಿಡಿತವಿದ್ದರೆ ಮತ್ತು ಸಮಾಜದ ತಳಸ್ಪರ್ಶಿ ಅನುಭವಗಳಿಗೆ ವಕೀಲರು ತಮ್ಮನ್ನು ಒಡ್ಡಿಕೊಂಡು ನ್ಯಾಯಾಲಯದಲ್ಲಿ ಸಾಕ್ಷಿಗಳನ್ನು ಸಮರ್ಥವಾಗಿ ಪಾಟಿ ಸವಾಲಿಗೆ ಒಳಪಡಿಸಬಹುದೆಂದು ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಅಭಿಪ್ರಾಯಪಟ್ಟರು.

ಮಂಡ್ಯನಗರದ ಹಿಂದಿ ಭವನ ಕಟ್ಟಡದಲ್ಲಿರುವ ಕರ್ನಾಟಕ ಜನಶಕ್ತಿ ಭವನದಲ್ಲಿ ಮಂಡ್ಯ ಜಿಲ್ಲಾ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಇತ್ತೀಚೆಗೆ ನೂರಕ್ಕೂ ಅಧಿಕ ಕಿರಿಯ ವಕೀಲರಿಗೆ ವಿವಿಧ ವಾದ ಪತ್ರಗಳ ಕರಡು ತಯಾರಿಕೆ, ಆರ್ಟ್ ಆಫ್ ಡ್ರಾಫ್ಟಿಂಗ್ ಮತ್ತು ಪಾಟಿ ಸವಾಲಿನ ಕಲೆ, ಆರ್ಟ್ ಆಫ್ ಕ್ರಾಸ್ ಎಕ್ಸಾಮಿನೇಷನ್ ಎಂಬ ವಿಷಯಗಳ ಕುರಿತು ನಡೆಸಿದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೃತ್ತಿಗೆ ಹಾಕುವ ಶ್ರಮದ ಜೊತೆಗೆ ವಕೀಲರು ಸಮಾಜದ ಧ್ವನಿಯಾಗಿ ಕೂಡ ಕೆಲಸ ಮಾಡಿದಲ್ಲಿ ವಕೀಲರು ಕೇಸು ಹುಡುಕಿಕೊಂಡು ಹೋಗುವ ಶ್ರಮವೇ ಬೀಳುವುದಿಲ್ಲವೆಂದು ಅವರು ಕಿರಿಯ ವಕೀಲರಿಗೆ ಕಿವಿಮಾತು ಹೇಳಿದರು.

ಬೆಂಜ್ ಕಾರಿನಲ್ಲಿ ಓಡಾಡುವುದು ಕಷ್ಟವೇನಲ್ಲ

ವೃತ್ತಿ ಪ್ರಾವೀಣ್ಯತೆಗಳಿಸುವಲ್ಲಿ ಯುವ ವಕೀಲರು ಹೆಚ್ಚು ಶ್ರಮ ಅಧ್ಯಯನಶೀಲರಾದಲ್ಲಿ ಎಲ್ಲರೂ ಹೈಕೋರ್ಟ್ ಸುಪ್ರೀಂ ಕೋರ್ಟ್ ವಕೀಲರಂತೆ ಬೆಂಜ್ ಕಾರಿನಲ್ಲಿ ಓಡಾಡುವುದು ಕಷ್ಟವೇನಲ್ಲ, ನಿರಂತರ ಅಧ್ಯಯನದಿಂದ ತಮ್ಮ ಹಾಗೆ ಎಂತಹ ಕಷ್ಟದ ಕೇಸುಗಳನ್ನು ಕೂಡ ಗೆಲ್ಲಬಹುದು ಎಂದು ಕಾರ್ಮಿಕ ಹೋರಾಟಗಾರ ಎಸ್ ಬಾಲನ್ ಯುವ ವಕೀಲರಿಗೆ ಕಿವಿಮಾತು ಹೇಳಿದರು.

ತಾವು ಗೆದ್ದ ಹಲವು ಕಠಿಣ ಕ್ರಿಮಿನಲ್ ಕೇಸ್ ಗಳನ್ನು ಉದಾಹರಿಸುತ್ತಾ ಪಾಟೀ ಸವಾಲಿನ ಕಲೆಯ ಕುರಿತು ಹಾಸ್ಯ ಭರಿತವಾಗಿ ಉಪನ್ಯಾಸ ನೀಡಿದರು.

ಖ್ಯಾತ ನ್ಯಾಯವಾದಿಗಳಾದ ಜಗದೀಶ್ ಮುಂಡರಗಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಮತ್ತು ಬೆಂಗಳೂರು ವಕೀಲರ ಕನ್ನಡ ಸಾಹಿತ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆನಂದ್ ಮುಂತಾದವರು ಉದ್ಘಾಟಿಸಿದರು.

ಕಾರ್ಯಾಗಾರದ ವೇದಿಕೆಯ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಅಧ್ಯಕ್ಷ ಬಿಟಿ ವಿಶ್ವನಾಥ್ ವಹಿಸಿದ್ದರು.

ಕಾರ್ಯಗಾರದ ವೇದಿಕೆಯಲ್ಲಿ ಎ ಐ ಎಲ್ ಯು ಜಿಲ್ಲಾ ಕಾರ್ಯದರ್ಶಿ ಚಂದನ್ ಕುಮಾರ್, ಜಂಟಿ ಕಾರ್ಯದರ್ಶಿ ಎಂಕೆ ರೇವಣ್ಣ, ರಾಜ್ಯ ಪದಾಧಿಕಾರಿ ಹಿರಿಯ ನ್ಯಾಯವಾದಿ ತಿಮ್ಮೇಗೌಡ ಮತ್ತು ಸಂಘಟನಾ ಕಾರ್ಯದರ್ಶಿ, ಕಿಶೋರ್ ಕೃಷ್ಣಯ್ಯ ಇದ್ದರು. ಸಮಾರಂಭವನ್ನು ಯುವ ವಕೀಲರಾದ ಅಶ್ವಿನಿ ಮತ್ತು ಪುಟ್ಟಲಿಂಗಮ್ಮ (ಪಲ್ಲವಿ ಗೌಡ) ನಿರ್ವಹಿಸಿದರು.

ಯುವ ವಕೀಲರಾದ ಸಚಿನ್ ಆಕಾಶ್ ಚೇತನ್ ಆತಗೂರು ಕಾರ್ಯಾಗಾರ ಯಶಸ್ವಿಯಾಗಿ ನೆರವೇರಲು ಅಗತ್ಯವಾದ ಮೂಲಭೂತ ಸೌಕರ್ಯಗಳ ಏರ್ಪಾಡಿಗೆ ಶ್ರಮ ವಹಿಸಿದ್ದರು. ಮಂಡ್ಯ ಆರ್.ಟಿ.ಓ ಕಚೇರಿ ಮುಂಭಾಗದ ಕಾಳಪ್ಪ ಶ್ರಮಿಕ ನಗರದ ಪೌರಕಾರ್ಮಿಕರ ಮಕ್ಕಳಾಗಿ ಶ್ರಮವಹಿಸಿ ಓದಿ ಮುಂದೆ ಬಂದು ವಕೀಲರಾದ ಕುಮಾರಿ ಕೌಶಲ್ಯ ಮತ್ತು ಮಂಜುನಾಥ್ ಅವರನ್ನು ಸಭೆ ಶ್ಲಾಘಿಸಿತು. ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಆನ್ಲೈನ್ ಉಪನ್ಯಾಸಗಳನ್ನು ನ್ಯಾಯಾಧೀಶರಾಗಲು ಪರೀಕ್ಷೆ ತೆಗೆದುಕೊಂಡ ಯುವ ವಕೀಲರು ಬಳಸಿಕೊಳ್ಳಬೇಕೆಂದು ವಕೀಲ ಶ್ರೀನಿವಾಸ್ ಕುಮಾರ್ ಮತ್ತು ಆರ್ ಜಗನ್ನಾಥ್ ಕರೆಕೊಟ್ಟರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ