ಪುಸ್ತಕ ಓದುವ ಸಂಸ್ಕೃತಿ ಸಮಾಜದಲ್ಲಿ ಹೆಚ್ಚಾದರೆ ಒಂದಿಷ್ಟು ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದು ರಂಗಕರ್ಮಿ ಶ್ರೀನಿವಾಸಪ್ರಭು ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಗಾಂಧಿ ಭವನದಲ್ಲಿ ಚಿರಂತನ ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿ ಕೆ.ಪ್ರಭಾಕರ್ ಅವರ ‘ಜಡ್ಜ್ಮೆಂಟ್’ ಹಾಗೂ ಸುಮಾರಾಣಿ ಅವರ ‘ದೇವರ ಹುಡುಕಾಟದಲ್ಲಿ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮನುಷ್ಯ ಜೀವನದಲ್ಲಿ ಮಿತಿಯನ್ನು ಹಾಕಿಕೊಳ್ಳುತ್ತಾನೆ. ಆದರೆ ಕೆಲವೊಮ್ಮೆ ನಾವೇ ನಮ್ಮ ಮಿತಿ ದಾಟಿ ಮುನ್ನುಗ್ಗಿದಾಗ ಸಾಧನೆ ಸಾಧ್ಯವಾಗುತ್ತದೆ. ಮನುಷ್ಯ ಜೀವನದಲ್ಲಿ ಸಾಧನೆ ಮಾಡಬೇಕಾದರೆ ಚೌಕಟ್ಟು ಹಾಕಿಕೊಂಡು, ಆ ಮಿತಿಯನ್ನ ನಾವೇ ಮೀರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಬಿ.ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಕೃತಿಗಳ ಬರವಣಿಗೆ ಹಿಂದೆ ಯಾವುದೇ ಕಟ್ಟುಪಾಡುಗಳಿಲ್ಲ ಎಂಬುದು ಈ ಎರಡು ಕೃತಿ ನೋಡಿದರೆ ತಿಳಿಯುತ್ತದೆ. ಇದರಲ್ಲಿ ಭಾವನೆಗಳ ಚಿತ್ತ ಲಹರಿ ವ್ಯಕ್ತವಾಗುವ ಮೂಲಕ ಜೀವನ ಉತ್ಸಾಹ ಹೆಚ್ಚು ಮಾಡುವಲ್ಲಿ ಲೇಖಕರ ಶ್ರಮವಿದೆ.
ದೇವರ ಹುಡುಕಾಟದಲ್ಲಿ ಕೃತಿ ಕುರಿತು ಮಾತನಾಡಿದ ಸಹ ಪ್ರಾಧ್ಯಾಪಕ ಕೆ.ಸೋಮಶೇಖರ, ಭಾವನೆಗಳು ಸುಮಾರಾಣಿ ಶಂಭು ಅವರ ಲೇಖನಿಯಲ್ಲಿ ಉತ್ತಮವಾಗಿ ವ್ಯಕ್ತವಾಗಿವೆ. ದೇವರ ಹುಡುಕಾಟದಲ್ಲಿ ಮೌಲಿಕ ಕೃತಿ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. ಪ್ರತಿ ಲೇಖನವೂ ಸಹ ಓದುಗರನ್ನು ಓದಿಸಿಕೊಂಡು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಶ ವ್ಯಕ್ತಪಡಿಸಿದರು.
ಜಡ್ಜ್ಮೆಂಟ್ ಕೃತಿ ಕುರಿತು ಮಾತನಾಡಿದ ಹೈಕೋರ್ಟ್ ವಕೀಲ ಲೋಹಿತ್ ಹನುಮಾಪುರ, ವಕೀಲ ವೃತ್ತಿಯಲ್ಲಿ ಒಳ್ಳೆಯ ಹೆಸರು ಗಳಿಸುವುದು ಕಷ್ಟ. ಪ್ರಸ್ತುತದಲ್ಲಿ ನೋಡುವುದರಾದರೆ ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ಗೌರವ ಹೆಚ್ಚಾಗುತ್ತಿದೆ. ಸತ್ಯವಾದ ಪ್ರಕರಣಗಳು ಹೊರ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ, ಪ್ರತಿಯೊಬ್ಬ ವಕೀಲರಿಗೂ ಕೂಡ ಈ ಕೃತಿ ದಾರಿದೀಪವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ರಂಜನಿ ಪ್ರಭು, ಸುಮಾರಾಣಿ ಶಂಭು, ಕೆ.ಪ್ರಭಾಕರ್, ಚಿರಂತ ಪ್ರಕಾಶನದ ಕಬ್ಬನಹಳ್ಳಿ ಶಂಭು, ಶಮಂತಕ ಪ್ರಭಾಕರ್ ಉಪಸ್ಥಿತರಿದ್ದರು.




