ಕನ್ನಡ ಸಾಹಿತ್ಯಕ್ಕೆ ದೊರೆತಿರುವ 8 ಜ್ಞಾನಪೀಠ ಪ್ರಶಸ್ತಿಗಳೇ ನಮ್ಮ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿ. ಬಸವಣ್ಣನವರ ವಚನಗಳು, ದಾಸರ ಕೀರ್ತನೆಗಳು, ಕವಿಗಳ ಕಾವ್ಯಗಳು ನಮ್ಮ ನಾಡಿನ ಪರಂಪರೆ, ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಅಸ್ಮಿತೆ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲಾಡಳಿತ ವತಿಯಿಂದ ಮಂಡ್ಯ ನಗರದ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 70 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನವೆಂಬರ್ 1 ರಂದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಅನಿವಾರ್ಯತೆಯಿಂದ ಫಜಲ್ ಅಲಿ ನೇತೃತ್ವದ ಸಮಿತಿ ರಚಿಸಿ, ವರದಿ ಪಡೆಯಲಾಯಿತು. ಈ ವರದಿಯ ಆಧಾರದ ಮೇಲೆ ನವೆಂಬರ್ 1, 1956ರಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾಗಿ ಕನ್ನಡ ಭಾಷೆಯನ್ನಾಡುವ ಪ್ರಾಂತ್ಯಗಳನ್ನೊಳಗೊಂಡ ಮೈಸೂರು ರಾಜ್ಯ ಉದಯವಾಯಿತು ಎಂದರು.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನವೆಂಬರ್ 1, 1973 ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ ಡಿ. ದೇವರಾಜ ಅರಸು ರವರು ನಾಮಕರಣ ಮಾಡಿದರು. ಕರ್ನಾಟಕ ರಾಜ್ಯದ ಏಕೀಕರಣಕ್ಕೆ ಹಲವಾರು ವ್ಯಕ್ತಿಗಳು ಕಾರಣ ಕರ್ತರಾಗಿದ್ದಾರೆ. ಹುಯಿಲಗೋಳ ನಾರಾಯಣ ರಾವ್, ಎನ್.ಎಸ್.ಹರ್ಡೀಕರ್, ಗಂಗಾಧರರಾವ್ ದೇಶಪಾಂಡೆ, ಆರ್. ದಿವಾಕರ್, ಸಕ್ಕರಿ ಬಾಳಾಚಾರ್ಯ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ಶಿವರಾಮ ಕಾರಂತ, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ಹಾಗೂ ಇನ್ನೂ ಹಲವು ಮಹನೀಯರ ಹೋರಾಟ ಸ್ಮರಣೀಯ ಎಂದು ತಿಳಿಸಿದರು.
ಆದಿ ಕವಿ ಪಂಪನಿಂದ ಇಲ್ಲಿಯವರೆಗೂ ಅನೇಕ ಕವಿಮಾನ್ಯರು, ಸಾಹಿತಿಗಳು ನಾಡು-ನುಡಿ ಹಾಗೂ ಕನ್ನಡ ನಾಡಿನ ಕಲೆ, ಸಂಸ್ಕೃತಿಯ ಬಗೆಗೆ ಸಮೃದ್ಧ ಸಾಹಿತ್ಯ ರಚಿಸಿದ್ದಾರೆ. ಮಂಡ್ಯದ ಈ ನಮ್ಮ ನೆಲವು ಹಲವು ಕವಿಗಳ, ಸಾಹಿತಿಗಳ ಹಾಗೂ ಕಲಾವಿದರಿಗೆ ಜನ್ಮ ನೀಡಿದ್ದು ಅವರ ಕನ್ನಡದ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಬಿ.ಎಂ.ಶ್ರೀ, ಪು.ತಿ.ನ., ಕೆ.ಎಸ್. ನರಸಿಂಹಸ್ವಾಮಿ, ಜಿ.ವೆಂಕಟಸುಬ್ಬಯ್ಯ, ಕೆ.ಎಸ್.ನಿಸಾರ್ಅಹಮದ್, ಬೆಸಗರಹಳ್ಳಿ ರಾಮಣ್ಣ, ಹೆಚ್.ಎಲ್. ನಾಗೇಗೌಡ ಇನ್ನೂ ಮೊದಲಾದ ಮಹನೀಯರನ್ನು ನಾವೆಲ್ಲರೂ ನೆನೆಯಬೇಕಿದೆ ಎಂದರು.

ರಾಜ್ಯದ ಜನರ ಬೆಂಬಲದೊಂದಿಗೆ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಾಡಿನ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಹಾಗೂ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಜನ ಮೆಚ್ಚಿದ ಮುಖ್ಯಮಂತ್ರಿಗಳಾಗಿ ಸಿದ್ಧರಾಮಯ್ಯರವರು ಹಾಗೂ ಉಪ ಮುಖ್ಯಮಂತ್ರಿಗಳಾಗಿ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಜನಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಅಗತ್ಯತೆಗಳನ್ನು ಪೂರೈಸುವ ಹಿನ್ನಲೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರದ ಹೆಮ್ಮೆ ಎಂದು ಅಭಿಪ್ರಾಯಪಟ್ಟರು.

ಶಕ್ತಿಯೋಜನೆ: ಈ ಯೋಜನೆಯಡಿ ಎಲ್ಲಾ ವರ್ಗದ ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಜಿಲ್ಲೆಯಲ್ಲಿ ಈವರೆಗೆ ಒಟ್ಟು 16.86 ಕೋಟಿ ಟಿಕೆಟ್ಗಳನ್ನು ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ನೀಡಿ ಒಟ್ಟು ರೂ.457 ಕೋಟಿ ವೆಚ್ಚಭರಿಸಲಾಗಿದೆ.
ಅನ್ನಭಾಗ್ಯ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈವರೆಗೆ ಒಟ್ಟು 73,50,911 ಫಲಾನುಭವಿಗಳಿಗೆ ರೂ. 402 ಕೋಟಿ ಹಣವನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ.
ಗೃಹಜ್ಯೋತಿ ಮಂಡ್ಯ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 496406 ಗ್ರಾಹಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಸೆಪ್ಟೆಂಬರ್ 2025ರ ಅಂತ್ಯಕ್ಕೆ ವಿದ್ಯುತ್ ಅನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ, ರೂ. 448 ಕೋಟಿಗಳನ್ನು ಪಾವತಿಸಲಾಗಿದೆ.
ಗೃಹಲಕ್ಷ್ಮಿ ಈ ಯೋಜನೆಯಡಿ ಮಹಿಳೆಯರ ‘ಆರ್ಥಿಕಸ ಬಲೀಕರಣ’ ಕ್ಕಾಗಿ ಪ್ರತಿ ತಿಂಗಳು ಎರಡು ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಇಲ್ಲಿಯವರೆಗೆ ರೂ.1762.41 ಕೋಟಿಗಳನ್ನು ಅರ್ಹ ಫಲಾನುಭವಿಗಳಿಗೆ ಪಾವತಿಸಿದೆ.
ಯುವನಿಧಿ ʼಯುವ ನಿಧಿ ಯೋಜನೆ’ ಯಡಿ, ಮಂಡ್ಯ ಜಿಲ್ಲೆಯಲ್ಲಿ ಈವರೆಗೆ 5,942 ಅಭ್ಯರ್ಥಿಗಳಿಗೆ ರೂ.3.32 ಕೋಟಿ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗಿದೆ.
ಒಟ್ಟಾರೆ ಮಂಡ್ಯ ಜಿಲ್ಲೆಯ ಜನರಿಗೆ ಇದುವರೆಗೆ ಗ್ಯಾರಂಟಿ ಯೋಜನೆಗಳ ಮೂಲಕ ರೂ.3072 ಕೋಟಿಗಳನ್ನು ನೀಡಲಾಗಿದೆ ಎಂದರು.
ಪ್ರಸಕ್ತ ವರ್ಷದಲ್ಲಿ ಕಾವೇರಿ ಮಾತೆಯ ಕೃಪೆಯಿಂದ, ನಮ್ಮ ಹೆಮ್ಮೆಯ ಕೆ.ಆರ್.ಎಸ್. ಅಣೆಕಟ್ಟು ಮೂರು ಭಾರಿ ಭರ್ತಿ ಆಗಿದೆ. ಅಲ್ಲದೇ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿಯೇ ಜಲಾಶಯವು ಸಂಪೂರ್ಣವಾಗಿ ಭರ್ತಿಯಾಗಿರುವುದು ಅತ್ಯಂತ ಸಂಭ್ರಮದ ವಿಷಯವಾಗಿದೆ. ಈ ಸಂದರ್ಭದಲ್ಲಿ ಮತ್ತೊಂದು ಹೆಮ್ಮೆಯ ಸಂಗತಿ ಎಂದರೆ, ದಕ್ಷಿಣ ಭಾರತದಲ್ಲಿಯೇ ಪ್ರಥಮವಾಗಿ “ಕಾವೇರಿ ಆರತಿ” ಕಾರ್ಯಕ್ರಮವನ್ನು ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಆಯೋಜಿಸಿದ್ದು, ಕನ್ನಡಿಗರ ಜೀವನಾಡಿ ಕಾವೇರಿ ಮಾತೆಗೆ ಗಂಗಾ ಆರತಿ ಮಾದರಿಯಲ್ಲಿ ನಡೆದ ಕಾವೇರಿ ಆರತಿ ಜನರ ಮನ ಸೆಳೆದಿದೆ. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದ ತಿಳಿಸಿದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವುದು ಮಂಡ್ಯ ಜಿಲ್ಲೆಯಲ್ಲಿ. ಕನ್ನಡವನ್ನು ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯಬೇಕು. ಕನ್ನಡನಾಡು, ಜಲ, ಭಾಷೆ, ಸಂಸ್ಕೃತಿ ರಕ್ಷಣೆಗೆ ಕಟಿಬದ್ದವಾಗಿರೋಣ ಎಂದು ಈ ದಿನ ಪ್ರತಿಜ್ಞೆ ಮಾಡೋಣ. ಕನ್ನಡ ನಾಡು, ಕನ್ನಡ ನುಡಿ, ಕನ್ನಡದ ಸಂಸ್ಕೃತಿ ಒಗ್ಗಟ್ಟಿನ ಭಾವನೆಗಳನ್ನು ಪ್ರತಿಯೊಬ್ಬ ಕನ್ನಡಿಗನ ಮನೆ ಮನಗಳಲ್ಲಿ ಭಿತ್ತಿ ಬೆಳೆಸಲು ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಗಣಿಗ ರವಿಕುಮಾರ್, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಸಿಇಓ ಕೆ.ಆರ್,ನಂದಿನಿ, ಪೋಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ನಗರಸಭೆಯ ಅಧ್ಯಕ್ಷ ಎಂ.ವಿ.ಪ್ರಕಾಶ್, ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್,ಕರ್ನಾಟಕ ಸಣ್ಣಕೈಗಾರಿಕಾ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮುಡಾ ಅಧ್ಯಕ್ಷ ನಯೀಮ್ ಇತರಿದ್ದರು.




