ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸದ್ಯದಲ್ಲಿಯೇ ಡಿಜಿಟಲ್ ಗ್ರಂಥಾಲಯ ಹಾಗೂ ಐಎಎಸ್, ಕೆಎಎಸ್ ತರಬೇತಿ ಕೇಂದ್ರವನ್ನು ಆರಂಭಿಸಲಾಗುವುದೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ ನರೇಂದ್ರಸ್ವಾಮಿ ಘೋಷಣೆ ಮಾಡಿದರು.
ಮಳವಳ್ಳಿ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿಆರ್ಎಸ್ ಅನುದಾನದಲ್ಲಿ ಅಂತರ್ಜಾಲದ ಮೂಲಕ ಇ ಪುಸ್ತಕ, ಲೇಖನ ಸೇರಿದಂತೆ ವಿವಿಧ ಶೈಕ್ಷಣಿಕ ಸಂಪನ್ಮೂಲಗಳನ್ನು ಒದಗಿಸುವ ಸುಸರ್ಜಿತ ಗ್ರಾಂಥಾಲಯ ಆರಂಭಕ್ಕೆ ಪೂರ್ವಸಿದ್ದತೆ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿಯೇ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜಿಲ್ಲೆ ಮಂಡ್ಯ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಜೊತೆಗೆ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವವರು ಹೆಚ್ಚುಮಂದಿ ಕನ್ನಡಿಗರೇ ಆಗಿದ್ದಾರೆ. ನೆಲ,ಜಲ, ಭಾಷೆಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಶಿಕ್ಷಣದಲ್ಲಿ ಪೈಪೋಟಿಯ ಯುಗದಲ್ಲಿ ಸಾಗಬೇಕಾದ ಪ್ರಸ್ತುತ ಸಂದರ್ಭದಲ್ಲಿ ತಾಲ್ಲೂಕಿನಲ್ಲಿ ಹಲವು ಸರ್ಕಾರಿ ಶಾಲೆಗಳಲ್ಲಿ ಕೊಠಡಿ, ಶೌಚಾಲಯ, ಅಡಿಗೆ ಮನೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಕೊರತೆಯನ್ನು ಎದುರಿಸಲಾಗುತ್ತಿತ್ತು. ಹಲವಾರು ಸಂಘ ಸಂಸ್ಥೆಗಳು ಹಾಗೂ ಉದ್ದಿಮೆದಾರರನ್ನು ಬೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳನ್ನು ಮನವರಿಕೆ ಮಾಡಿದ ಪರಿಣಾಮ ಸುಮಾರು ಶಾಲಾ ಕೊಠಡಿ ನಿರ್ಮಾಣ ಮತ್ತು ನವೀಕರಣ, ಮಲ್ಟಿಮೀಡಿಯಾ, ಡಿಜಿಟಲೀಕರಣ ಸೇರಿದಂತೆ ಸರ್ಕಾರಿ ಶಾಲೆಯ ಇತರೆ ಯೋಜನೆಗಳಿಗೆ ಇಲಾಖೆ ಅನುದಾನ ಸೇರಿಸಿ ಸುಮಾರು ೧೭,೨೬೯೫೦೦೦ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಳವಳ್ಳಿ ತಾಲ್ಲೂಕಿನ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗಿದೆ, ೧೬ ಕೋಟಿ ರೂ. ವೆಚ್ಚದ ಪ್ರಜಾಸೌಧ ನಿರ್ಮಾಣಕ್ಕೆ ಸದ್ಯದಲ್ಲಿಯೇ ಶಂಕುಸ್ಥಾಪನೆಯನ್ನು ನೆರೆವೇರಿಸಲಾಗುವುದು. ಪಾಲಿಟೆಕ್ನಿಕ್, ಐಟಿಐ, ಪ್ರಥಮ ದರ್ಜೆ ಕಾಲೇಜು ಜೊತೆಗೆ ಮುಂದುವರಿದ ಭಾಗವಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗುವುದು, ರೈತಾಪಿ ಬವಣಿಯನ್ನು ನೀಗಿಸಿ ಕೊನೆಯ ಭಾಗದ ರೈತರಿಗೂ ನೀರು ಒದಗಿಸಲು ಹಲವು ಏತ ನೀರಾವರಿ ಜೊತೆಯಲ್ಲಿ ಮಳವಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಜವಾಬ್ದಾರರನ್ನಾಗಿ ನಾಡಿನ ಕಲ್ಯಾಣ ಕಾರ್ಯಕ್ರಮಗಳಿಗೆ ನಿರಂತರವಾಗಿ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಲೊಕೇಶ್ ಮಾತನಾಡಿ, ಸೇವೆ, ಆಡಳಿತ ಮತ್ತು ದಿನನಿತ್ಯದ ಕೆಲಸಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತಾಗಬೇಕು, ಸಮಾಜದಲ್ಲಿ ಸೌಹರ್ದತೆ, ಸಮಾನತೆ ಮಾನವೀಯತೆ ಮೌಲ್ಯವನ್ನು ಬೆಳೆಸಿಕೊಂಡು, ಕನ್ನಡ ಭಾಷೆಯ ಅಭಿವೃದ್ದಿಗೆ ನಿಷ್ಠೆಯಿಂದ ಶ್ರಮಿಸಬೇಕೆಂದು ಕರೆ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪಥ ಸಂಚಲನ, ನೃತ್ಯ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ತಾಲ್ಲೂಕು ಅಧ್ಯಕ್ಷ ಮಾದೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಎಚ್.ಜಿ ಶ್ರೀನಿವಾಸ್, ಡಿವೈಎಸ್ಪಿ ಯಶ್ವಂತ್ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮುಖಂಡರು ಇದ್ದರು.




