ನ.11 ರ ಮಂಗಳವಾರ ಸಂಜೆ 5 ಗಂಟೆಗೆ ಮಂಡ್ಯ ನಗರದ ಶಿವನಂಜಪ್ಪ ಪಾರ್ಕ್ನಲ್ಲಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟನ ಜನ್ಮದಿನದ ನೆನಪಿನಲ್ಲಿ ‘ಒಂದಾನೊಂದು ಕಾಲದಲ್ಲಿ ಶಂಕರ್ನಾಗ್’ ಕಾರ್ಯಕ್ರಮ ಆಯೋಜಿಸಲಾಗಿದೆ.
ಪರಿಚಯ ಪ್ರಕಾಶನದ ಓದಿನಹಾದಿಯ 5ನೇ ಸಂಚಿಕೆಯ ನಿಮಿತ್ತ ಓದು, ಹರಟೆ, ಹಾಡು ಮತ್ತು ಕನ್ನಡ ಚಿತ್ರಜಗತ್ತಿನ ಮಿಂಚಿನ ಓಟಗಾರನ ನೆನಪುಗಳ ಮೆಲುಕು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಟ ಅನಂತ್ ನಾಗ್ ಅವರು ಬರೆದಿರುವ ‘ನನ್ನ ತಮ್ಮ ಶಂಕರ’ ಮತ್ತು ಆರ್ಕೆ ನಾರಾಯಣರ ‘ಮಾಲ್ಗುಡಿ ಡೇಸ್’ ಪುಸ್ತಕಗಳ ಆಯ್ದ ಭಾಗಗಳನ್ನು ಸಂವೇದನಾಶೀಲ ಪತ್ರಕರ್ತ ಸಿದ್ದು ಆರ್ಜಿ ಹಳ್ಳಿ ಮತ್ತು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ನ ವಿನಯ್ಕುಮಾರ್ ಪ್ರಸ್ತುತ ಪಡಿಸಲಿದ್ದಾರೆ ಎಂದು ಪರಿಚಯ ಪ್ರಕಾಶನದ ಸಂಸ್ಥಾಪಕರಾದ ಶಿವಕುಮಾರ ಆರಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಂಜೆ ಐದು ಗಂಟೆಯಿಂದ ಆರಂಭವಾಗುವ ಸಂಗೀತ ಕಾರ್ಯಕ್ರಮದಲ್ಲಿ ಶಂಕರ್ ನಾಗ್ ಅವರ ಪ್ರಸಿದ್ಧ ಚಲನಚಿತ್ರ ಗೀತೆಗಳನ್ನು ಮಂಡ್ಯ ಜಿಲ್ಲೆಯ ಹೆಮ್ಮೆಯ ಹಾಡುಗಾರರು ಪ್ರಸ್ತುತಪಡಿಸಲಿದ್ದು, ಕೊಳಲು, ಸ್ಯಾಕ್ಸಾಫೋನ್ ವಾದಕರು ಸಂಗೀತ ನಮನ ಸಲ್ಲಿಸಿದ್ದಾರೆ. ಶಂಕರ್ ನಾಗ್ ಅವರ ಸಮಾಜಮುಖಿ ಚಿಂತನೆಗಳನ್ನು ಈ ತಲೆಮಾರಿಗೆ ಪಸರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು ಶಂಕರ್ ನಾಗ್ ಅವರ ಅಭಿಮಾನಿಗಳು ಭಾಗವಹಿಸಬಹುದು ಎಂದು ಪರಿಚಯ ಪ್ರಕಾಶನ ತಿಳಿಸಿದೆ.




