ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಸಾಮಾಜಿಕ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಬಿಜಾಪುರ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮದಲ್ಲಿ ಶಾಂತಿ ಕಾಲೇಜು ಪದವಿಪೂರ್ವ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ೨೦ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಧ್ವಜರೋಹಣ ನರೆವೇರಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಸಮಯ, ಶಿಸ್ತು ಪಾಲನೆ ಜೊತೆಗೆ ವ್ಯಕ್ತಿತ್ವ ವಿಕಾಶನಕ್ಕೆ ಪೂರಕವಾಗಿ ಸಹಾಯ ಮಾಡುತ್ತದೆ. ಶಿಬಿರ ಸಮಾಜಿಕ ಕಳಕಳಿಯನ್ನು ಕಲಿಸುತ್ತದೆ ಎಂದು ಹೇಳಿದರು.
ಪಠ್ಯದ ಜೊತೆಗೆ ಪಠ್ಯೇತ್ತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಪ್ರಮುಖವಾಗಿವೆ. ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಶ್ರಮದಾನ, ಗಿಡನೆಟ್ಟು ಪರಿಸರ ಉಳಿಸುವುದು ಸಾರ್ವಜನಿಕರಿಗೆ ಆರೋಗ್ಯದ ಜಾಗೃತಿ ಮೂಡಿಸುವುದು ಸೇರಿದಂತೆ ಅನೇಕ ಚಟುವಟಿಕೆಗಳು ಶಿಸ್ತು ಬದ್ದವಾಗಿ ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಸುವುದು ಹಾಗೂ ಕಲಿಯುವುದು ಏಕ ಕಾಲದಲ್ಲಿ ನಡೆಯುವುದರಿಂದ ನಾಯಕತ್ವದ ಗುಣ ಜೊತೆಯಲ್ಲಿಯೇ ಬೆಳೆಯುತ್ತದೆ ಎಂದರು.
ಶಾಂತಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಪುಟ್ಟರಾಜು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಕನಸಿನ ಕೂಸು ರಾಷ್ಟ್ರೀಯ ಸೇವಾ ಯೋಜನೆಯಾಗಿದ್ದು, ರಾಷ್ಟçಪ್ರೇಮ ಹಾಗೂ ಸೇವಾ ಮನೋಭಾವನೆಯನ್ನು ಬೆಳೆಸಲು ಶಿಬಿರ ಪ್ರಾಮುಖ್ಯತೆ ಪಡೆದಿದೆ ಎಂದು ವಿವರಿಸಿದರು.
ಮಾಹಿತಿ ಪುಸ್ತಕಕ್ಕೆ ಶಾಂತಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಎಚ್ ಎಂ ಮಹದೇವಸ್ವಾಮಿ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದರಾಜು ವಸ್ತು ಪ್ರದರ್ಶನ ಕುಟೀರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ ಎಚ್ ಕೆಂಪಯ್ಯ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಅನಿಲ್, ಹಿರಿಯ ಎನ್. ಎಸ್.ಎಸ್ ಅಧಿಕಾರಿ ರಂಗಸ್ವಾಮಿ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಮಾದಹಳ್ಳಿ ಮುಖಂಡರು ಇದ್ದರು.




