ಪತ್ರಕರ್ತರು ಯಾರೇ ತಪ್ಪು ಮಾಡಿರಲಿ,ಅವರ ಮರ್ಜಿಗೆ ಒಳಗಾಗದೆ ಅವರ ಬಗ್ಗೆ ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಸಿ.ಎಸ್.ಪುಟ್ಟರಾಜು ಸಲಹೆ ನೀಡಿದರು.

ಪಾಂಡವಪುರ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಅಧಿಕಾರಿಗಳ ಜೊತೆ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಪತ್ರಕರ್ತರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ತಾಲೂಕು ಆಡಳಿತದ ಅಧಿಕಾರಿಗಳು,ಆರೋಗ್ಯ ಇಲಾಖೆ ಸಿಬ್ಬಂದಿಗಳ ಜೊತೆ ಕರ್ತವ್ಯ ನಿರ್ವಹಿಸಿದ ಅವರ ಸೇವೆ ಅಪಾರ. ಕೋವಿಡ್ ನಿರ್ವಹಣೆಯ ಬಗ್ಗೆ,ಜನರ ಆರೋಗ್ಯದ ಬಗ್ಗೆ ವರದಿ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡಿದ ಪತ್ರಕರ್ತರ ಸೇವೆ ಅಪಾರ ಎಂದರು.
ಸಮಾಜದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ತಮ್ಮ ವರದಿಗಾರಿಕೆ ಮೂಲಕ ಬೆಳಕಿಗೆ ತರುವುದು ಪತ್ರಕರ್ತರ ಜವಾಬ್ದಾರಿಯಾಗಿದೆ. ನಮ್ಮ ತಾಲೂಕಿನಲ್ಲಿ ಇದ್ದ ಒಬ್ಬ ಸರ್ಕಲ್ ಇನ್ಸ್ಪೆಕ್ಟರ್ ಪತ್ರಕರ್ತರನ್ನು ಬಿಡದೆ ಲಂಚಕ್ಕೆ ಕೈ ಒಡ್ಡಿದ್ದ. ಇಂತಹ ಅಯೋಗ್ಯರ ಬಗ್ಗೆ ಬರೆದು ಆತನನ್ನು ಸರಿದಾರಿಗೆ ತರುವ ಕೆಲಸ ಪತ್ರಕರ್ತರದ್ದಾಗಿದೆ ಎಂದರು.
ನಾನು ಜಿಲ್ಲಾ ಪಂಚಾಯತಿ ಸದಸ್ಯನಾಗಿ, ಶಾಸಕನಾಗಿ, ಸಂಸದನಾಗಿ, ಮಂತ್ರಿ ಮಂತ್ರಿ ಆದ ಹಿಂದೆ ಹಿರಿಯ ಪತ್ರಕರ್ತರ ಮಾರ್ಗದರ್ಶವಿದೆ. ನನ್ನ ಸಾರ್ವಜನಿಕ ಬದುಕಿನಲ್ಲಿ ಒಬ್ಬರ ಕೈಲಿ ಬೆರಳು ತೋರಿಸಿಕೊಳ್ಳದ ಹಾಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನ್ನ ತಿದ್ದಿ ಮಾರ್ಗದರ್ಶನ ನೀಡಿದ ಹಿರಿಯ ಪತ್ರಕರ್ತರನ್ನು ನಾನೆಂದಿಗೂ ಮರೆಯುವುದಿಲ್ಲ ಎಂದರು.
ಪತ್ರಕರ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ತಾಲೂಕಿನ ಪತ್ರಕರ್ತರಿಗೆ ನಿವೇಶನ ನೀಡುವ ಸಂಬಂಧ ಈಗಾಗಲೇ ಪುರಸಭೆ ಅಧ್ಯಕ್ಷರು, ಸದಸ್ಯರ ಜೊತೆ ಚರ್ಚೆ ಮಾಡಿದ್ದೇನೆ.
ನಮ್ಮ ತಾಲೂಕಿನಿಂದಲೇ ಮೊದಲ ಬಾರಿಗೆ ಪತ್ರಕರ್ತರಿಗೆ ನಿವೇಶನ ನೀಡುವ ಕಾರ್ಯ ಆರಂಭವಾಗುತ್ತದೆ. ಹಾಗೆಯೇ ಪತ್ರಕರ್ತರ ಭವನಕ್ಕೆ ನಿವೇಶನ ನೀಡಲು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ರವರ ಜೊತೆ ಚರ್ಚೆ ಮಾಡಿದ್ದೇನೆ. ಅಲ್ಲಿವರೆಗೂ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪತ್ರಕರ್ತರ ಭವನಕ್ಕೆ ದೊಡ್ಡದಾದ ಕೊಠಡಿಯ ಒಂದನ್ನು ಪತ್ರಿಕಾಗೋಷ್ಠಿ ಮಾಡಲು ಕೊಡಿಸುವ ಕೆಲಸ ಮಾಡಿದ್ದೇನೆ ಎಂದರು.
ಉಪವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಜನರಿಗೆ,ಸಮಾಜಕ್ಕೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿಯ ಕಡೆ ಹೆಚ್ಚು ಗಮನವನ್ನು ಕೊಡಬೇಕು. ಸಮಾಜಕ್ಕೆ, ಜನರಿಗೆ ಬೇಕಿಲ್ಲದ ಸುದ್ದಿಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ನಯನರವರು, ಪತ್ರಕರ್ತರು ಪತ್ರಿಕಾ ಮೌಲ್ಯವನ್ನು ಇಟ್ಟುಕೊಂಡು ಕೆಲಸ ಮಾಡಬೇಕೆಂದು ನುಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತೀಕೆರೆ ಜಯರಾಮ್ ಪ್ರಧಾನ ಭಾಷಣ ಮಾಡಿದರು.
ಹಿರಿಯ ಪತ್ರಕರ್ತ ಚಿನಕುರುಳಿ ಲೋಕೇಶ್, ಪತ್ರಿಕಾ ವಿತರಕರಾದ ಅಲ್ಪಹಳ್ಳಿ ಮಹೇಶ್ ದರ್ಶನ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ. ಮಂಜುನಾಥ್, ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಪತ್ರಕರ್ತರಾದ ಸೋಮಶೇಖರ್ ಕೆರಗೋಡು, ಸಿ.ಎನ್. ಮಂಜುನಾಥ್,ನವೀನ್ ಕುಮಾರ್, ಬಿ.ಎಸ್.ಜಯರಾಮ್, ಚಿನಕುರಳಿ ರಮೇಶ್,ನಾಗಸುಂದರ್, ಚನ್ನಮಾದೇಗೌಡ, ರಘುವೀರ್, ನಂಜುಂಡಸ್ವಾಮಿ,ಬಿಜೆಪಿ ಮುಖಂಡ ಮಂಜುನಾಥ್ ಮತ್ತಿತರರು ವೇದಿಕೆಯಲ್ಲಿದ್ದರು.




