Friday, November 20, 2026

ಪ್ರಾಯೋಗಿಕ ಆವೃತ್ತಿ

ವಿಶೇಷ ಚೇತನರಿಗೆ ಅನುಕಂಪದ ಜತೆಗೆ ಅವಕಾಶ ಕಲ್ಪಿಸಿ : ಎಂ.ಆನಂದ್

ವಿಶೇಷಚೇತನರಿಗೆ ಅನುಕಂಪದ ಜತೆಗೆ ಸಮಾಜದ ಪ್ರತಿ ಕ್ಷೇತ್ರ, ರಂಗದಲ್ಲೂ ಪ್ರತಿಭೆ ಅನಾವರಣಗೊಳಿಸಲು ಅವಕಾಶಗಳನ್ನು ಕಲ್ಪಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಆನಂದ್ ಹೇಳಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣ ಪುನರ್ವಸತಿ ಯೋಜನೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ -2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶೇಷ ಚೇತನರ ದಿನಾಚರಣೆಯ ಪ್ರಮುಖ ಉದ್ದೇಶ ವಿಶೇಷ ಚೇತನರ ಹಕ್ಕು, ಯೋಗ, ಕ್ಷೇಮ ವೃದ್ಧಿಸುವುದು ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಾಗಿದೆ. ಸಮಾಜದಲ್ಲಿ ಉನ್ನತ ಸ್ಥಾನ, ಮಾನ ಹೊಂದಲು ಪ್ರತಿ ಕ್ಷೇತ್ರದಲ್ಲೂ ವಿಶೇಷ ಚೇತನರಿಗೆ ಅವಕಾಶ ಕಲ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಸರ್ಕಾರವು ವಿಶೇಷ ಚೇತನರಿಗಾಗಿ ಅನೇಕ ಯೋಜನೆ ಹಾಗೂ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಯೋಜನೆಗಳು ಯಶಸ್ವಿಯಾಗುವುದು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಆಗಾಗಿ ವಿಶೇಷ ಸಂಸ್ಥೆಗಳು ಹಾಗೂ ಅಧಿಕಾರಿಗಳು ವಿಶೇಷ ಚೇತನರಿಗಾಗಿ ರೂಪಿಸಿರುವ ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ ಎಂದರು.

ಭಾರತ ದೇಶವು ಶ್ರೇಷ್ಠವಾದ ಸಂವಿಧಾನವನ್ನು ಹೊಂದಿದೆ. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಗೌರವಾನ್ವಿತ ಜೀವನ ನಡೆಸಲು ಎಲ್ಲರಿಗೂ ಅವಕಾಶವಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವಿಶೇಷಚೇತನರಿಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಉಚಿತ ಅರಿವು -ನೆರವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ದೇಶದ ಪ್ರತಿಯೊಬ್ಬ ವಿಕಲಚೇತನರು ತಮಗಾಗಿ ಸೀಮಿತವಾಗಿರುವ ಹಕ್ಕು, ಸೌಲಭ್ಯಗಳನ್ನು ಪಡೆಯುವ ಅಧಿಕಾರ ಹೊಂದಿದ್ದಾರೆ. ಹಕ್ಕುಗಳಿಂದ ವಂಚಿತರಾಗದೆ ಹಕ್ಕು, ಸೌಲಭ್ಯಗಳನ್ನು ಕೇಳಿ ಪಡೆಯಿರಿ ಹಾಗೂ ಎಲ್ಲಾ ರಂಗದಲ್ಲೂ ಅವಕಾಶ ಪಡೆದು ಯಶಸ್ವಿಯುತವಾದ ಬದುಕು ನಿಮ್ಮದಾಗಿಸಿಕೊಳ್ಳಿ ಎಂದು ಆತ್ಮಸ್ಟೈರ್ಯದ ನುಡಿಗಳನ್ನು ಹೇಳಿದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಹೆಚ್. ಕೃಷ್ಣ ಅವರು ಮಾತನಾಡಿ ವಿಶೇಷ ಚೇತನರಲ್ಲಿ ವಿಶೇಷವಾದ ಶಕ್ತಿಯಿದೆ. ಮಾನಸಿಕವಾಗಿ ಅಂಗವೈಫಲ್ಯತೆ ನನ್ನಲ್ಲಿದೆ ಎಂಬುವುದನ್ನು ಮರೆತು ಸದೃಢವಾದ ಬದುಕು ನಿಮ್ಮದಾಗಿಸಿಕೊಳ್ಳಲು ಸರ್ಕಾರವು ಹಲವಾರು ಸೌಲಭ್ಯಗಳನ್ನು ವಿಶೇಷ ಚೇತನರಿಗಾಗಿ ಒದಗಿಸುತ್ತಿದೆ ಎಂದರು.

ಕಂದಾಯ ಇಲಾಖೆ ಮೂಲಕ ಮಾಸಿಕ ನಿರ್ವಹಣಾ ಭತ್ಯೆಯನ್ನು ವಿಶೇಷ ಚೇತನರಿಗಾಗಿ ನೀಡುತ್ತಿದ್ದು, ಶೇ 40 ರಿಂದ 74% ಅಂಗವೈಪಲ್ಯತೆ ಹೊಂದಿರುವವರಿಗೆ ಮಾಸಿಕ ರೂ.800, ಶೇ 75 ರಿಂದ 100% ಅಂಗವೈಪಲ್ಯತೆ ಹೊಂದಿರುವವರಿಗೆ 1,400 ಹಾಗೂ ಭೌತಿಕ ಅಂಗವಿಕಲತೆ ಹೊಂದಿರುವ ವಿಶೇಷ ಚೇತನರಿಗೆ ರೂ. 2000 ಹಣ ನೀಡಲಾಗುವುದು ಎಂದು ತಿಳಿಸಿದರು.

ವಿಶೇಷಚೇತನ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಟಾಕಿಂಗ್ ಲ್ಯಾಪ್ ಟಾಪ್ ಯೋಜನೆ ಹಾಗೂ ಸಾಧನ ಸಲಕರಣೆಗಳ ಸೌಲಭ್ಯ ಹೀಗೆ ಅನೇಕ ಸೌಲಭ್ಯಗಳಿವೆ ಪ್ರತಿಯೊಬ್ಬರೂ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಎಂದರು

ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು, ವಿಶೇಷ ಚೇತನರಿಗೆ ಸಾಧನ ಸಲಕರಣೆ ವಿತರಿಸಲಾಯಿತು ಹಾಗೂ ವಿಶೇಷ ಸಾಧಕರಿಗೆ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಯುವ ಸಬಲೀಕರಣ ಇಲಾಖೆ ಅಧೀಕ್ಷಕರಾದ ನಾಗಭೂಷಣ್, ಮುಖಂಡರಾದ ರಮೇಶ್, ಸಂಪನ್ಮೂಲ ವ್ಯಕ್ತಿ ನಂದೀಶ್ ಹಾಗೂ ಜಿಲ್ಲೆಯಲ್ಲಿನ ವಿಶೇಷ ಚೇತನರ ವಿದ್ಯಾ ಸಂಸ್ಥೆಯ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ