ಮಂಡ್ಯ ತಾಲ್ಲೂಕಿನ ಹೊಳಲು ನಾಡಕಚೇರಿಗಾಗಿ ಬಾಡಿಗೆ ಪಡೆದಿದ್ದ ಮನೆಗೆ ಸುಮಾರು ಒಂದು ಲಕ್ಷ ರೂ. ಬಾಡಿಗೆ ಹಾಗೂ ಇತರೆ ಖರ್ಚು ವೆಚ್ಚಗಳನ್ನು ಪಾವತಿಸದ ಮಂಡ್ಯ ತಾಲ್ಲೂಕು ಕಚೇರಿ ಎದುರು ರೈತರು ಎತ್ತಿನಗಾಡಿ ಹಾಗೂ ಜಾನುವಾರುಗಳೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು.
2022-23, 2023-24 ಸಾಲಿನಿಂದ ಲಕ್ಷ್ಮಮ್ಮ ಕೋಂ ಸಿದ್ದಯ್ಯ ಅವರಿಗೆ ಸೇರಿದ್ದ ಮನೆಯನ್ನು ನಾಡಕಚೇರಿಗಾಗಿ ಬಾಡಿಗೆಗೆ ಪಡೆದಿದ್ದು, ನಂತರ ನಾಡಕಛೇರಿಯನ್ನು ಸ್ಥಳಾಂತರ ಮಾಡಲಾಗಿದೆ. ಆದರೆ ಸದರಿ ಮನೆಗೆ ಬಣ್ಣ ಮಾಡಿಸಬೇಕಾಗಿದೆ. ಬಣ್ಣದ ಅಂದಾಜು ವೆಚ್ಚ ರೂ.1 ಲಕ್ಷ ತಗುಲಲಿದೆ. ಮನೆಯ ಮುಖ್ಯ ಬಾಗಿಲು ಮುರಿದಿದ್ದು ಇದರ ವೆಚ್ಚ ರೂ.20,000 ಮತ್ತು ಇತರೆ ಸಣ್ಣ ಪುಟ್ಟ ರಿಪೇರಿ ವೆಚ್ಚ ರೂ.10,000 ಗಳಾಗಿವೆ. ವಿದ್ಯುತ್ ಬಿಲ್ ಹಣವನ್ನು ಪಾವತಿಸಬೇಕಾಗಿದೆ. ಈ ಬಗ್ಗೆ ಮಾರ್ಚ್ 2024ರಲ್ಲೇ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದರೂ ಇದವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ರೈತರಾದ ರವಿ, ಹೊಳಲು ಶಿವು, ಕೋಣನಹಳ್ಳಿ ಜವರೇಗೌಡ ಹಾಗೂ ಕೊಮ್ಮೇರಹಳ್ಳಿ ನಾಗೇಶ್ ಭಾಗವಹಿಸಿದ್ದರು.




