ಅನುದಾನದ ಕೊರತೆಯಿಂದ ಕಾಮಗಾರಿ ಕುಂಠಿತಗೊಂಡಿರುವ ಮಂಡ್ಯ ತಾಲ್ಲೂಕು ಪಂಚಾಯಿತಿ ಕಟ್ಟಡಕ್ಕೆ ಅನುದಾನ ಒದಗಿಸುವ ಬಗ್ಗೆ ಮಂಡ್ಯ ಶಾಸಕ ರವಿಕುಮಾರ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಗಮನ ಸೆಳೆದರು.
3 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಟ್ಟಡ ಕಾಮಗಾರಿ ನಡೆಸಲು ಅಂದಾಜಿಸಲಾಗಿದ್ದು, ಸರ್ಕಾರ ಈಗಾಗಲೇ 75 ಲಕ್ಷ ಅನುದಾನ ನೀಡಿದೆ. ಮಂಡ್ಯ ಜಿಲ್ಲೆಯ 80 ವರ್ಷಗಳ ಇತಿಹಾಸದಲ್ಲಿ ತಾಲ್ಲೂಕು ಪಂಚಾಯಿತಿಗೆ ತನ್ನದೇ ಆದ ಕಟ್ಟಡ ಇರಲಿಲ್ಲ. ನಮ್ಮ ಸರ್ಕಾರ 3 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆ ನೀಡಿದೆ. ಆದರೆ ಇನ್ನೂ 2.25 ಕೋಟಿ ಅನುದಾನದ ಒದಗಿಸದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತು, ಕಬ್ಬಿಣಗಳು ತುಕ್ಕು ಹಿಡಿಯುತ್ತಿವೆ ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಭೈರೇಗೌಡ ಅವರು ಬಾಕಿ ಅನುದಾನವನ್ನು ಒದಗಿಸಲು ಸರ್ಕಾರ ಸಿದ್ದವಿದೆ ಎಂದು ಶಾಸಕ ರವಿಕುಮಾರ್ ಅವರಿಗೆ ಭರವಸೆ ನೀಡಿದರು.




