ವಿಶ್ವಮಾನವ ಧರ್ಮ ಜಾಗೃತಿ ವೇದಿಕೆಯ ವತಿಯಿಂದ ಕುವೆಂಪು ಅವರ ಜನ್ಮದಿನವಾದ ಡಿ.೨೯ರಂದು`ವಿಶ್ವಮಾನವ ಧರ್ಮದ ಮೊದಲ ಮಹಾಅಧಿವೇಶನ’ವನ್ನು ಮೈಸೂರಿನ ಟಿ.ನರಸೀಪುರ ತಾಲೂಕಿನ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರ ಟ್ರಸ್ಟ್ನ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ವ್ಯವಸ್ಥಪಕ ಟ್ರಸ್ಟಿ ನಾದಾನಂದನಾಥ ಸ್ವಾಮೀಜಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಈ ವೇದಿಕೆಯ ವತಿಯಿಂದ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ‘ವಿಶ್ವಮಾನವ ಧರ್ಮದ ಮೊದಲ ಮಹಾಅಧಿವೇಶನ’ವನ್ನು ನಡೆಸಲಾಗುತ್ತಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸೇರಿದಂತೆ ಇತರ ವಿಚಾರವಂತರ ನೇತೃತ್ವದಲ್ಲಿ ಕುವೆಂಪು ತಾತ್ವಿಕ ಆಶಯಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.
ರಾಜ್ಯದ ಎಲ್ಲ ಸಮುದಾಯ ಪ್ರಗತಿಪರ ಸಂಘಟನೆಗಳು, ವಿಚಾರವಂತರು, ಕುವೆಂಪು ಅನುಯಾಯಿಗಳು, ನಾಗರಿಕರನ್ನೊಳಗೊಂಡ ಸ್ವಾಗತ ಸಮಿತಿ ರಚಿಸಿ ಮಹಾಅಧಿವೇಶನಕ್ಕೆಸಿದ್ದತೆ ನಡೆಯುತ್ತಿದೆ. ನಾಡಿನ ಎಲ್ಲ ಜನರು ಅಧಿವೇಶನದಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಆನ್ಲೈನ್ ನೋಂದಣಿ ಪ್ರಕ್ರಿಯೆಯು ಆರಂಭಗೊಂಡಿದೆ ಎಂದು ಹೇಳಿದರು.
ಬುದ್ದ, ಬಸವ, ಅಂಬೇಡ್ಕರ್ ಆಶಯಗಳನ್ನೊಳಗೊಂಡ ಕುವೆಂಪು ಅವರ ಪಂಚತತ್ವಗಳೇ ವಿಶ್ವಮಾನವ ಧರ್ಮವಾಗಿದೆ. ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಸಾಮಾಜಿಕ ಸಮೀಕ್ಷೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಕ ಸೇರಿದಂತೆ ೫೦೦ಕ್ಕೂ ಹೆಚ್ಚು ಜನ ಧರ್ಮ ಕಾಲಂನಲ್ಲಿ ವಿಶ್ವಮಾನವ ಧರ್ಮ ಎಂದು ನಮೂದಿಸಿದ್ದಾರೆ ಎಂದು ನುಡಿದರು.
ಪತ್ರಕರ್ತ ಚಂದ್ರಶೇಖರ್ ದ.ಕೋ.ಹಳ್ಳಿ ಮಾತನಾಡಿ, ಯಾಚನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದಲ್ಲಿ ಕುವೆಂಪು ಅವರ ಚಿತಾಭಸ್ಮವನ್ನು ಸಂರಕ್ಷಿಸಲಾಗುತ್ತಿದೆ. ಸರಕಾರದ ೧.೫೦ಕೋಟಿ ರೂ ಅನುದಾನದಿಂದ ಸ್ಮಾರಕ ನಿರ್ಮಾಣವಾಗುತ್ತಿದೆ. ಕುವೆಂಪು ಅವರು ಮೈಸೂರಿಗೆ ಹತ್ತಿರದ ಸಂಪರ್ಕ ಹೊಂದಿದ್ದರು. ಮಂಡ್ಯ ಜಿಲ್ಲೆಯ ಜನ ಕುವೆಂಪು ಅವರನ್ನು ಹೆಚ್ಚು ಅಚ್ಚಿಕೊಂಡಿದ್ದರು ಆದ ಕಾರಣ ಹೆಚ್ಚಿನ ಕುವೆಂಪು ಅಭಿಮಾನಿಗಳು ಮಹಾಅಧಿವೇಶನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ವಿಚಾರವಾದಿ ಕೆ.ಮಾಯಿಗೌಡ, ಕದಸಂಸ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಮಲ್ಲೀಗೆರೆ ಅಣ್ಣಯ್ಯ, ಪರಿವರ್ತನ ಸೇವಾ ಸಂಸ್ಥೆಯ ಕಾರ್ಯದರ್ಶಿ ಟಿ.ಡಿ.ನಾಗರಾಜು, ಕ್ರೈಸ್ತ ಸಮುದಾಯದ ಮುಖಂಡ ಥಾಮಸ್ ಬೆಂಜಮಿನ್, ಮುಸ್ಲಂ ಒಕ್ಕೂಟದ ಕಾರ್ಯದರ್ಶಿ ಮಹಮ್ಮದ್ ತಾಹೀರ್ ಇದ್ದರು.




