Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಶ್ರಮಿಕ ಬಲಿ : 4 ಸಂಸ್ಥೆಗಳ ವಿರುದ್ದ ಎಫ್ಐಆರ್

ರಾಜ್ಯ ಕಾಂಗ್ರೆಸ್ ಸರ್ಕಾರ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆ ನೀಡುವ ಕಿರುಕುಳ ನೀಡುವುದು ಮತ್ತು ಬಲವಂತದ ವಸೂಲಾತಿಯನ್ನು ತಡೆಯಲು ಕಾಯ್ದೆ ಜಾರಿಗೊಳಿಸಿದ್ದರೂ ಇಂದಿಗೂ ಸಾಲ ಪಡೆದ ಗ್ರಾಹಕರು ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸರ್ವೇ ಸಾಮಾನ್ಯ  ಸಂಗತಿಯಾಗಿದೆ. ಅಂತಹದ್ದೊಂದು ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮದ್ದೂರು ಪಟ್ಟಣ ಕೆಇಬಿ ಮುಂಭಾಗದ ತಮಿಳು ಕಾಲೋನಿ ನಿವಾಸಿ ತೆನ್ನಅರಸು  (38) ಎಂಬ ಶ್ರಮಿಕ, ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಕಿರುಕುಳ, ನಿಂದನೆ, ಬೈಗುಳವನ್ನು ತಾಳಲಾರದೆ ನಿನ್ನೆ (ಡಿ.15) ಮಧ್ಯಾಹ್ನ 1.20 ರ ಸಮಯದಲ್ಲಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರಮಿಕನ ಸಾವಿಗೆ ನ್ಯಾಯ ಒದಗಿಸಲು ಆಗ್ರಹ

ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕಾಯ್ದೆ ಜಾರಿಗೆ ತಂದಿದ್ದರು, ಬಡವರ ಸಾವು ನಿಂತಿಲ್ಲ, ಆದ್ದರಿಂದ ಕೂಡಲೇ ಮಂಡ್ಯದ ಜಿಲ್ಲಾಧಿಕಾರಿಗಳು ಹಾಗೂ ಮದ್ದೂರು ತಹಸೀಲ್ದಾರ್ ಅವರು ಕೂಡಲೇ ಆತ್ಮಹತ್ಯೆಕ್ಕೀಡಾದ ಕಾರ್ಮಿಕನ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ಕಿರುಕುಳ ನೀಡಿರುವ ಪೈನಾನ್ಸ್ ಕಂಪನಿಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಆ ಮೂಲಕ ಕಾರ್ಮಿಕನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕರ್ನಾಟಕ ಜನಶಕ್ತಿ ಕಾರ್ಯದರ್ಶಿ ಸಿದ್ದರಾಜು ಮಂಡ್ಯ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಮೂಟೆ ಹೊರುವ ಕಾಯಕ ಮಾಡುತ್ತಿದ್ದ ತೆನ್ನ ಅರಸುವಿನ ಆತ್ಮಹತ್ಯೆಗೆ 4 ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿಯ ಕಿರುಕುಳವೇ ಕಾರಣ ಎಂದು ಮೃತನ ಪತ್ನಿ ರೇವತಿ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಐ.ಡಿ.ಎಫ್.ಸಿ ಪಸ್ಟ್ ಬ್ಯಾಂಕ್, ಇಂಡಸ್‌ಲ್ಯಾಂಡ್ ಬ್ಯಾಂಕ್, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅಮಿಟೆಡ್ ಹಾಗೂ ಆರ್.ಬಿ.ಎಲ್ ಬ್ಯಾಂಕ್ ವಿರುದ್ದ ಎಫ್ಐಆರ್ ದಾಖಲಾಗಿದೆ.

ತೆನ್ನಅರಸು ಐ.ಡಿ.ಎಫ್.ಸಿ ಪಸ್ಟ್ ಬ್ಯಾಂಕ್ 49,000/- ರೂ., ಇಂಡಸ್‌ಲ್ಯಾಂಡ್ ಬ್ಯಾಂಕಿನಿಂದ 41,000/,  ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅಮಿಟೆಡ್ ನವತಿಯಿಂದ 60,000 ರೂ.ಗಳನ್ನು ಹಾಗೂ ಆರ್.ಬಿ.ಎಲ್ ಬ್ಯಾಂಕಿನಿಂದ 50,000/- ರೂ. ಸಾಲ ಪಡೆದಿದ್ದರು. ಕೆಲವು ತಿಂಗಳುಗಳ ಕಾಲ ಸಾಲದ ಕಂತುಗಳನ್ನು ಕಟ್ಟಿಕೊಂಡು ಹೋಗುತ್ತಿದ್ದ ಅವರು, ಕಳೆದ 2 ತಿಂಗಳುಗಳಿಂದ ಕೆಲಸವಿಲ್ಲದೇ ಮನೆಯಲ್ಲಿ ಕೂರುವಂತಾಗಿತ್ತು. ಇದರಿಂದಾಗಿ ಅವರಿಂದ ಕಂತುಗಳನ್ನು ಪಾವತಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿ ಫೈನಾನ್ಸ್ ಕಂಪನಿಯವರು ಮನೆ ಬಳಿಗೆ ಬಂದು ಕಿರುಕುಳ ನೀಡಿ, ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದರು. ಇದರಿಂದ ಬೇಸತ್ತ ತೆನ್ನಅರಸು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತನ ಪತ್ನಿ ರೇವತಿ ದೂರಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ