ಕೃಷಿ ಸಚಿವರ ಮುಂದಾಲೋಚನೆಯಿಂದ ಆರಂಭಗೊಂಡಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಶೇ.90 ರಷ್ಟು ಸಂಶೋಧನೆಯ ಫಲ ರೈತರಿಗೆ ತಲುಪುತಿದ್ದು, ಉಳಿದ 10 ಭಾಗದ ಸಂಶೋಧನೆಯ ಫಲಿತಾಂಶವನ್ನು ರೈತರಿಗೆ ತಲುಪಿಸಲು ಪ್ರಯತ್ನಿಸಲಾಗುವುದೆಂದರು.
ದೇಶದ ಕೃಷಿ ಉತ್ಪಾದನೆ ಮೂಲಕ ಆಹಾರ, ಕಾಗದ, ಬಟ್ಟೆ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಉತ್ಪಾದನೆ ಮಾಡುತ್ತಿದ್ದು, ಭವಿಷ್ಯದಲ್ಲಿ ಪೆಟ್ರೋಲ್, ಡಿಸೇಲ್ ಸೇರಿದಂತೆ ಇನ್ನಿತರೆ ಇಂಧನ ಮೂಲಗಳನ್ನು ಉತ್ಪಾದಿಸಲಾಗುವುದು ಎಂದು ತಿಳಿಸಿದರು.
ಭಾರತ ದೇಶ ಕೃಷಿ ಪ್ರದಾನ ರಾಷ್ಟ್ರವಾಗಿದ್ದು ವೈವಿಧ್ಯಮಯ ಮಣ್ಣಿನ ಗುಣ ಹಾಗೂ ಕೃಷಿಗೆ ವಿಫುಲ ಅವಕಾಶವಿದ್ದು, ಇಂದಿನ ಯುವಕರು ಕೃಷಿ ತ್ಯಜಿಸಿ ಗ್ರಾಮೀಣ ಪ್ರದೇಶದಿಂದ ವಲಸೆ ಹೋಗುತ್ತಿರುವುದು ವಿಷಾದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರ ರಾಜಧಾನಿ ದೆಹಲಿಯ ವಾತಾವರಣ ಹದಗೆಟ್ಟಿದ್ದು ಭವಿಷ್ಯದಲ್ಲಿ ಬೆಂಗಳೂರಿಗೂ ದೆಹಲಿಯ ಪರಿಸ್ಥಿತಿ ಮರುಕಳಿಸಲಿದ್ದು, ಸಾವಯವ ಕೃಷಿಗೆ ಇಂದಿನ ರೈತರು ಬದಲಾಗಬೇಕೆಂದು ಕಿವಿಮಾತು ಹೇಳಿದರು.
ಕೃಷಿ ಮೇಳದಲ್ಲಿ 10 ಲಕ್ಷ ರೈತರು ಭಾಗಿ
ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂ ಆವರಣದಲ್ಲಿ ಆರಂಭವಾಗಿರುವ ನೂತನ ಕೃಷಿ ವಿಶ್ವವಿದ್ಯಾಲಯ ಕಳೆದ ಡಿ. 5,6,7 ರಂದು ನಡೆದ ಕೃಷಿ ಮೇಳದಲ್ಲಿ 10 ರಿಂದ 12 ಲಕ್ಷ ಮಂದಿ ರೈತರು ಪಾಲ್ಗೊಳ್ಳುವ ಮೂಲಕ ಈ ಬಾರಿ ಕೃಷಿ ಮೇಳ ಸಂಪೂರ್ಣ ಯಶಸ್ಸು ಕಂಡಿದೆ ಎಂದು ಕೃಷಿ ವಿ.ವಿ.ಯ ವಿಶೇಷಾಧಿಕಾರಿ ಕೆ.ಎಂ.ಹರಿಣಿಕುಮಾರ್ ತಿಳಿಸಿದರು.ಇಂದು ಮಾಜಿ ಪ್ರದಾನಿ ಚರಣ್ ಸಿಂಗ್ ಜನ್ಮದಿನವಾಗಿದ್ದು ವಿಶ್ವ ರೈತ ದಿನಾಚರಣೆಯಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕೃಷಿಮೇಳಗಳಿಗೆ ಹೋಲಿಕೆ ಮಾಡಿದರೆ ಕನಿಷ್ಠ ಎರಡು ಪಟ್ಟು ಅಧಿಕ ಪ್ರಮಾಣದ ಜನತೆ ಪಾಲ್ಗೊಳ್ಳುವ ಮೂಲಕ ವಿಜ್ಞಾನಿಗಳ ಸಂಶೋಧನೆಗೆ ಬೆನ್ನು ತಟ್ಟಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಯುವಕರು ಕೃಷಿ ಕ್ಷೇತ್ರದತ್ತ ಒಲವು ತೋರಬೇಕು, ಸಾವಯವ ಗೊಬ್ಬರ ಉತ್ಪಾದನೆ, ಕೆರೆ ಹೂಳು ಹಾಗೂ ಕೆಮ್ಮಣ್ಣು, ಹಸಿರೆಲೆಗೊಬ್ಬರ ಹಾಗೂ ಜೈವಿಕ ಗೊಬ್ಬರ ಉತ್ಪಾದನೆಗೆ ಒತ್ತು ನೀಡಿ, ಉತ್ಕೃಷ್ಟ ಬೆಳೆಗಳನ್ನು ಬೆಳೆದು ಸ್ವಯಂ ಮಾರುಕಟ್ಟೆ ವೃದ್ದಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ರೈತರು ಸರಳ ಜೀವನ ನಡೆಸಲು ಮುಂದಾಗಬೇಕು, ಮದುವೆ, ಮುಂಜಿ ಇನ್ನಿತರ ಕೌಟುಂಬಿಕ ಕಾರ್ಯಕ್ರಮಗಳನ್ನು ಹೆಚ್ಚು ಆರ್ಥಿಕ ಹೊರೆ ಇಲ್ಲದಂತೆ ನಿಭಾಯಿಸಬೇಕೆಂದು ಕರೆ ನೀಡಿದರು.
ಮಂಡ್ಯ ಜಿಲ್ಲೆಯ ರೈತರು ಸಾಂಪ್ರಾದಾಯಿಕ ಬೆಳೆಗಳಾದ ಭತ್ತ, ಕಬ್ಬಿನ ಬೆಳೆಗೆ ಜೋತು ಬೀಳದೆ ಅಂತರ ಬೆಳೆ ಬೆಳೆಯುವ ಮೂಲಕ ತಮ್ಮ ಆರ್ಥಿಕ ಶಕ್ತಿ ವೃದ್ದಿಸಿಕೊಳ್ಳಲು ಪ್ರಯತ್ನಿಸಬೇಕೆಂದರು.
ಆರು ಅಡಿ ಅಂತರದಲ್ಲಿ ಕಬ್ಬು ಬಿತ್ತನೆ ಮಾಡಿ ಹೆಸರು, ಬೆಂಡೆ, ಈರುಳ್ಳಿ, ಬಿನ್ಸ್ ಮುಂದಾದ ತರಕಾರಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯುವ ಬಗ್ಗೆ ರೈತರಲ್ಲಿ ಆಸ್ತಕಿ ಮೂಡಿಸಲಾಗಿದೆ. ನೆರೆಯ ತಮಿಳುನಾಡಿನ ಕ್ಲೋನ್ಸ್ ಎಂಬ ಹೆಸರಿನ ಸುಧಾರಿತ ಸರ್ವೆ ಗಿಡಗಳು 5 ವರ್ಷಕ್ಕೆ ಕಟಾವಿಗೆ ಬರಲಿದ್ದು, ಪ್ರತಿ ಎಕರೆಗೆ 5 ಲಕ್ಷ ರೂ. ಆದಾಯಗಳಿಸುವ ನಿರೀಕ್ಷೆ ಇದ್ದು ಸದರಿ ಸರ್ವೆ ಗಿಡ ಬೆಳೆಯನ್ನು ನಮ್ಮ ವಿ.ವಿ.ಯಿಂದ ಜಿಲ್ಲೆಯ ರೈತರಿಗೆ ಒದಗಿಸಲಾಗವುದೆಂದು ತಿಳಿಸಿದರು.
ಫಿಲಿಪೈನ್ಸ್ ರಾಷ್ಟ್ರದ ಜೊತೆ ಭತ್ತ ಉತ್ಪಾದನೆ ಸಂಬಂಧ ಒಪ್ಪಂದ ನಡೆದಿದ್ದು ನಮ್ಮ ಹವಾಗುಣಕ್ಕೆ ಹೊಂದುವ ವಿಶಿಷ್ಟ ಭತ್ತದ ತಳಿಗಳನ್ನು ಪ್ರಾತ್ಯಕ್ಷಿಕೆ ಮಾಡಿ ಮುಂದಿನ ದಿನಗಳಲ್ಲಿ ರೈತರಿಗೆ ಒದಗಿಸುವ ಗುರಿ ಹೊಂದಲಾಗಿದೆ ಎಂದರು.
ಭತ್ತ ಮತ್ತು ಮುಸುಕಿನ ಜೋಳದ ಭಿತ್ತನೆ ಬೀಜ ಉತ್ಪಾದನೆಗೆ ವಿಶೇಷ ಆಸಕ್ತಿ ತೋರಿದ್ದು ಶೇ.25ರಷ್ಟು ಹೆಚ್ಚು ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.




