ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮ ಪಂಚಾಯತಿಯಲ್ಲಿ 2023-24ನೇ ಸಾಲಿನ 15ನೇ ಹಣಕಾಸು ಹೆಚ್ಚುವರಿ ಕ್ರಿಯಾಯೋಜನೆಯಲ್ಲಿ ಲಕ್ಷಾಂತರ ರೂ.ದುರುಪಯೋಗವಾಗಿದೆ ಎಂದು ಆರೋಪಿಸಿ ಮಂಗಳವಾರ ಗ್ರಾ.ಪಂ.ಸದಸ್ಯರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಬಿಜಿಪುರ ಹೋಬಳಿಯ ಬೆಳಕವಾಡಿ ಗ್ರಾಮ ಪಂಚಾಯತಿ ಮುಂಭಾಗ ಜಮಾಯಿಸಿದ ಸದಸ್ಯರಾದ ಬಿ.ಎಸ್.ಚೇತನ್ ಕುಮಾರ್, ಕೆ.ಟಿ.ಉಮಾ, ಡಿ.ಮರಿಮಾದಯ್ಯ, ಶ್ರೀನಿವಾಸ್, ಗಿರೀಶ್, ಎಂ.ಎನ್.ಸುಮಾ, ದೊಡ್ಡಸಿದ್ದಮ್ಮ, ಸವಿತಾ, ರೂಪ ಗ್ರಾಮ ಪಂಚಾಯತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆದು ಅಕ್ರಮ ಕಂಡು ಬಂದಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿ ಧಿಕ್ಕಾರ ಕೂಗಿದರು.
ಸದಸ್ಯ ಬಿ.ಎಸ್.ಚೇತನ್ ಕುಮಾರ್ ಮಾತನಾಡಿ 2023-24ನೇ ಸಾಲಿನ 15ನೇ ಹಣಕಾಸು ಹೆಚ್ಚುವರಿ ಕ್ರಿಯಾಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಅಧ್ಯಕ್ಷ ಹಾಗೂ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಕ್ರಮವಾಗಿ ಸುಮಾರು 29 ಲಕ್ಷ ರೂ.ನನ್ನು ಅಕ್ರಮವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ. 2024ರ ಅ.30 ಹಾಗೂ ನ.22ರಂದು ತಾ.ಪಂ.ಇಒ ಮತ್ತು ಜಿ.ಪಂ.ಸಿಇಒ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕ್ರಮವಹಿಸಿಲ್ಲ ಹಾಗೂ ತಪ್ಪಿಸ್ಥರಿಗೆ ಶಿಕ್ಷೆಯಾಗಿಲ್ಲ ಎಂದು ದೂರಿದರು.
ಅಕ್ರಮದಲ್ಲಿ ತೊಡಗಿರುವ ಅಧ್ಯಕ್ಷ ಹಾಗೂ ಹಿಂದಿನ ಪಿಡಿಒ ಅವರನ್ನು ವಿರುದ್ಧ ಕ್ರಮ ವಹಿಸಬೇಕು. ದುರುಪಯೋಗ ವಾಗಿರುವ ಹಣವನ್ನು ವಾಪಸ್ ಜಮ ಮಾಡಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್ ಭೇಟಿ ನೀಡಿ ಮನವಿ ಸ್ವೀಕರಿಸಿ ಗ್ರಾ.ಪಂ.ಸದಸ್ಯರೊಬ್ಬರು ನೀಡಿದ ದೂರನ್ನು ಜಿಲ್ಲಾ ಪಂಚಾಯಿತಿ ಸಿಇಓ ಗೆ ಕಳುಹಿಸಲಾಗಿದ್ದು, ಮೈಸೂರು ಪ್ರಾದೇಶಿಕ ಆಯುಕ್ತರ ಅರೆ ನ್ಯಾಯಕ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುತ್ತದೆ ಎಂದು ತಿಳಿಸಿದರು. ಇದೇ ವೇಳೆ ಸಹಾಯಕ ನಿರ್ದೇಶಕ ಪಾರ್ಥಸಾರಥಿ, ಪಿಡಿಒ ಸಿ.ರುದ್ರಯ್ಯ ಹಾಜರಿದ್ದರು.




