ಪೋಲಿಸ್ ಇಲಾಖೆಯಲ್ಲಿ ನಿಷ್ಠಾವಂತ,ಜನಸ್ನೇಹಿ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಯಾಗಿರುವ ಜಿ.ಎನ್. ಮೋಹನ್ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶಾಸಕ ಡಿ.ಸಿ. ತಮ್ಮಣ್ಣ ಬಣ್ಣಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಭಾನುವಾರ ಸಂಜೆ ಜಿ.ಎನ್. ಮೋಹನ್ ಅಭಿಮಾನಿ ಬಳಗದ ವತಿಯಿಂದ ನಿವೃತ್ತ ಡಿವೈಎಸ್ಪಿ ಜಿ.ಎನ್. ಮೋಹನ್ ಅವರಿಗೆ ಏರ್ಪಡಿಸಿದ್ದ ಅಭಿನಂದನ ಸಮಾರಂಭದಲ್ಲಿ ಮೋಹನ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮೋಹನ್ ಅವರು ಉತ್ತಮ ಅಧಿಕಾರಿಯಂದು ಹೆಸರು ಗಳಿಸಿದ್ದಾರೆ. ನಿವೃತ್ತಿ ಜೀವನದ ಕೊನೆಯಲ್ಲಿ ಅವರು ಮಾಡದಿದ್ದ ಕೆಲಸಗಳಿಗೆ ನೋವು ಅನುಭವಿಸುವಂತಾಯಿತು. ಅವರ ಮನಸ್ಸು ಗಟ್ಟಿ ಮಾಡಿಕೊಂಡು ಎಲ್ಲಾ ದುಃಖಗಳನ್ನು ಸಹಿಸಿ ಬೆಂಕಿಯಲ್ಲಿ ಅರಳಿದ ಹೂವಾಗಿ ಹೊರಬಂದಿದ್ದಾರೆ ಎಂದರು.
ಎಲ್ಲಿ ಸತ್ಯ, ಧರ್ಮ ಇರುತ್ತದೋ ಅಲ್ಲಿ ಜಯ ಇದ್ದೇ ಇರುತ್ತದೆ. ನಡೆ-ನುಡಿಯಲ್ಲಿ ಶುದ್ಧವಾಗಿದ್ದರೆ, ಅವರು ಹುಟ್ಟಿ ಬಂದ ಪರಿಸರದ ಕಾರಣಕ್ಕಾಗಿ, ಅವರು ಜನಸ್ನೇಹಿ ಅಧಿಕಾರಿಯಾಗಿದ್ದಕ್ಕೆ ಜನರೇ ಮೆಚ್ಚಿ ಅಭಿಮಾನದಿಂದ ಅಭಿನಂದಿಸುತ್ತಿದ್ದಾರೆ. ಇಲ್ಲಿ ನೆರೆದಿರುವ ಜನ ಸಾಮಾನ್ಯರಲ್ಲ. ಎಲ್ಲರೂ ಪ್ರಜ್ಞಾವಂತರು. ಮೋಹನ್ ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಇಂದು ಸರ್ಕಾರದ ಕೆಲಸದಲ್ಲಿ ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಸೈ ಎನಿಸಿಕೊಳ್ಳುವುದು ಕಷ್ಟ.ಆದರೆ ಮೋಹನ್ ಅವರು 28 ವರ್ಷಗಳ ತಮ್ಮ ಸೇವೆಯಲ್ಲಿ ಸೈ ಎನಿಸಿಕೊಂಡು ಉತ್ತಮ ಹೆಸರು ಗಳಿಸಿದ್ದಾರೆ. ತನ್ನ ವೃತ್ತಿಗೆ ನ್ಯಾಯ, ಗೌರವ ತಂದು ಮನಸ್ಸಿನಲ್ಲಿ ಅತ್ಯಂತ ಸಮರ್ಥ ಅಧಿಕಾರಿ ಎಂದು ಅವರ ವ್ಯಕ್ತಿತ್ವವನ್ನು ಗಳಿಸಿ ಕೊಂಡಿದ್ದಾರೆ ಎಂದರು .
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ ಮೋಹನ್ ರವರ ಆದರ್ಶದ ಗುಣಗಳೇ ಅವರಿಗೆ ಜನಸ್ನೇಹಿ ಎಂಬ ಗೌರವವನ್ನು ನೀಡಿವೆ ಎಂದರು. ಅಭಿನಂದನೆ ಸ್ವೀಕರಿಸಿದ ಮೋಹನ್ ರವರು ಮಾತನಾಡಿ, ಜೀವನದಲ್ಲಿ ನಾನು ಚಿಕ್ಕವರು, ದೊಡ್ಡವರು, ಮಕ್ಕಳು ಪ್ರತಿಯೊಬ್ಬರಲ್ಲೂ ಕೆಲವೊಂದು ಒಳ್ಳೆಯ ವಿಚಾರಗಳನ್ನು ಕಲಿತಿದ್ದೇನೆ.ಅರಿವಿನ ಕೊರತೆ ಇದ್ದರೆ ಸಮಸ್ಯೆಗಳು ಸರಮಾಲೆಯೇ ಆಗುತ್ತದೆ. ಸರಳವಾಗಿದ್ದರೆ ಎಂತಹ ಸಂದರ್ಭವನ್ನು ಬೇಕಾದರೂ ಸರಳವಾಗಿ ಎದುರಿಸಬಹುದು ಎಂದರು.
ಶಾಸಕ ಎಂ.ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಾಸು ಅಭಿನಂದನಾ ಸಮಾರಂಭ ಉದ್ಘಾಟಿಸಿದರು.ಪ್ರೊ. ಎಂ ಕೃಷ್ಣೇಗೌಡ ಅಭಿನಂದನ ನುಡಿಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಜಯಪ್ರಕಾಶ್ ಗೌಡ,ಜಿ.ಟಿ. ವೀರಪ್ಪ, ನಗರ ನಗರಸಭೆ ಮಾಜಿ ಅಧ್ಯಕ್ಷ ಸಿದ್ದರಾಜು,ಅಮರಾವತಿ ಚಂದ್ರಶೇಖರ್ ಮತ್ತಿತರರಿದ್ದರು.




