ಕರ್ನಾಟಕ ರಾಜ್ಯವು ಪೌಷ್ಟಿಕ ಆಹಾರ ಮತ್ತು ಸಮಗ್ರ ಕೃಷಿಗೆ ವಿಶೇಷ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದು, ಮಕ್ಕಳು, ರೈತರು, ವಿಶ್ವವಿದ್ಯಾಲಯಗಳು ಹಾಗೂ ಮಾರುಕಟ್ಟೆ ಉಪಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ ಮೂಲಕ ಶಿಕ್ಷಣ, ನಾವೀನ್ಯತೆ ಮತ್ತು ಸ್ಥಿರ ಆರ್ಥಿಕ ಬೆಳವಣಿಗೆಯನ್ನು ಒಗ್ಗೂಡಿಸಿದ ಮಾದರಿಯನ್ನು ರೂಪಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಇಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ(Kristu Jayanti Deemed to be University ) ಸಹಯೋಗದಲ್ಲಿ ಆಯೋಜಿಸಲಾದ ಸಾಂಪ್ರದಾಯಿಕ ಆಹಾರ ಮೇಳ ಮತ್ತು ಸ್ಪರ್ಧೆ – ಸಂಸ್ಕೃತಿ ಸ್ವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಪೌಷ್ಟಿಕ ಆಹಾರ ಬೆಳೆಗಳ ಪರಿಚಯ ನೀಡುವ ಅಗತ್ಯವನ್ನು, ವಿಶೇಷವಾಗಿ ಸಿರಿಧಾನ್ಯಗಳ ಮಹತ್ವವನ್ನು ಮತ್ತು ಬೆಳೆಯಿಂದ ಊಟದ ತಟ್ಟೆಯವರೆಗೆ ಸಂಪೂರ್ಣ ಪಯಣವನ್ನು ತಿಳಿಸುವುದು ಮುಖ್ಯ ಎಂದು ಹೇಳಿದರು.
“ಕೃಷಿ, ಪೌಷ್ಠಿಕ ಆಹಾರ ಬೆಳೆಗಳು ಮತ್ತು ಅವುಗಳ ಸೇವನೆ ಬಗ್ಗೆ ಆಸಕ್ತಿ ಮಕ್ಕಳಿಂದಲೇ ಆರಂಭವಾಗುತ್ತದೆ. ಮಕ್ಕಳು ಪೌಷ್ಟಿಕ ಆಹಾರದ ಮಹತ್ವವನ್ನು ಅರಿತುಕೊಂಡಾಗ, ಅವರು ತಮ್ಮ ಕುಟುಂಬ ಮತ್ತು ಸಮುದಾಯವನ್ನು ಪ್ರಭಾವಿತಗೊಳಿಸಬಲ್ಲರು. ಅವರು ಆರೋಗ್ಯಕರ ಜೀವನಶೈಲಿಯ ರಾಯಭಾರಿಗಳಾಗುತ್ತಾರೆ. ಮಕ್ಕಳು ಆಹಾರದ ರುಚಿಯಷ್ಟೇ ಅಲ್ಲ, ಅದರ ಮೌಲ್ಯವನ್ನೂ ಅರಿಯಬೇಕು.” ಎಂದು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳನ್ನುದ್ದೇಶಿಸಿ ಹೇಳಿದರು.
ಜಾಗೃತಿ, ಶಿಕ್ಷಣ ಮತ್ತು ಮಾರುಕಟ್ಟೆ ತಂತ್ರಗಳನ್ನು ಒಗ್ಗೂಡಿಸುವ ಅಗತ್ಯವನ್ನು ಕೂಡ ತಮ್ಮ ಭಾಷಣದಲ್ಲಿ ವಿವರವಾಗಿ ಹೇಳಿದರು. “ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಹಿಡಿದು ಅವುಗಳನ್ನು ಸಂಸ್ಕರಣೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆಗೆ ತಲುಪಿಸುವವರೆಗೂ ಪ್ರತಿಯೊಂದು ಹಂತವೂ ಸೂಕ್ತವಾಗಿ ನಿರ್ವಹಿಸಬೇಕು. ಸರಿಯಾದ ಬ್ರಾಂಡಿಂಗ್ ಮಾಡಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ, ಇದರಿಂದ ರೈತರಿಗೆ ಹೆಚ್ಚಿನ ಆದಾಯ ದೊರೆಯುತ್ತದೆ ಎಂದು ಹೇಳಿದರು.
“ನಾವು ಕೇವಲ ಬೆಳೆ ಬೆಳಸಿ ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ಯುವುದರಿಂದ ರೈತರಿಗೆ ಸಿಗುವ ಲಾಭ ಸೀಮಿತವಾಗುತ್ತದೆ. ಮೌಲ್ಯವರ್ಧನೆಯ ಮೂಲಕ ಮಾರಾಟ ಮಾಡಿದಾಗ, ರೈತರಿಗೆ ಹೆಚ್ಚು ಬೆಲೆ ಸಿಗುವ ಅವಕಾಶ ಸಿಗುತ್ತದೆ. ಜೊತೆಗೆ ಗ್ರಾಹಕರಿಗೂ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ದೊರೆಯುತ್ತದೆ ಎಂದರು.
“ರೈತರು ಆರ್ಥಿಕ ಸವಾಲುಗಳನ್ನು ಎದುರಿಸುತ್ತಾರೆ. ಸರ್ಕಾರ, ವಿಶ್ವವಿದ್ಯಾಲಯಗಳು ರೈತರೊಂದಿಗೆ ಕೈಜೋಡಿಸಿ ಈ ಅಂತರವನ್ನು ಕಡಿಮೆ ಮಾಡಲು ಕಾರ್ಯನಿರ್ವಹಿಸುತ್ತಿವೆ. ಕೃಷಿ, ಶಿಕ್ಷಣ ಮತ್ತು ಮಾರುಕಟ್ಟೆ ನಡುವಿನ ಬಲವಾದ ಸಂಪರ್ಕದಿಂದ ನಮ್ಮ ಆಹಾರ ವ್ಯವಸ್ಥೆ ಸ್ಥಿರವಾಗುತ್ತದೆ, ರೈತರಿಗೆ ಬೆಂಬಲ ಸಿಗುತ್ತದೆ ಮತ್ತು ಮಕ್ಕಳು ಪೌಷ್ಟಿಕತೆಯ ಮಹತ್ವವನ್ನು ಅರಿತು ಬೆಳೆಯುತ್ತಾರೆ.” ಇಂದಿನ ಈ ಕಾರ್ಯಕ್ರಮವು ಮಾಹತ್ವಪೂರ್ಣವಾಗಿ ಮಾತ್ರವಲ್ಲದೇ ಅತ್ಯಂತ ಸಂವಹನಾತ್ಮಕವೂ ಆಗಿದೆ. ಮಕ್ಕಳಿಗೆ ಬೆಳೆ ಬೆಳೆಸುವಿಕೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಬಗ್ಗೆ ಪ್ರಾಯೋಗಿಕ ಪ್ರದರ್ಶನಗಳನ್ನು ನೀಡಲಾಯಿತು. ಮಕ್ಕಳಿಗೆ ವೀಕ್ಷಿಸಲು, ಸ್ಪರ್ಶಿಸಲು ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಿತು.
“ಪ್ರಾಯೋಗಿಕ ಕಲಿಕೆ ಅತ್ಯಗತ್ಯ”
“ಇಂದು ಮಕ್ಕಳಿಗೆ ಪ್ರಾಯೋಗಿಕವಾಗಿ ಕಲಿಕೆ ಅಗತ್ಯ. ಇದರಿಂದ ಮಕ್ಕಳು ಆರೋಗ್ಯಕರವಾಗಿರುವ ಜೊತೆಗೆ ಸ್ಥಳೀಯ ಕೃಷಿಗೆ ಸಹಕಾರ ನೀಡುವ ವಿಧಾನವನ್ನು ತಿಳಿದುಕೊಳ್ಳುತ್ತಾರೆ. ಬೆಳೆಗಳು ಹೇಗೆ ಬೆಳೆಯುತ್ತವೆ, ಸಂಸ್ಕರಿಸಲಾಗುತ್ತವೆ ಮತ್ತು ಮಾರುಕಟ್ಟೆಗೆ ತಲುಪುತ್ತವೆ ಎಂಬುದನ್ನು ಅರಿತುಕೊಂಡಾಗ ಅವರ ಜ್ಞಾನವು ಕುಟುಂಬ ಮತ್ತು ಭವಿಷ್ಯದ ಸಮುದಾಯವನ್ನು ಪ್ರಭಾವಿಸುತ್ತದೆ.” ಎಂದರು.
ಮೇಳದಲ್ಲಿ ವಿದ್ಯಾರ್ಥಿಗಳು ಹಾಗೂ ರೈತರ ಉದ್ಯಮಶೀಲತೆಯನ್ನೂ ಪ್ರದರ್ಶಿಸಲಾಯಿತು. ಸಾಂಪ್ರದಾಯಿಕ ಬೆಳೆಗಳಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು ನವೀನತೆ ಮತ್ತು ಪರಂಪರೆಯ ಸಂಯೋಜನೆಯನ್ನು ತೋರಿಸಿವೆ.
“ಸ್ಥಳೀಯ ಪರಂಪರೆ ಬೆಳೆಗಳನ್ನು ಉತ್ತೇಜಿಸುತ್ತಾ ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳು ನಾವೀನ್ಯತೆ ತರುವಂತೆ ಪ್ರೋತ್ಸಾಹಿಸುವುದು ನಮ್ಮ ಗುರಿ,” “ಕೃಷಿಯ ಸಂಪೂರ್ಣ ವ್ಯವಸ್ಥೆಯನ್ನು ಮಕ್ಕಳು ಮತ್ತು ಯುವ ಸಮುದಾಯ ಅರಿತುಕೊಂಡರೆ, ಅವರು ಬದಲಾವಣೆಯ ಏಜೆಂಟರಾಗಬಹುದು ಎಂದು ಕೃಷಿ ಸಚಿವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಜರಿದ್ದು, ಉಪಕ್ರಮಕ್ಕೆ ಬೆಂಬಲ ಮತ್ತು ವಿಶ್ವಾಸಾರ್ಹತೆ ನೀಡಿದರು. ಕರ್ನಾಟಕ ಸರ್ಕಾರದ ಕೃಷಿ ನಿರ್ದೇಶಕರಾದ ಡಾ. ಪುತ್ರ ಜಿ.ಟಿ., ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಅಗಸ್ಟಿನ್ ಜಾರ್ಜ್, ಹಾಗೂ ಕೃಷಿ ಆಯುಕ್ತರಾದ ವೈ.ಎಸ್. ಪಾಟೀಲ್, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣರೆಡ್ಡಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.




