ಕೆಲವು ತತ್ವಗಳನ್ನು ಆಧರಿಸಿ ಕೇಂದ್ರದ ಬಜೆಟ್ ಮಂಡಿಸಲಾಗಿದೆ. ಅಸ್ಪಷ್ಟತೆಗಿಂತ ಕ್ರಿಯೆ, ಆಡಂಬರಕ್ಕಿಂತ ಸುಧಾರಣೆಗೆ, ಜನಪ್ರಿಯತೆಗಿಂತ ಜನ ಹಿತಕ್ಕೆ ಒತ್ತು ನೀಡಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ನಾರಾಯಣ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ತವ್ಯ ಭವನದಲ್ಲಿ ಮಂಡನೆಯಾದ ಮೊದಲ ಬಜೆಟ್ ಇದಾಗಿದೆ. ಆತ್ಮ ನಿರ್ಭರ ಭಾರತ್, ಸ್ವಾವಲಂಭಿ ವಿಕಸಿತ ಭಾರತವನ್ನು ಗುರಿಯಾಗಿಸಿಕೊಂಡು, ಉದ್ಯೋಗ ಸೃಷ್ಠಿ, ಕೃಷಿ ಉತ್ಪಾದನೆ, ನಾಗರೀಕರು ಕೊಳ್ಳುವ ಉದ್ದೇಶದಿಂದ ಬಜೆಟ್ ತಯಾರಿಸಲಾಗಿದೆ. ಆರ್ಥಿಕ ಕ್ಷೇತ್ರಕ್ಕೆ ವೇಗನೀಡುವುದು, ನಾಗರೀಕ ಆಶಯಗಳನ್ನು ಈಡೇರಿಸುವುದು, ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸುವ ೩ ಭಾಗವಾಗಿ ವಿಂಗಡಿಸಲಾಗಿದೆ ಎಂದರು.
ಪ್ರತಿನಿತ್ಯ ಹೆಚ್ಚಿನ ಸುಧಾರಣೆ ತರಲು ೩೫೦ ಅಂಶಗಳ ಆಧಾರದಲ್ಲಿ ಬಜೆಟ್ ಮಂಡಿಸಲಾಗಿದೆ. ನಿಯಂತ್ರಕ ಸುಧಾರಣೆಗಳ ಸಮಿತಿ, ಜನ್ವಿಶ್ವಾಸ್ ಕಾಯ್ದೆ, ಬ್ಯಾಂಕಿಂಗ್ ಸುಧಾರಣೆ, ಆರ್ಥಿಕ ಬೆಳವಣಿಗೆ ಮತ್ತು ಹಣಕಾಸು ಶಿಸ್ತು, ಮಧ್ಯಮವರ್ಗದ ಸಬಲೀಕರಣ, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಠಿ, ಗುಣಮಟ್ಟದ ಶಿಕ್ಷಣದ ಮೂಲಕ ಯುವಶಕ್ತಿ ಸಬಲೀಕರಣ, ಸಣ್ಣ ಉದ್ಯಮಗಳ ಸಾಮರ್ಥ್ಯದ ಅನಾವರಣ, ಬೃಹತ್ ಪ್ರಮಾಣದ ಉತ್ಪಾದನಾ ವಿಸ್ತರಣೆ, ಮೂಲ ಸೌಕರ್ಯ ಆಧಾರಿತ ಬೆಳವಣಿಗೆ ಸೇರಿದಂತೆ ಹಲವು ಅಭಿವೃದ್ಧಿ ಸಹಿತ ಸುಧಾರಣೆಗಳ ಅಂಶ ಬಜೆಟ್ನಲ್ಲಿದೆ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದ ವಾಣಿಜ್ಯ ಸಚಿವರೊಂದಿಗೆ ಮಾತನಾಡಿದ್ದಾರೆ. ಆದರೆ ರಾಜ್ಯ ಸರಕಾರ ಸ್ಪಂಧಿಸಿದರೆ ಕೈಗಾರಿಕೆ ತರಲು ಸಾಧ್ಯವಾಗುತ್ತದೆ. ಕೈಗಾರಿಕೆ ಸ್ಥಾಪಿಸುವ ವ್ಯಕ್ತಿತ್ವ, ಶಕ್ತಿ ಕುಮಾರಸ್ವಾಮಿ ಅವರಲ್ಲಿದೆ ಎಂದು ಉತ್ತರ ನೀಡಿದರು.
ತೆರಿಗೆ ಹಂಚಿಕೆಯನ್ನು ಸಂವಿಧಾನಿಕ ಸಂಸ್ಥೆಯಾದ ಹಣಕಾಸು ಆಯೋಗ ಮಾಡಲಿದೆ. ಈ ಸಂಸ್ಥೆ ಪಾರದರ್ಶಕ ಸಂಸ್ಥೆಯಾಗಿದ್ದು, ಸರಕಾರದ ಹಸ್ತಕ್ಷೇಪವಿಲ್ಲ, ಎಲ್ಲ ರಾಜ್ಯ ಸರಕಾರವನ್ನು ವಿಶ್ವಾಸಕ್ಕೆ ಪಡೆದು ತೆರಿಗೆ ಹಂಚಲಾಗುತ್ತದೆ. ೧೬ನೇ ಆಯೋಗದ ಹಂಚಿಕೆಯಂತೆ ಶೇ.೦.೫೦ರಷ್ಟು ಹಂಚಿಕೆಯಲ್ಲಿ ಹೆಚ್ಚಳವಾಗಿರುವುದು ಸಂತಸದ ವಿಷಯ ಎಂದು ಹೇಳಿದರು.
ಮೆಟ್ರೋ ದರ ಏರಿಕೆ ಮಾಡಲು ಬೆಂಗಳೂರು ದೇಶದ ನಂಬರ್ ೧ ನಗರವಲ್ಲ. ಆಯಾ ನಗರದ ರಾಜ್ಯದ ಸದಸ್ಯರುಳ್ಳ ಸದಸ್ಯರಿಂದಲೇ ಮೆಟ್ರೊ ದರ ನಿಗದಿಯಾಗಲಿದೆ. ನಗರದಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ಆದ್ದರಿಂದ ಮೆಟ್ರೊ, ಸಾರಿಗೆ, ರೈಲ್ವೆಗೆ ಸರಕಾರ ಆದ್ಯತೆ ನೀಡುತ್ತಿಲ್ಲ. ಜನರಿಗೆ ಕೈಗೆಟುವ ದರ ನಿಗದಿ ಮಾಡುವ ನಿಟ್ಟಿನಲ್ಲಿ ಈಗಿರುವ ದರಕ್ಕೆ ಸಬ್ಸಿಡಿ ಘೋಷಿಸಿ ಶೇ.೫೦ರಷ್ಟು ಇಳಿಸಬೇಕು. ನಿರ್ವಹಣೆ ಕಷ್ಟವಾದಲ್ಲಿ ಬೆಂಗಳೂರು ನಗರವನ್ನು ಕೇಂದ್ರಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಇಂಡುವಾಳು ಎಸ್.ಸಚ್ಚಿದಾನಂದ, ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ಎಸ್.ಪಿ.ಸ್ವಾಮಿ ಇತರರಿದ್ದರು.




