Wednesday, November 18, 2026

ಪ್ರಾಯೋಗಿಕ ಆವೃತ್ತಿ

ಒಳ‌ ಮೀಸಲಾತಿ ಅಳವಡಿಸಿ ನೇಮಕಾತಿ ಮಾಡದಿದ್ದರೆ ಉಗ್ರ ಹೋರಾಟ : ರವಿಕುಮಾರ್ ಎಚ್ಚರಿಕೆ

ರಾಜ್ಯ ಸರ್ಕಾರ ಹೊಸದಾಗಿ 56 ಸಾವಿರ ಹುದ್ದೆಗಳ ಭರ್ತಿ ಮಾಡುವಾಗ ಒಳ‌ ಮೀಸಲಾತಿ ಜಾರಿಗೊಳಿಸಿ ನೇಮಕಾತಿ ಮಾಡದಿದ್ದರೆ ರಾಜ್ಯ ವ್ಯಾಪ್ತಿ ಮಾದಿಗ ಸಮುದಾಯ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ಶಂಭೂನಹಳ್ಳಿ ರವಿಕುಮಾರ್ ಎಚ್ಚರಿಸಿದರು.

ರಾಜ್ಯ ಸರ್ಕಾರವು 56 ಸಾವಿರ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಒಳ ಮೀಸಲಾತಿ ಜಾರಿಗೊಳಿಸದೆ ನೇಮಕಾತಿಗೆ ಮುಂದಾಗಿರುವುದು ಮಾದಿಗ ಸಮುದಾಯಕ್ಕೆ ಮರಣ ಶಾಸನವಾಗಿ ಪರಿಣಮಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು‌.

ಮಾದಿಗ ಸಮುದಾಯದ ಉದ್ಯೋಗ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ ಅವಕಾಶ ಇಲ್ಲದಂತಾಗಿದೆ. ಸಂವಿಧಾನ ಜಾರಿಗೊಂಡ ದಿನದಿಂದಲೂ ಈವರೆಗೂ ಸಮುದಾಯದವರಿಗೆ ಅವಕಾಶ ಸಿಕ್ಕಿಲ್ಲ. ಎಲ್ಲವೂ ಬಲಿತ ದಲಿತ ಸಮುದಾಯದ ಪಾಲಾಗಿದೆ. ಕಳೆದ 35 ವರ್ಷಗಳಿಂದಲೂ ಒಳಮೀಸಲಾತಿಗಾಗಿ ಹೋರಾಟ ನಡೆಸಿದರ ಪರಿಣಾಮ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ಇದರ ಆಧಾರದ ಮೇರೆಗೆ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ರಚಿಸಿ ವರದಿ ತರಿಸಿಕೊಂಡು ಅದನ್ನು ಪರಿಷ್ಕರಣೆ ಮಾಡಿ ಸದನದಲ್ಲಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆದಿದೆ. ಆದರೆ ಸಚಿವ‌ ಸಂಪುಟದ ಸಚಿವರು ಮಾದಿಗ ಸಮುದಾಯದ ಹೋರಾಟವನ್ನು ಗಾಳಿಗೆ ತೂರಿ ಮಸೂದೆ ತಿರಸ್ಕರಿಸಿ ಕೇವಲ ಒಂದು ಸಮುದಾಯದ ಹಿತ ಕಾಯಲು ಮುಂದಾಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಗೃಹಮಂತ್ರಿ ಡಾ.ಜಿ.ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಮಂತ್ರಿ ಪ್ರಿಯಾಂಕ ಖರ್ಗೆ ಅವರೆಲ್ಲರೂ ತಮ್ಮ ಪ್ರಭಾವ ಬೀರಿ ಒಳ ಮೀಸಲಾತಿಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಸಚಿವ ಸಂಪುಟ ಸಭೆ ಕರೆದು ಹೊಸ ನೇಮಕಾತಿಗೆ ಒಳಮೀಸಲಾತಿಯನ್ನು ಜಾರಿಗೊಳಿಸದೆ ನೇಮಕಾತಿಗೆ ಮುಂದಾಗಿದೆ. ಒಂದು ವೇಳೆ ಒಳಮೀಸಲಾತಿ ಜಾರಿಗೊಳಿಸದಿದ್ದರೆ
ಇಡೀ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಮಾದಿಗ ಸಮುದಾಯ ಉಗ್ರ ಪ್ರತಿಭಟನೆ ನಡೆಸುವ ಮುಖಾಂತರ ಧಂಗೆ ಏಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕಡಬಾ ಪುಟ್ಟರಾಜು, ಎಸ್.ರಾಚಯ್ಯ, ಟೌನ್ ಚಂದ್ರು, ಆಟೋ ಮಲ್ಲೇಶ್, ಪಾಂಡವಪುರ ಮಲ್ಲಿಕಾರ್ಜುನ್, ಚಿಕ್ಕಾಯಿರಹಳ್ಳಿ ರಾಜೇಶ್, ಸಿ.ಎಸ್.ಶಿವಯ್ಯ, ಬಸ್ತಿಹಳ್ಳಿ ಯೋಗೇಶ್, ವದೇಸಮುದ್ರ ಮೋಹನ್ ಕುಮಾರ್, ಪಾಂಡವಪುರ ತುಕರಾಮ್, ಶಶಿಧರ, ಮುರಳೀಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ