Sunday, November 22, 2026

ಪ್ರಾಯೋಗಿಕ ಆವೃತ್ತಿ

ಭಾಷಣಗಳಿಂದ ಮಂಡ್ಯ ಅಭಿವೃದ್ದಿ ಆಗಲ್ಲ ; HDK ಗೆ ಟಾಂಗ್ ನೀಡಿದ ಶಾಸಕ ರವಿಕುಮಾರ್

ಕೆಲವರು ಕೇವಲ ಭಾಷಣ ಅಥವಾ ಪ್ರೆಸ್ ಮೀಟ್ ಗೆ ಸೀಮಿತರಾಗಿದ್ದಾರೆ. ನಮ್ಮನ್ನು ಬೈಯುವುದರಿಂದ ಅಥವಾ ಭಾಷಣ ಮಾಡುವುದರಿಂದ ಅಭಿವೃದ್ದಿ ಸಾಧ್ಯವಿಲ್ಲ, ಇಚ್ಚಾಶಕ್ತಿಯಿದ್ದರೆ ಮಾತ್ರ ಅಭಿವೃದ್ದಿ ಸಾಧ್ಯವೆಂದು ಕೇಂದ್ರ ಸಚಿವ ಹಾಗೂ ಸಂಸದ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ರವಿಕುಮಾರ್ ಗೌಡ ಪರೋಕ್ಷವಾಗಿ ಟಾಂಗ್ ನೀಡಿದರು.

ಮಂಡ್ಯ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೈಗುಳ ಹಾಗೂ ಭಾಷಣದಿಂದ ರಸ್ತೆಗೆ ಟಾರ್ ಬರಲ್ಲ, ಸ್ಕೂಟರ್ ಮತ್ತು ಟಿಲ್ಲರ್ ವಿತರಿಸಲು ಸಾಧ್ಯವಿಲ್ಲ, ಇಚ್ಚಾಶಕ್ತಿಯ ಗುರಿಯಿದ್ದರೆ ಅಭಿವೃದ್ದಿ ಸಾಧ್ಯವಾಗಲಿದೆ ಎಂದರು.

ಹೆಚ್.ಡಿ.ಕೆ ಕೇಂದ್ರದ ಕೈಗಾರಿಕಾ ಸಚಿವರಾಗಿದ್ದಾರೆ. ಚಲುವರಾಯಸ್ವಾಮಿ ರಾಜ್ಯದ ಕೃಷಿ ಸಚಿವರಾಗಿದ್ದಾರೆ. ಜಿಲ್ಲೆಯ ಯುವ ಜನರಿಗೆ ಉದ್ಯೋಗ ನೀಡುವುದು ಇವರಿಬ್ಬರ ಹೊಣೆಗಾರಿಕೆ. ಇವರಿಬ್ಬರೂ ಸಚಿವರು ನಮ್ಮ ಉಸ್ತುವಾರಿ ಸಚಿವರು  ಹೊಣೆಗಾರಿಕೆ ಹೊತ್ತು 100 ಎಕರೆ ಜಮೀನನ್ನು ಕೈಗಾರಿಕೆಗೆ ಘೋಷಿಸಿದ್ದಾರೆ. ಅದೇ ರೀತಿ ಕುಮಾರಸ್ವಾಮಿ ಅವರು ಯಾವ ಕಾರ್ಖಾನೆಯನ್ನಾದರೂ ತರಲು ಪ್ರಯತ್ನಿಸಲಿ ನಾವು ಗುದ್ದಲಿಪೂಜೆಗೆ ಬಂದು ಸಹಕರಿಸುತ್ತೇವೆಂದು ವ್ಯಂಗ್ಯವಾಡಿದರು.

ಶಾಸಕ ರವಿಕುಮಾರ್ ಗೌಡ ಭಾಷಣದ ತರುವಾಯ ಮಾತನಾಡಿದ ಉಸ್ತುವಾರಿ ಸಚಿವರು ಹೆಚ್.ಡಿ.ಕೆ ಟೀಕಿಸುವುದನ್ನು ಮರೆಯಲಿಲ್ಲ, ಕೆಲವರು 5 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಏನೂ ಮಾಡಲು ಮುಂದಾಗಲಿಲ್ಲ, ಈಗ ಸೈಕಲ್ ಹೊಡೆಯಲು ಪ್ರಯತ್ನ ಪಡುತ್ತಿದ್ದಾರೆ. ನಾವು ಸುಮ್ಮನೆ ಇದ್ದರೆ ಸಾಧ್ಯವಿಲ್ಲ. ಸದಾ ಸುಳ್ಳು ಹೇಳಲು ಸಾಧ್ಯವಿಲ್ಲ ಎಂಬ ಅರಿವು ಅವರಿಗೆ ವ್ಯಕ್ತವಾಗಿದೆ. ಆ ಮೂಲಕವಾದರೂ ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿ, ಅವರೂ 10 ರೂಪಾಯಿ ಕೆಲಸ ಮಾಡಿದರೂ ನಾವು ಅವರನ್ನು ಗೌರವಿಸುತ್ತೇವೆಂದು ಮೂದಲಿಸಿದರು.

ಮಧ್ಯವರ್ತಿಗಳ ಹಾವಳಿ ಇಲ್ಲದೇ ಸವಲತ್ತು ವಿತರಣೆ

ಕಳೆದ ಎರಡೂವರೆ ವರ್ಷಗಳ ನಮ್ಮ ಸರ್ಕಾರದ ಅವಧಿಯಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ಸೂಕ್ತ ಸವಲತ್ತು ವಿತರಿಸಲಾಗಿದೆ, ಅಲೆದಾಟ ಹಾಗೂ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸವಲತ್ತು ವಿತರಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಅಧಿಕಾರದ ಮಾದರಿ ಎಂದು ಶಾಸಕ ರವಿಕುಮಾರ್ ಗೌಡ ತಿಳಿಸಿದರು.

50 ಮಂದಿ ವಿಶೇಷ ಚೇತನರಿಗೆ ಇಂದು ತ್ರಿ ಚಕ್ರ ವಾಹನ ವಿತರಿಸಲಾಗುತ್ತಿದೆ, ಇದುವರೆಗೆ 200 ಮಂದಿಗೆ ವಿತರಿಸಲಾಗಿದ್ದು, ಲೆಕ್ಕವಿಲ್ಲದಷ್ಟು ಹೊಲಿಗೆ ಯಂತ್ರ ವಿತರಣೆ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಯಿಸಲಾಗಿದೆ ಎಂದು ವಿವರಿಸಿದರು.

ಎರಡೂವರೆ ವರ್ಷಗಳ ಅವಧಿಯಲ್ಲಿ ಸುಮಾರು 150 ಮಂದಿಗೆ ಕಾರುಗಳನ್ನು ವಿತರಿಸಲಾಗಿದ್ದು 45 ಕೋಟಿ ರೂ. ವೆಚ್ಚದ ಸವಲತ್ತು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಮುಂದಿನ 1 ತಿಂಗಳೊಳಗೆ ಕ್ಷೇತ್ರದಲ್ಲಿ ಐ.ಟಿ ಕಾರ್ಖಾನೆ ಆರಂಭಿಸಿ  ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಲಾಗಿದ್ದು, ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಮೀನು ಮೀಸಲಿಡಲಾಗಿದ್ದು, ಗುಂಡಿ ಮುಕ್ತ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ರಾಜ್ಯ ಒಕ್ಕಲಿಗರ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ನಿಗಮದಿಂದ ಜಿಲ್ಲೆಯಲ್ಲಿ 234 ಸ್ವಯಂ ಉದ್ಯೋಗಿಗಳಿಗೆ ನೇರ ಸಾಲ, 175 ಕೊಳವೆ ಬಾವಿ, 77 ಸ್ವಾವಲಂಭಿ ಸಾರಥಿ ವಾಹನ ಸಾಲ, 14 ಜನರಿಗೆ ಅರಿವು ಶೈಕ್ಷಣಿಕ ಸಾಲ, 655 ಫಲಾನುಭವಿಗಳಿಗೆ 15 ಕೋಟಿ ರೂ. ವೆಚ್ಚದ ವಿವಿಧ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬೋರೇಗೌಡ ಮಾತನಾಡಿ ಅರ್ಹರಿಗೆ ಸೂಕ್ತ ಸೌಲಭ್ಯಗಳನ್ನು ವರ್ಗ ರಹಿತವಾಗಿ ವಿತರಿಸಿ ಸ್ವಾವಲಂಬಿ ಬದುಕಿಗೆ ಆಸರೆಯಾಗುವ ಉದ್ದೇಶದಿಂದ 10 ಇಲಾಖೆಗಳ 450 ಮಂದಿ ಫಲಾನುಭವಿಗಳಿಗೆ 44.75 ಕೋಟಿ ರೂ. ವೆಚ್ಚದ ಸಲಕರಣೆಗಳನ್ನು  ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ವೇದಿಕೆಯಲ್ಲಿ ರಾಜ್ಯ ಕೈಗಾರಿಕಾ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್,  ಪೌರಾಡಳಿತ ಇಲಾಖೆಯ ನಿರ್ದೇಶಕ ಅರುಣ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ, ಕಾರ್ಯಪಾಲಕ ಅಭಿಯಂತರ ಪ್ರತಾಪ್, ಪೌರಾಯುಕ್ತೆ ಪಂಪಾಶ್ರೀ, ನಗರಸಭೆ ಮಾಜಿ ಸದಸ್ಯರಾದ ಶ್ರೀಧರ್, ನಹೀಂ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ