ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ನವ ದಂಪತಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ದಂಪತಿಗಳ 2 ವರ್ಷದ ಹೆಣ್ಣುಮಗು ಬದುಕುಳಿದಿದೆ.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಹೊಸಕೋಟೆ ಗ್ರಾಮದ ದರ್ಶನ್ (29) ಹಾಗೂ ಆತನ ಪತ್ನಿ ಎನ್.ಎಲ್.ದಿವ್ಯ(25) ಆತ್ಮಹತ್ಯೆ ಮಾಡಿಕೊಂಡವರು.
ಬೂಕನಕೆರೆ ಹೋಬಳಿಯ ನಾಟನಹಳ್ಳಿ ಗ್ರಾಮದ ಲಕ್ಷ್ಮಣಗೌಡ ಮತ್ತು ಸುನಂದ ದಂಪತಿಗಳ ಪುತ್ರಿ ದಿವ್ಯಾಳನ್ನು ಕಳೆದ ಮೂರು ವರ್ಷಗಳ ಹಿಂದೆ ತಾಲೂಕಿನ ಬೂಕನಕೆರೆ ಹೋಬಳಿಯ ಹೊಸಕೋಟೆ ಗ್ರಾಮದ ಗಣೇಶಗೌಡ ಮತ್ತು ಮಂಜುಳಾ ದಂಪತಿಗಳ ಪುತ್ರ ದರ್ಶನ್ ಗೆ ಮದುವೆ ಮಾಡಿಕೊಡಲಾಗಿತ್ತು. ದರ್ಶನ್-ದಿವ್ಯ ದಂಪತಿಗಳಿಗೆ ಎರಡು ವರ್ಷದ ಹೆಣ್ಣು ಮಗುವಿದ್ದು ಅದೃಷ್ಟವಶಾತ್ ಮಗು ಬದುಕುಳಿದಿದೆ, ದಂಪತಿಗಳ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಟೌನ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.




